ಪ್ರಸಾದ್ ಅಬ್ಬಯ್ಯ ಮನೆಗೆ ಟಿಪ್ಪು ಹೆಸರು ಇಟ್ಟುಕೊಳ್ಳಲಿ, ಮೈಸೂರು ವಿಮಾನ ನಿಲ್ದಾಣಕ್ಕೆ ಬೇಡ: ಸಿ.ಟಿ ರವಿ
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಅವರು ಪ್ರಸಾದ್ ಅಬ್ಬಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು, ಡಿ.17: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಹೆಸರು ಇಡುವ ಬಗ್ಗೆ ರಾಜಕೀಯ ವಲಯದಲ್ಲಿ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಟಿಪ್ಪು (Tipu Sultan) ಹೆಸರಿನ ಮೇಲೆ ಒಲವು ತೋರಿಸಿದ್ದು ಬಿಜೆಪಿ ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar) ಹೆಸರಿಡುವಂತೆ ಒತ್ತಾಯಿಸಿದೆ. ಇದರ ನಡುವೆ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ (CT Ravi) ಪ್ರತಿಕ್ರಿಯೆ ನೀಡಿದ್ದು ಅಬ್ಬಯ್ಯ ಅವರೇ ನಿಮ್ಮ ಮನೆಗೆ ಬೇಕಾದ್ರೆ ಟಿಪ್ಪು ಹೆಸರು ಇಟ್ಟುಕೊಳ್ಳಿ, ನಾವು ನಿಮ್ಮ ಊರಿನ ಬೀದಿಗೂ ಟಿಪ್ಪು ಸುಲ್ತಾನ್ ಹೆಸರಿಡಲು ಬಿಡುವುದಿಲ್ಲ ಎಂದು ಪ್ರಸಾದ್ ಅಬ್ಬಯ್ಯ (Prasad Abbayya) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕದ ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ, ವಿಜಯಪುರ ಸೇರಿದಂತೆ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆಗ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಅವರು ಪ್ರಸಾದ್ ಅಬ್ಬಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಬ್ಬಯ್ಯ ಅವರೇ… ನಿಮ್ಮ ಮನೆಗೆ ಬೇಕಾದ್ರೆ ಟಿಪ್ಪು ಹೆಸರು ಇಟ್ಟುಕೊಳ್ಳಿ. ನಿಮ್ಮ ಊರಿನ ಬೀದಿಗೂ ಟಿಪ್ಪು ಹೆಸರಿಡಲು ಬಿಡಲ್ಲ. ಕಾಂಗ್ರೆಸ್ಸಿಗರಿಗೆ ಅಷ್ಟು ಅಭಿಮಾನ ಇದ್ದರೆ ನಿಮ್ಮ ಕಚೇರಿಗೆ ಇಟ್ಟುಕೊಳ್ಳಿ. ನಾವ್ಯಾರು ಬೇಡ ಅಂತ ಹೇಳಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಸೂಕ್ತ ಹೆಸರು ನಾಲ್ವಾಡಿ ಕೃಷ್ಣರಾಜ ಒಡೆಯರ್ ಹೆಸರು. ಮಡಿಕೇರಿ ಜನರಿಗೆ ಕೇಳಿ ಟಿಪ್ಪು ಏನು ಮಾಡಿದ್ದಾನೆ ಹೇಳುತ್ತಾರೆ. ಟಿಪ್ಪು ಹೆಸರಿಡಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣ ನಾಮಕರಣ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ, ಕ್ರೆಡಿಟ್ ವಾರ್ ಆರಂಭ
ಇಂದಿನಿಂದ 10 ದಿನಗಳ ಕಾಲ ದತ್ತಜಯಂತಿ ಆಚರಣೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ. ಇಂದಿನಿಂದ 10 ದಿನಗಳ ಕಾಲ ದತ್ತಜಯಂತಿ ಆಚರಣೆ ನಡೆಯಲಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಿ.ಟಿ.ರವಿ ಸೇರಿದಂತೆ ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಣೆ ಮಾಡಿದರು.
ಇನ್ನು ದತ್ತ ಜಯಂತಿ ಆಚರಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ನಡೆದಿದೆ. ಮಾಲಾಧಾರಿಗಳು ಡಿಸೆಂಬರ್ 26ರಂದು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ 30,000ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪಾದುಕೆ ದರ್ಶನ ಪಡೆದು ಹೋಮ ಹವನ ಮಾಡಲಿದ್ದಾರೆ.
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮತ್ತೊಂದು ವಿವಾದ. ದತ್ತಾತ್ರೇಯರ ಹೆಸರಲ್ಲಿ ಐ.ಡಿ ಪೀಠ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1861 ಎಕರೆ ಆಸ್ತಿ ಇತ್ತು. ಟೆನೆಂಟ್ ಆಕ್ಟ್ ಬರುವ ಮುಂಚೆಯೇ ಆಸ್ತಿ ಬಗ್ಗೆ ಕಂದಾಯ ದಾಖಲೆ ಹೇಳುತ್ತೆ. ಅದರ ಚರ ಆಸ್ತಿ, ಚಿನ್ನ, ಬೆಳ್ಳಿ, ಹರಕೆ, ಕಾಣಿಕೆ ವಸ್ತುಗಳ ಅಕ್ರಮ ಪರಭಾರೆ. ದಿ.ಮೇಜರ್ ಪೂವಯ್ಯ ನೇತೃತ್ವದಲ್ಲಿ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ದತ್ತಾತ್ರೇಯರ 1861 ಎಕರೆ ಜಮೀನನ್ನು ಪ್ರಭಾವಿಗಳು ಕಬಳಿಸಿದ್ದಾರೆ. ನಕಲಿ ದಾಖಲೆಗಳ ಮೂಲಕ ದತ್ತಾತ್ರೇಯರ ಆಸ್ತಿ ಕಬಳಿಕೆ ಮಾಡಿದ್ದಾರೆ. ದತ್ತಾತ್ರೇಯರ ಆಸ್ತಿ ಕಬಳಿಸಿರೋದು ಬಹುತೇಕರು ಕಾಂಗ್ರೆಸ್ಸಿಗರು. ಅದರಲ್ಲಿ ಸಾಕಷ್ಟು ಪ್ರಭಾವಿಗಳು ಸೇರಿದ್ದಾರೆ. ದತ್ತಪೀಠ-ದರ್ಗಾ ಬೇರೆ ಬೇರೆ ಅಂತ ಅವರಿಗೂ ಗೊತ್ತು. ದತ್ತಾತ್ರೇಯರ ಆಸ್ತಿ ಕಬಳಿಸಲು ಸುಳ್ಳು ಹೇಳುತ್ತಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:30 pm, Sun, 17 December 23