ವಿರೇಂದ್ರ ಪಪ್ಪಿ, ನಂಜೇಗೌಡ, ವಿನಯ್ ಕುಲಕರ್ಣಿ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಎಂಎಲ್​​ಎಗೆ ಸಂಕಷ್ಟ

ಕರ್ನಾಟಕ ಕಾಂಗ್ರೆಸ್ ಶಾಸಕರುಗಳು ಒಂದಲ್ಲ ಒಂದು ರೀತಿಯ ಕಾನೂನು ಸಂಕಷ್ಟಗಳು ಎದುರಿಸುತ್ತಿದ್ದಾರೆ. ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ, ಮಾಲೂರು ಕ್ಷೇತ್ರದ ನಂಜೇಗೌಡ, ಅಂಕೋಲಾ‌ ಶಾಸಕ ಸತೀಶ ಸೈಲ್ ಹಾಗೂ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಬೆನ್ನಲ್ಲೇ ಇದೀಗ ಮತ್ತೋರ್ವ ಕರ್ನಾಟಕ ಕಾಂಗ್ರೆಸ್ ಎಂಎಲ್​​ಎಗೆ ಸಂಕಷ್ಟ ಎದುರಾಗಿದೆ.

ವಿರೇಂದ್ರ ಪಪ್ಪಿ, ನಂಜೇಗೌಡ, ವಿನಯ್ ಕುಲಕರ್ಣಿ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಎಂಎಲ್​​ಎಗೆ ಸಂಕಷ್ಟ
Td Rajegowda
Updated By: ರಮೇಶ್ ಬಿ. ಜವಳಗೇರಾ

Updated on: Sep 26, 2025 | 9:38 PM

ಚಿಕ್ಕಮಗಳೂರು, (ಸೆಪ್ಟೆಂಬರ್ 26): ರಾಜ್ಯ ಕಾಂಗ್ರೆಸ್ ನ ಕೆಲ ಶಾಸಕರು  (Karnataka C0ngress MLAs) ಒಂದಲ್ಲ ಒಂದು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಹಾಗೂ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ. ಇನ್ನು ಜೈಲಿನಲ್ಲಿದ್ದ ಕಾರವಾರ ಶಾಸಕ ಸತೀಸ್ ಸೈಲ್ ಅನಾರೋಗ್ಯದ ನಿಮಿತ್ತ ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಇನ್ನು ಮಾಲೂರು ಕ್ಷೇತ್ರದ ಕೈ ಶಾಸಕ ನಂಜೇಗೌಡರಿಗೆ ಅನರ್ಹತೆ ಭೀತಿಯಲ್ಲಿದ್ದಾರೆ. ಇದೆಲ್ಲರದ ನಡುವೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೂ ಲೋಕಾಯುಕ್ತ ಸಂಕಷ್ಟ ಎದುರಾಗಿದೆ.

ಹೌದು..ಟಿ.ಡಿ ರಾಜೇಗೌಡ ಮತ್ತು ಕುಟುಂಬದ ವಿರುದ್ಧ ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದಾರೆ. ಕಾಫಿ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗಡೆಗೆ ಸೇರಿದ ಕಾಫಿ ತೋಟ ಖರೀದಿಯೇ ಶಾಸಕನ ಕುಟುಂಬಕ್ಕೆ ಮುಳುವಾಗಿದೆ. ಹಾಸನ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆ‌ರ್ ದಾಖಲಾಗಿದ್ದು, ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಶಾಸಕರು ಖರೀದಿಸಿರುವ ಕಾಫಿ ತೋಟದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಏನಿದು ಪ್ರಕರಣ?

2018ರಲ್ಲಿ ಮೊದಲ ಬಾರಿಗೆ ಶಾಸಕರಾದಾಗ ಟಿ.ಡಿ. ರಾಜೇಗೌಡ 34 ಲಕ್ಷ ರೂಪಾಯಿ ಆದಾಯ ತೋರಿಸಿದ್ದರು. 2023ರಲ್ಲಿ ಈ ಆದಾಯವನ್ನು 44 ಲಕ್ಷ ಎಂದು ಘೋಷಿಸಿದ್ದರು. ಆದರೆ, 123 ಕೋಟಿ ಬ್ಯಾಂಕ್ ಸಾಲ ಹೊಂದಿದ್ದ ಸ್ಥಿತಿಯಲ್ಲಿ 266 ಎಕರೆ ಕಾಫಿ ತೋಟವನ್ನು ಖರೀದಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಶಾಸಕ ರಾಜೇಗೌಡ ತೋಟ ಖರೀದಿ ಮಾಡಿದ್ದ ವಿಷಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದರಿಂದ FIR ದಾಖಲಾಗಲು ಪ್ರಮುಖ ಕಾರಣವಾಗಿದೆ. ಶಾಸಕ ರಾಜೇಗೌಡ ಪತ್ನಿ ಪುಷ್ಪ ಹಾಗೂ ಪುತ್ರ ಅರ್ಪಿತ್ ರಾಜದೇವ್ ಅವರ ಹೆಸರಿನಲ್ಲಿ ಶೇ. 33ರಷ್ಟು ಹಂಚಿಕೆಯಾಗಿ ಕಾಫಿ ತೋಟ ನೋಂದಾಯಿಸಲಾಗಿದೆ. ಅಲ್ಲದೇ ಸಾಲದ ವಿವರಗಳು ಉಪನೊಂದಣಿ ಕಚೇರಿಯ ದಾಖಲೆಗಳಲ್ಲಿ ಬಹಿರಂಗಗೊಂಡಿವೆ. ಈ ಕುರಿತು ಬಿಜೆಪಿ ಕಾರ್ಯಕರ್ತ ದಿನೇಶ್‌ ಹೊಸೂರು ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಅಕ್ರಮ ಆದಾಯ, ಭ್ರಷ್ಟಾಚಾರ ಮತ್ತು ಬ್ಯಾಂಕ್ ಸಾಲವನ್ನು ಮರೆಮಾಚಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ 60 ದಿನಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಒಟ್ಟಿನಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಖರೀದಿ ಕುರಿತು ಗಂಭೀರ ಆರೋಪ ಕೇಳಿ ಬಂದಿದ್ರೂ ಕೂಡಾ ಶಾಸಕ ರಾಜೇಗೌಡ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಮಾತ್ರ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ