ಚಿಕ್ಕಮಗಳೂರು: ಧರಣಿ ಮಂಡಲದ ಕಥೆಯನ್ನ ಎಲ್ಲರೂ ಕೇಳಿರುತ್ತಾರೆ. ಮಾತಿಗೆ ತಕ್ಕಂತೆ ನಡೆದುಕೊಂಡ ಹಸುವಿನ ನಿಷ್ಠೆಯನ್ನು ನೋಡಿ ಹುಲಿಯೇ ಪ್ರಾಣಬಿಟ್ಟ ಕಥೆ ಅದು. ಆದರೆ ಅದು ಕಥೆಯಷ್ಟೆ. ಮನೆಯಲ್ಲಿ ಎರಡು ದಿನದ ಕರುವಿದೆ, ಹಾಲು ಕುಡಿಸಬೇಕು ಅಂದರೂ ವ್ಯಾಘ್ರ ಮಾತ್ರ ಗೋವನ್ನ ಬಿಡದೇ ಬೇಟೆಯಾಡುತ್ತಿದೆ. ಸದ್ಯ ಹುಲಿಯ ಓಡಾಟದಿಂದ ಕೇವಲ ದನಕರುಗಳು ಮಾತ್ರವಲ್ಲ ಇಡೀ ಊರಿಗೆ ಊರೇ ಭಯದಿಂದ ಕಂಗಾಲಾಗುವಂತಾಗಿದೆ.
ಕ್ರೂರ ವ್ಯಾಘ್ರನಿಗೆ ಹಸುಗಳೇ ಟಾರ್ಗೆಟ್
ಪದೇ ಪದೇ ದನಕರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಹೊಂಚು ಹಾಕಿ ಹಸುಗಳನ್ನೇ ಹೆಚ್ಚಾಗಿ ಬೇಟೆಯಾಡುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿಭೈಲ್, ಹೊಕ್ಕಳ್ಳಿ, ಬಾನಹಳ್ಳಿ, ಹೊಸಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಸಂಚಾರ ನಡೆಸುತ್ತಿರುವ ಹುಲಿ ಜನರಲ್ಲಿ ಹುಟ್ಟಿಸಿರುವ ಭಯ ಅಂತಿಂಥದಲ್ಲ. ನಿರಂತರ ಹುಲಿ ದಾಳಿಯಿಂದ ಈ ಗ್ರಾಮಗಳ ಜನರು ನಿದ್ರೆಯಲ್ಲೂ ಬೆಚ್ಚಿಬೀಳುವ ಪರಿಸ್ಥಿತಿ ಬಂದೊದಗಿದೆ. ಅಕ್ಕಪಕ್ಕದ ಹಳೇಹಳ್ಳಿ, ಬೆಳಗೋಡು, ತಳವಾರ, ಕೆಂಜಿಗೆ ಹೀಗೆ ಅನೇಕ ಗ್ರಾಮಗಳಲ್ಲೂ ವ್ಯಾಘ್ರದೇ ಭಯ. ವಾರಕ್ಕೆರಡು ಹಸುಗಳನ್ನ ಕೊಂದು ಹಾಕುತ್ತಿರುವ ಹುಲಿ, ಜನರನ್ನ ಬೆಚ್ಚಿ ಬೀಳಿಸಿದೆ. ನಿನ್ನೆ (ಅ.27) ಹೊಕ್ಕಳ್ಳಿಯ ಪ್ರಶಾಂತ್ ಎಂಬುವರಿಗೆ ಸೇರಿದ ಹಸುವನ್ನ ತಿಂದು ಹಾಕಿದೆ. ಪದೇ ಪದೇ ಹುಲಿ ದಾಳಿ ನಡೆಯುತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ತಲೆಕೆಡಿಸಿಕೊಂಡಿಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ತಬ್ಬಲಿಯಾಗುತ್ತಿರುವ ಕರುಗಳು, ದನದ ಕೊಟ್ಟಿಗೆಗಳು ಖಾಲಿ
ಕೆಲದಿನಗಳ ಹಿಂದೆಯಷ್ಟೇ ಭಾರತಿಬೈಲ್ ಅನುಸೂಯ ಎಂಬುವರ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ಹುಲಿ ದಾಳಿ ಮಾಡಿ ಹಸುವನ್ನ ಬಲಿ ತೆಗೆದುಕೊಂಡಿತ್ತು. ವ್ಯಾಘ್ರನಿಗೆ ಆಹಾರವಾಗುವ ಮುನ್ನ ಎರಡು ದಿನಗಳ ಹಿಂದೆಯಷ್ಟೇ ಮುದ್ದು ಕರುವಿಗೆ ಜನ್ಮ ನೀಡಿದ ಹಸುವನ್ನ ಕೊಂದ ವ್ಯಾಘ್ರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಗದ್ದೆಯಲ್ಲಿ ಮೇಯುವಾಗ, ಕೊಟ್ಟಿಗೆಯಲ್ಲಿದ್ದಾಗ ಹಸುಗಳನ್ನ ಹುಲಿ ಬೇಟೆಯಾಡುತ್ತಿದೆ. ತಾಯಿಯ ಪ್ರೀತಿ, ಆರೈಕೆ ಇಲ್ಲದೆ ಸಾಲು ಸಾಲು ಕರುಗಳು ಅನಾಥವಾಗುತ್ತಿವೆ. ನಿರಂತರ ದಾಳಿಯಿಂದ ದನದ ಕೊಟ್ಟಿಗೆಗಳು ಖಾಲಿ ಖಾಲಿಯಾಗುತ್ತಿದೆ.
ನಮ್ಮ ಮನೆಯ ಎರಡು ಹಸುಗಳನ್ನ ಹುಲಿ ಹಿಡಿದಿದೆ. ಕರುಗಳು ತಬ್ಬಲಿಯಾಗಿವೆ. ಅನಾಥ ಕರುಗಳನ್ನ ನೋಡಿದಾಗ ಬೇಸರವಾಗುತ್ತದೆ. ಪದೇ ಪದೇ ಹುಲಿ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಅಂತಾ ಭಾರತಿಬೈಲ್ ಗ್ರಾಮದ ಸಿಂಪನ ಅಳಲು ತೋಡಿಕೊಂಡಿದ್ದಾರೆ. ನಾವು ಕೂಡ ಹಸುಗಳನ್ನ ಕಳೆದುಕೊಂಡಿದ್ದೇವೆ. ಅರಣ್ಯ ಇಲಾಖೆಯವರು ಬಂದು ಪೋಟೋ ತೆಗೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಮಗೆ ಶಾಶ್ವತ ಪರಿಹಾರ ಬೇಕು. ಈ ಹುಲಿ ದಾಳಿಯಿಂದ ಮುಕ್ತಿ ಸಿಗಬೇಕು ಅಂತಾ ಭಾರತೀಬೈಲು ಗ್ರಾಮದ ನವೀನ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಲು ಮಾರಿ ಜೀವನ ಸಾಗಿಸುತ್ತಿದ್ದವರ ಜೀವನ ಅತಂತ್ರ
ಹಾಲನ್ನ ಮಾರಿ ಜೀವನ ಸಾಗಿಸುತ್ತಿದ್ದ ಬಡ, ಮಧ್ಯಮ ವರ್ಗದ ಜನರು ಇದೀಗ ಹುಲಿ ದಾಳಿಯಿಂದ ಕಂಗಾಲಾಗಿ ಹೋಗಿದ್ದಾರೆ. ಈಗಾಗಲೇ ಅತಿಯಾದ ಮಳೆಯಿಂದ ಕಾಫಿ ಬೆಳೆಯನ್ನ ಕಳೆದುಕೊಂಡು ಅಲ್ಪಸ್ವಲ್ಪ ಬರುತ್ತಿದ್ದ ಹಾಲಿನ ಆದಾಯದಿಂದಲೇ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಹುಲಿ ಈ ಭಾಗದಲ್ಲಿ ಬೀಡುಬಿಟ್ಟಿದ್ದರಿಂದ ಹಸುಗಳು ಕಣ್ಮರೆಯಾಗಿ ಜನರ ಆದಾಯಕ್ಕೂ ಕುತ್ತು ಬಿದ್ದಿದೆ. ಈ ರೀತಿ ಹುಲಿ ದಾಳಿ ನಿರಂತರವಾಗಿ ಆಗುತ್ತಿದ್ದರೆ ನಾವು ಜೀವನ ಮಾಡೋದು ಹೇಗೆ ಅನ್ನೋ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಕಳೆದ ಒಂದು ವರ್ಷದಲ್ಲಿ 80-100 ಹಸುಗಳು ವ್ಯಾಘ್ರನ ಬಾಯಿಗೆ ಆಹಾರವಾಗಿದೆ. ಅಲ್ಲದೇ ಕಳೆದ ಎರಡು ತಿಂಗಳಲ್ಲೇ 30ಕ್ಕೂ ಹೆಚ್ಚು ಹಸುಗಳನ್ನ ಕಳೆದುಕೊಂಡಿರುವ ಜನರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದು, ಹುಲಿಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಹುಲಿ ಭಯದ ಜೊತೆಗೆ ಕಾಡಾನೆಯ ಆತಂಕ
ಕಾಡಾನೆ ದಾಳಿ ಕೂಡ ಈ ಭಾಗದಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಗದ್ದೆಗಳನ್ನ ನಾಟಿ ಮಾಡಲು ಜನರು ಮನಸ್ಸು ಮಾಡುತ್ತಿಲ್ಲ. ಮಾಡಿದರೂ ಗದ್ದೆಗಳಲ್ಲೇ ಮೊಕ್ಕಾಂ ಹೂಡುವ ಕಾಡಾನೆಗಳು ದಾಂಧಲೆ ನಡೆಸಿ ಸಂಪೂರ್ಣ ಬೆಳೆಯನ್ನ ತಿಂದು ಹಾಳು ಮಾಡುತ್ತವೆ. ಈ ರೀತಿ ಹುಲಿ-ಆನೆ ದಾಳಿಯಿಂದ ರೈತರು ಗದ್ದೆಗಳನ್ನ ನಾಟಿ ಮಾಡದೇ ಹಾಗೇ ಪಾಳು ಬಿಡುವಂತಾಗಿದೆ.
ಇದನ್ನೂ ಓದಿ
ಕೆಲವೇ ನಿಮಿಷಗಳಲ್ಲಿ ವಿಶ್ವದಾದ್ಯಂತ ಕನ್ನಡ ಡಿಂಡಿಮ ಕಲರವ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಹಾಡು ಗಾಯನ
Published On - 10:23 am, Thu, 28 October 21