ಚಿಕ್ಕಮಗಳೂರು: ಮಳೆ ಮಧ್ಯೆ ಪ್ಲಾಸ್ಟಿಕ್ ಗುಡಿಸಲು ಕಟ್ಟಿಕೊಂಡು ತಾಯಿ-ಮಕ್ಕಳ ಪರದಾಡಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರ ಸಮೀಪದ ಆಜಾದ್ ನಗರದಲ್ಲಿ ಕಂಡುಬಂದಿದೆ. ಪತಿಯನ್ನ ಕಳೆದುಕೊಂಡು ನಾಲ್ಕು ಮಕ್ಕಳ ಜೊತೆ ಬದುಕು ನಡೆಸುತ್ತಿರುವ ತಾಯಿ ಲೀಲಾ, ಕಷ್ಟಪಟ್ಟು ಮಕ್ಕಳನ್ನ ಓದಿಸುತ್ತಿದ್ದಾರೆ. ತಾಯಿಯ ಕಷ್ಟ ನೋಡಲಾರದೆ ದೊಡ್ಡ ಮಗಳು ಸುಷ್ಮಾ ಶಾಲೆ ಬಿಟ್ಟಿದ್ದು, ತಾಯಿ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಳೆ. ಮಳೆ ಮಧ್ಯೆ ಪ್ಲಾಸ್ಟಿಕ್ ಗುಡಿಸಿನಲ್ಲಿ ತಾಯಿ ಮಕ್ಕಳೊಂದಿಗೆ ಪರದಾಡಿರುವ ಸುದ್ದಿಯನ್ನು ಟಿವಿ9 ಈ ಹಿಂದೆ ವರದಿ ಮಾಡಿತ್ತು. ಸದ್ಯ ಟಿವಿ9 ವರದಿ ಇಂಪ್ಯಾಕ್ಟ್ನಿಂದಾಗಿ ಮನೆ ಕಟ್ಟಿಸಿಕೊಡಲು ಮಾಜಿ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಮುಂದೆ ಬಂದಿದ್ದಾರೆ. ಟಿವಿ9ನಲ್ಲಿ ಕರುಣಾಜನಕ ವರದಿ ಪ್ರಸಾರ ಬೆನ್ನಲ್ಲೇ ಗುಡಿಸಲಿಗೆ ಸಚಿವರು ಭೇಟಿ ನೀಡಿದ್ದರು.
ಇದನ್ನೂ ಓದಿ: ಕಾಫಿನಾಡಿನಲ್ಲಿ ಮಳೆಯ ಅಬ್ಬರ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ
ಇದೀಗ ಮನೆ ಕಟ್ಟಿಸಿಕೊಡಲು ರಾಣಾ ಜಾರ್ಜ್ ಮುಂದೆ ಬಂದಿದ್ದು, ಕೂಡಲೇ ಸಂತ್ರಸ್ಥೆ ಲೀಲಾರ ಮನೆಗೆ ವಿವರ ಪಡೆಯಲು ತಂಡವನ್ನ ಕಳಿಸಿದ್ದರು. ಅಗತ್ಯ ವಸ್ತು ಖರೀದಿಗಾಗಿ ರಾಣಾ ಗ್ರೂಪ್ ಟೀಂ 20 ಸಾವಿರ ರೂ. ನೀಡಿದೆ. ಅದೇ ರೀತಿಯಾಗಿ ನಗರಾಭಿವೃದ್ಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದು, ಸ್ಥಳದಲ್ಲೇ ವೈಯಕ್ತಿಕವಾಗಿ 50 ಸಾವಿರ ರೂ. ನೀಡಿದ್ದಾರೆ. ಸರ್ಕಾರದಿಂದ 5 ಲಕ್ಷ ಚೆಕ್ ನೀಡುವುದಾಗಿ ಹೇಳಿಕೆ ನೀಡಿದರು.
ಇನ್ನೂ ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯ ವಾಡಿಕೆ ಮಳೆ 762.7 ಮಿಲಿ ಮೀಟರ್ ನಷ್ಟಿದ್ದು, ಸದ್ಯ 1157.7 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ದಾಖಲೆ ಪ್ರಮಾಣದಲ್ಲಿ 375 ಮಿಲಿ ಮೀಟರ್ ಮಳೆ ಒಂದೇ ದಿನದಲ್ಲಿ ದಾಖಲಾಗಿದೆ. ಶೃಂಗೇರಿ ತಾಲೂಕಿನಲ್ಲೂ ಕೂಡ ಬಿಡದೆ ಮಳೆ ಸುರಿಯುತ್ತಿದ್ದು ಜನರು ಆತಂಕಗೊಂಡಿದ್ದಾರೆ.