ಚಿಕ್ಕಮಗಳೂರು, ನ.10: ನಗರಸಭೆ (Chikkamagaluru Municipal Council) ಅಧ್ಯಕ್ಷ ಕುರ್ಚಿಗಾಗಿ ಬಿಜೆಪಿಯಲ್ಲಿ ಕಿತ್ತಾಟ ಮುಂದುವರಿದಿದೆ. ಪಕ್ಷ ಸೂಚನೆ ನೀಡಿದರೂ ರಾಜೀನಾಮೆ ನೀಡದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಇಂದು ಅವಿಶ್ವಾ ಮಂಡನೆ ನಡೆಯಲಿದೆ. ಆದರೆ, ವೇಣುಗೋಪಾಲ್ ಅವರಿಗೆ ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ನಗರಸಭೆಯಲ್ಲಿ ಬಿಜೆಪಿ ಹೈಡ್ರಾಮೇ ನಡೆಯುತ್ತಿದೆ. ಬಿಜೆಪಿ ನಾಯಕರ ಸೂಚನೆಯಂತೆ ಎರಡನೇ ಬಾರಿ ರಾಜೀನಾಮೆ ಕೊಟ್ಟಿದ್ದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ರಾಜೀನಾಮೆ ವಾಪಸ್ ಪಡೆದು ಯಾರ ಕಣ್ಣಿಗೂ ಬೀಳದಂತೆ ಕಣ್ಮರೆಯಾಗಿದ್ದರು. ಇದರಿಂದ ಮಾಜಿ ಸಚಿವ ಸಿಟಿ ರವಿಗೆ ಮುಜುಗರ ಉಂಟಾಗಿದ್ದು, ವೇಣುಗೋಪಾಲ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು. ಪಕ್ಷದಿಂದ ವರಸಿದ್ಧಿ ವೇಣುಗೋಪಾಲ್ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ರಾಮನಗರ: ವಿಭೂತಿಕೆರೆಯಲ್ಲಿ ಬರ ಅಧ್ಯಯನದ ವೇಳೆ ಜಗಳ ಮಾಡಿಕೊಂಡ ಬಿಜೆಪಿ ನಾಯಕರು
ಇತ್ತ, ಬಿಜೆಪಿ ಕಿತ್ತಾಟವನ್ನು ಬಂಡವಳವನ್ನಾಗಿಸಿಕೊಂಡು ನಗರಸಭೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತಕ್ಕೆ ಇಳಿದಿದ್ದರು. ಸದ್ಯ ಇಂದು ನಡೆಯುವ ಅವಿಶ್ವಾ ಮಂಡನೆ ವೇಳೆ ವೇಣುಗೋಪಾಲ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇದೆ.
35 ಚುನಾಯಿತ ನಗರಸಭೆ ಸದಸ್ಯರು, ಎಂಪಿ, ಎಂಎಲ್ಎ, 2 ಎಂಎಲ್ಸಿ ಸೇರಿ ಒಟ್ಟು 39 ಮಂದಿ ಇದ್ದು, ಈ ಪೈಕಿ 18 ಬಿಜೆಪಿ (ಅಧ್ಯಕ್ಷ ಸೆರಿ) ಸದಸ್ಯರು, ಕಾಂಗ್ರೆಸ್ 12, ಜೆಡಿಎಸ್ 2, ಎಸ್ಡಿಪಿಐ 1, ಪಕ್ಷೇತರ 2 ಚುನಾಯಿತ ಸದಸ್ಯರಿದ್ದಾರೆ. ಅವಿಶ್ವಾಸ ಮಂಡನೆ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ.
ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ವರಸಿದ್ಧಿ ವೇಣುಗೋಪಾಲ್ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಎರಡು ದಶಕದಿಂದ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಚಿಕ್ಕಮಗಳೂರು ನಗರಸಭೆ ಪ್ರತಿಷ್ಠೆಯಾಗಿದೆ. ಹೀಗಾಗಿ ಇಂದು ಭಾರೀ ಹೈ ಡ್ರಾಮಾಕ್ಕೆ ನಗರಸಭೆಗೆ ಸಾಕ್ಷಿಯಾಗಲಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ