ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಬೆರಣಗೋಡು ಗ್ರಾಮದ ರಸ್ತೆ ಹಾಳಾಗಿದ್ದು ಇಲ್ಲಿನ ಜನ ನರಕ ಅನುಭವಿಸುತ್ತಿದ್ದಾರೆ. ಅಲ್ಲಿಗೆ ಹೋಗೋಕೆ ನೆಂಟರು ಹೆದರ್ತಾರೆ. ಊರಿನ ಜನರು ನಗರಕ್ಕೆ ಬರೋಕೆ ಹರಸಾಹಸ ಪಡ್ತಾರೆ. ಅಷ್ಟೇ ಅಲ್ಲ, ಈ ಗ್ರಾಮದ ರಸ್ತೆಯಿಂದಾಗಿ ಮದ್ವೆ ವಯಸ್ಸಿಗೆ ಬಂದಂತಹ ಯುವಕ-ಯುವತಿಯರು ಕೂಡ ಮನೆಯಲ್ಲಿ ಕೂರುವಂತಾಗಿದೆ. ಈ ಧೂಳಿನಿಂದ ಯಾವ ರೋಗ ಬರುತ್ತೋ ಹೇಳೋಕಾಗಲ್ಲ. ಡಾಂಬರ್ ಇರ್ಲಿ, ಈ ರಸ್ತೆ ಜೆಲ್ಲಿ ಕಂಡು ಅದೆಷ್ಟೋ ವರ್ಷಗಳು ಆಯ್ತೋ ಆ ದೇವರೇ ಬಲ್ಲ. ಈ ರಸ್ತೆ ದಾಟಿ ಹೋಗುವ ಗ್ರಾಮಸ್ಥರ ಪಾಡಂತೂ ಯಾರಿಗೂ ಬೇಡ ಎಂಬಂತಾಗಿದೆ.
ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಗ್ರಾಮದ ರಸ್ತೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ನೂರಕ್ಕೂ ಹೆಚ್ಚು ಮನೆಗಳಿರೋ ಈ ಗ್ರಾಮದ ಜನರು ಬೈಕ್ ನಲ್ಲಿ ಹೋಗುವಾಗ, ನಿತ್ಯ ಒಬ್ರಲ್ಲ ಒಬ್ರು ಬೀಳ್ತಾರೆ. ಕಾರು-ಜೀಪ್ನಲ್ಲಿ ಹೋಗೋರಿಗೂ ಕಷ್ಟ, ಆಟೋದವರ ಪಾಡಂತೂ ಕೇಳೋದೇ ಬೇಡ. ಅನೇಕರ ಜೀವ ಆಸ್ಪತ್ರೆಗೆ ಹೋಗುವ ಮುನ್ನವೇ ಈ ರಸ್ತೆಯ ಮಧ್ಯೆಯೇ ಹಾರಿ ಹೋಗಿದೆ. ಹೀಗಾಗಿ, ರಸ್ತೆ ದುರಸ್ತಿ ಮಾಡುವಂತೆ ಜನರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ, ಯಾರೊಬ್ರು ತಲೆ ಕೆಡಿಸಿಕೊಂಡಿಲ್ಲ.
ಬೆರಣಗೋಡು ಗ್ರಾಮದ ರಸ್ತೆ ಅಂದ್ರೆ, ನೆಂಟರು ಕೂಡ ಬರೋಕೆ ಹೆದರ್ತಾರೆ. ಬರೀ ನೆಂಟರಲ್ಲ, ಹೊಸ ಸಂಬಂಧವನ್ನ ಮಾಡ್ಬೇಕು ಅಂದ್ರೂ ಜನರು ಹಿಂದೇಟು ಹಾಕ್ತಿದ್ದಾರಂತೆ. ಹಾಗಾಗಿಯೇ ಈ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದ ಹತ್ತಾರು ಯುವಕ-ಯುವತಿಯರು ಮದುವೆ ಆಗದೇ ಹಾಗೆಯೇ ಉಳಿದಿದ್ದಾರೆ. ದುರಸ್ತಿಯಾಗದ ರಸ್ತೆಯಿಂದ ಹೆಣ್ಣು ಕೊಡೋಕೂ, ತರೋಕೂ ಕೂಡ ಜನರು ಭಯಪಡುವ ಸನ್ನಿವೇಶ ಸೃಷ್ಠಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿರುವ ಬೆರಣಗೋಡು ಗ್ರಾಮ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಹೀಗಾಗಿ, ಎರಡು ಕಡೆಯ ಶಾಸಕರು ಇತ್ತ ತಲೆ ಕೆಡಿಸಿಕೊಳ್ತಿಲ್ಲ. ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ಕೂಡ ಯಾವುದೇ ಪ್ರಯೋಜನ ಕೂಡ ಆಗಿಲ್ಲ. ಸಂಬಂಧಪಟ್ಟವರು ಇನ್ನಾದ್ರೂ ಎಚ್ಚೆತ್ತು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ. ಆಗ್ಲಾದ್ರೂ ಮದುವೆ ವಯಸ್ಸಿಗೆ ಬಂದಿರೋ ಯುವಕ-ಯುವತಿಯರಿಗೆ ಕಂಕಣ ಕೂಡಿ ಬರುತ್ತೆನೋ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ಇದನ್ನೂ ಓದಿ: ದೇಹ ಮುಚ್ಚಲೇ ಇಲ್ಲ ಊರ್ಫಿ ಜಾವೇದ್ ಹಾಕಿದ ಬಟ್ಟೆ; ಟ್ರೋಲ್ ಆದ ನಟಿ
ಒಮ್ಮೆ ಬಂದು ಅಮ್ಮನನ್ನು ನೋಡಿಕೊಂಡು ಹೋಗಿ; ಯೋಗಿ ಆದಿತ್ಯನಾಥ್ಗೆ ಅಕ್ಕ ಶಶಿ ಸಿಂಗ್ರಿಂದ ಮನವಿ