ಚಿಕ್ಕಮಗಳೂರು, ನವೆಂಬರ್ 3: ರಾಜ್ಯದಾದ್ಯಂತ ದಿಢೀರ್ ಏರಿಕೆ ಕಂಡಿದ್ದ ಈರುಳ್ಳಿ (Onion Price) ಚಿಕ್ಕಮಗಳೂರಿನಲ್ಲಿ (Chikkamagaluru) ಕೆಜಿಗೆ 100 ರೂಪಾಯಿ ಗಡಿ ದಾಟಿತ್ತು. ಆದರೆ ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರದ ಈರುಳ್ಳಿ ಲಗ್ಗೆಯಿಟ್ಟಿದ್ದು ಈರುಳ್ಳಿ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಒಂದು ತಿಂಗಳ ಹಿಂದೆ ಶತಕದ ಗಡಿ ದಾಟಿದ್ದ ಟೊಮ್ಯಾಟೊ ದರ ಇಳಿಕೆ ಕಂಡು ಗ್ರಾಹಕರು ನೆಮ್ಮದಿಯಾಗಿದ್ದ ಸಮಯದಲ್ಲಿ ಈರುಳ್ಳಿ ಗಗನಕೇರಿತ್ತು. ರಾಜ್ಯದಾದ್ಯಂತ ಕೆ.ಜಿ ಈರುಳ್ಳಿ ಬೆಲೆ 70 ,80, 90 ರೂಪಾಯಿಗೆ ತಲುಪಿದ್ರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ 100 ರ ಗಡಿ ದಾಟಿತ್ತು. ಆದರೆ, ಶುಕ್ರವಾರ ಈರುಳ್ಳಿ ಬೆಲೆ ಇಳಿಕೆ ಕಂಡಿದೆ.
ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತ ಕಂಡಿದ್ದು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಇರೋದ್ರಿಂದ ಕರ್ನಾಟಕ ರಾಜ್ಯಾದ್ಯಂತ ರಫ್ತು ಮಾಡಲಾಗುತ್ತಿದೆ. ಇದ್ರಿಂದ ಈರುಳ್ಳಿ ಬೆಲೆ ಇಂದು ಇಳಿಕೆಯಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಏಕಾಏಕಿ ಈರುಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು?
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಳಿಕ ಕೆ.ಜಿ ಈರುಳ್ಳಿ 100 ರೂಪಾಯಿ ಗಡಿ ದಾಟಿತ್ತು. ಈ ವರ್ಷ ಜಿಲ್ಲೆಯಾದ್ಯಂತ ಮಳೆ ಕೈಕೊಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಅಜ್ಜಂಪುರ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ನಾಶವಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿ ಸಿಗದ ಕಾರಣ ಈರುಳ್ಳಿ ಬೆಲೆ 100 ದಾಟಿತ್ತು. ಆದರೆ, ಚಿಕ್ಕಮಗಳೂರು ಎಪಿಎಂಸಿಗೆ ಮಾರುಕಟ್ಟೆಗೆ ಮಹಾರಾಷ್ಟ್ರ ದಿಂದ ಈರುಳ್ಳಿ ಬಂದಿದ್ದು ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ನಿನ್ನೆ ವರೆಗೂ 100 ರೂಪಾಯಿಯಿದ್ದ ಈರುಳ್ಳಿ ಮಹಾರಾಷ್ಟ್ರದ ಈರುಳ್ಳಿ ಎಂಟ್ರಿಯಿಂದ ಇಂದು 70 ,ರಿಂದ 85 ರೂಪಾಯಿ ವರೆಗೆ ಮಾರಾಟವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ