ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ವಿರೋಧ: 6 ದಿನ ನಿಷೇಧಾಜ್ಞೆ

| Updated By: Ganapathi Sharma

Updated on: Oct 18, 2023 | 4:58 PM

ಒಕ್ಕಲಿಗ ಸಮುದಾಯದ ಬಗ್ಗೆ ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರಣ ಅವರ ಆಗಮನಕ್ಕೆ ಜಿಲ್ಲೆಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್​ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ವಿರೋಧ: 6 ದಿನ ನಿಷೇಧಾಜ್ಞೆ
ಭಗವಾನ್ ಹೇಳಿಕೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಒಕ್ಕಲಿಗರಿಂದ ಪ್ರತಿಭಟನೆ
Follow us on

ಚಿಕ್ಕಮಗಳೂರು, ಅಕ್ಟೋಬರ್ 18: ಚಿಕ್ಕಮಗಳೂರಿನಲ್ಲಿ (Chikkamagalur) ಮಹಿಷ ದಸರಾ (Mahisha Dasara) ಆಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರದಿಂದ 6 ದಿನಗಳ ಕಾಲ ನಿಷೇಧಾಜ್ಞೆ (Section 144) ಘೋಷಿಸಲಾಗಿದೆ. ಅಕ್ಟೋಬರ್ 20ರಂದು ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಹಿಷ ದಸರಾ ಆಯೋಜನೆ ಮಾಡಲಾಗಿದೆ. ಮಹಿಷ ದಸರಾ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೊ. ಕೆ.ಎಸ್ ಭಗವಾನ್ ಆಗಮಿಸಲಿದ್ದಾರೆ.

ಒಕ್ಕಲಿಗ ಸಮುದಾಯದ ಬಗ್ಗೆ ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರಣ ಅವರ ಆಗಮನಕ್ಕೆ ಜಿಲ್ಲೆಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್​ ಆದೇಶ ಹೊರಡಿಸಿದ್ದಾರೆ.

ಮಹಿಷ ದಸರಾ ಆಚರಣೆ ವಿಚಾರವಾಗಿ ಕಳೆದ ಕೆಲವು ವರ್ಷಗಳಿಂದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕೂಗು ಕೇಳಿಬರುತ್ತಿದೆ. ಪ್ರೊ. ಭಗವಾನ್ ಮಹಿಷ ದಸರಾ ಆಚರಣೆಗೆ ಕರೆ ನೀಡುತ್ತಿದ್ದು, ಈ ವಿಚಾರ ವಿವಾದಕ್ಕೂ ಗುರಿಯಾಗುತ್ತಿದೆ. ಈ ವರ್ಷ ಭಗವಾನ್ ಅವರು ಒಕ್ಕಲಿಗರ ಬಗ್ಗೆ ನೀಡಿರುವ ಹೇಳಿಕೆ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಬೆಂಗಳೂರು, ಮಂಡ್ಯ ಸೇರಿದಂತೆ ಕರ್ನಾಟಕದ ಹಲವೆಡೆ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಾಗಿದೆ.

ಏನು ಹೇಳಿದ್ದರು ಭಗವಾನ್?

ಮೈಸೂರಿನಲ್ಲಿ ನಡೆದ ಮಹಿಷ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಗವಾನ್ ಅವರು, ಒಕ್ಕಲಿಗರು ಸಂಸ್ಕೃತಿಹೀನರು ಎಂದು ಹೇಳಿದ್ದರು. ಒಕ್ಕಲಿಗರು ಸಂಸ್ಕೃತಿ ಹೀನರು‌. ಈ ಮಾತು ನನ್ನದು ಅಲ್ಲ ಕುವೆಂಪು ಅವರದ್ದು. ನಾನು ಹೇಳಿದ್ರೆ ನನ್ನ ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೇ ನಿಜ ಹೇಳಿಯೇ ಸಾಯಬೇಕು ಎಂದು ಭಗವಾನ್ ಹೇಳಿದ್ದರು.

ಇದನ್ನೂ ಓದಿ: ಒಕ್ಕಲಿಗರ ಬಗ್ಗೆ ಸಾಹಿತಿ ಪ್ರೊ. ಭಗವಾನ್ ಅವಹೇಳನಕಾರಿ ಹೇಳಿಕೆ: ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಎಸ್​ಪಿಗೆ ದೂರು

ಮುಂದುವರಿದು ಬ್ರಾಹ್ಮಣರ ವಿರುದ್ಧವೂ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಅಗ್ನಿ ಪೂಜೆಯನ್ನು ಯಾಕೆ ಮಾಡುತ್ತಾರೆ? ಅದರಲ್ಲಿ ಏನು ಪ್ರಯೋಜನ ಇಲ್ಲ ಎಂದು ಬುದ್ಧ ತಿಳಿಸಿದ್ದರು. ಹೀಗಾಗಿ ರಾಜ ಮಹಾರಾಜರು ಅಗ್ನಿ ಪೂಜೆಯನ್ನು‌ ನಿಲ್ಲಿಸಿದ್ದರು. ಇದಕ್ಕಾಗಿ‌ ಬೌದ್ಧರನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಈಗಲೂ ಬ್ರಾಹ್ಮಣರಿಗೆ ಬೌದ್ಧರ ಮೇಲೆ ಕೋಪವಿದೆ. ಅವರು ಹೋಮ ಮಾಡುವಾಗ ಬೆಂಕಿಗೆ ಅರಳಿ ಮರದ ಚಕ್ಕೆ ಹಾಕುತ್ತಾರೆ. ಬುದ್ಧನಿಗೆ ಜ್ಞಾನೋದಯವಾಗಿದ್ದು ಅರಳಿ ಮರದ ಕೆಳಗೆ. ಬುದ್ಧನ ಮೇಲಿನ ಕೋಪಕ್ಕೆ ಅರಳಿ ಮರದ ಚಕ್ಕೆಯನ್ನು ಬೆಂಕಿಗೆ ಹಾಕುತ್ತಾರೆ. ಬ್ರಾಹ್ಮಣರ ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳು. ಅವರ ಸಂಪ್ರದಾಯಕ್ಕೆ ಅರ್ಥ ಇಲ್ಲ ಎಂದು ನಾಲಗೆ ಹರಿಬಿಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ