ಚಿಕ್ಕಮಗಳೂರು, ಜೂನ್ 23: ಕಾಫಿನಾಡು ಚಿಕ್ಕಮಗಳೂರಿಗೆ (Chikkamagaluru) ವೀಕೆಂಡ್ ಮಸ್ತಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು (Tourists) ತೆರಳುತ್ತಾರೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ (Chandradrona Parvata) ಸಾಲಿನಲ್ಲಿರುವ ಮುಳ್ಳಯ್ಯನಗಿರಿಗೆ (Mullayangiri) ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಾರೆ. ಹೀಗೆ ತೆರಳುವಾಗ ಅನೇಕರು ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ, ಇನ್ಮುಂದೆ ಪ್ಲಾಸ್ಟಿಕ್ ವಸ್ತುಗಳನ್ನು ಒಯ್ಯುವಂತಿಲ್ಲ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ಸಂಪೂರ್ಣ ನಿಷೇಧಿಸಿದೆ.
ಪ್ಲಾಸ್ಟಿಕ್ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಒಂದು ವೇಳೆ ಪ್ಲಾಸ್ಟಿಕ್ ವಸ್ತುಗಳು ಸಿಕ್ಕರೆ ಸೀಜ್ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ, ಪ್ರವಾಸಿತಾಣಗಳನ್ನ ರಕ್ಷಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರದ ಈ ಕ್ರಮವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಳೆಗಾಲ ಆರಂಭವಾಗಿದ್ದರಿಂದ ವೀಕೆಂಡ್ನಲ್ಲಿ ಹೆಚ್ಚಿನ ಜನರು ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಾರೆ. ಅಲ್ಲಿನ ಮುಳ್ಳಯ್ಯನಗಿರಿ, ಎತ್ತಿನ ಭುಜ ಶಿಖರದಲ್ಲಿ ಚಾರಣಕ್ಕೆ ತೆರಳುತ್ತಾರೆ. ಹೀಗೆ ತೆರಳುವವರು ಕೆಲವೊಂದು ಸಾರಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡುತ್ತಾರೆ. ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುವವದರಿಂದ ಘಟ್ಟಗಳ ರಸ್ತೆ ಚಿಕ್ಕದಾಗಿರುವುದರಿಂದ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಚಾರಣಕ್ಕೆ ನಿಷೇಧ!
ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಪರದಾಡುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಚಂದ್ರದ್ರೋಣ ಪರ್ವತಕ್ಕೆ ತೆರಳುವ ರಸ್ತೆಯಲ್ಲಿದ್ದ ಕೈಮರ ಚೆಕ್ಪೋಸ್ಟ್ನ್ನು N,M,D,C ಗ್ರಾಮಕ್ಕೆ ಬದಲಾವಣೆ ಮಾಡಿದ್ದು, ಅಲ್ಲಿನ ಸ್ಥಳೀಯರು ಪ್ರವಾಸಿಗರ ಕಿರುಚಾಟ ಕೂಗಾಟದ ಜೊತೆ ಮೋಜು ಮಸ್ತಿಯಿಂದ ತೊಂದರೆ ಆಗುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಸಾವಿರಾರು ಪ್ರವಾಸಿಗರಿಂದ ಸದಾ ಗಿಜುಗುಡುವ ತಾಣವಾಗಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಮೂಡಿಗೆರೆ ತಾಲೂಕಿನ ಬೈರಾಪುರ ಬಳಿಯ ಎತ್ತಿನಭುಜಕ್ಕೆ ಇದೀಗ ಪ್ರವಾಸಿಗರು ಹಾಗೂ ಚಾರಣಿಗರು ಬರದಂತೆ ನಿಷೇಧ ಹೇರಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ವಿಹಂಗಮವಾಗಿ ನಿಂತಿರುವ ಶಿಖರವೇ ಎತ್ತಿನ ಭುಜ.
ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅನ್ನದೆ ವರ್ಷವಿಡೀ ಪ್ರವಾಸಿಗರಿಂದ ತುಂಬಿ ತುಳುಕುವ ಶಿಖರವಿದು. ಕಳೆದ ಒಂದು ತಿಂಗಳಿಂದ ಎತ್ತಿನಭುಜ ಶಿಖರದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಅನುಭವಿಸಿ ಹೋಗಿದ್ದಾರೆ.
ಕೇವಲ ಸೌಂದರ್ಯ ಸವಿಯುವದರ ಜೊತೆಗೆ ಇಲ್ಲಿ ಹುಚ್ಚಾಟವಾಡಿ, ಪ್ರಕೃತಿಯ ಒಡಲನ್ನೇ ಹಾಳು ಮಾಡುತ್ತಿದ್ದಾರೆ. ಇವೆಲ್ಲವೂ ಕೂಡ ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಮುಳ್ಳಯ್ಯನಗಿರಿ ಮತ್ತು ಎತ್ತಿನಭುಜಕ್ಕೆ ಪ್ರವಾಸಿಗರು ಆಗಮಿಸುವುದನ್ನು ನಿಷೇಧ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಇದೀಗ ಎತ್ತಿನಭುಜ, ಮುಳ್ಳಯ್ಯನಗಿರಿ ತಾಣಕ್ಕೆ ಚಾರಣವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಪ್ರವಾಸಿಗರು ಹಾಗೂ ಚಾರಣಿಗರಿಗೆ ಶಾಕ್ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 am, Mon, 24 June 24