ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಖಾಸಗಿ ವ್ಯಕ್ತಿಗಳು ಎನ್‍ಜಿಒ ಹೆಸರಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡದಲ್ಲಿ ನಡೆದಿದೆ. ಈ ಪ್ರಕರಣ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕಳೆದ 1 ವಾರದಿಂದಲೂ ಚುರ್ಚೆಗುಡ್ಡದ ಶ್ರೀಗಂಧ ರಸ್ತೆ ಮಾರ್ಗದ ಒಂದು ಕಿ.ಮೀ ದೂರದಲ್ಲಿ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವಂತಹ ನೀರಿನಗುಂಡಿಯ ಬಳಿ ಮರಕ್ಕೆ ಕ್ಯಾಮರಾ ಅಳವಡಿಸಲಾಗಿದೆ.
ಕಬ್ಬಿಣದ ಸರಪಳಿಯಲ್ಲಿ ಕ್ಯಾಮರವನ್ನು ಯಾರು ತೆಗೆದುಕೊಂಡು ಹೋಗದಂತೆ ಕಟ್ಟಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಈ ರೀತಿಯ ಕ್ಯಾಮರಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಇಟ್ಟಿರಬೇಕು ಎಂದು ಸುಮ್ಮನಾಗಿದ್ರು. ಆದ್ರೆ ಪದೇ ಪದೇ ಸ್ಥಳೀಯ ಎನ್‍ಜಿಒ ಒಂದರಲ್ಲಿ ಕೆಲಸ ಮಾಡುವವರು ಈ ಟ್ರ್ಯಾಪಿಂಗ್ ಕ್ಯಾಮರಾ ಬಳಿ ಬರುತ್ತಿರೋದನ್ನು ಗಮನಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ವಿಚಾರಿಸಿದಾಗ ಇಲಾಖೆ ಯಾವುದೇ ಕ್ಯಾಮರಾ ಅಳವಡಿಸದೇ ಇರುವುದು ತಿಳಿದಿದೆ.
ಟ್ರ್ಯಾಪಿಂಗ್ ಕ್ಯಾಮರಾ ಆ ಸ್ಥಳದಿಂದ ನಾಪತ್ತೆ
ಆದ್ರೂ ಈ ಪ್ರದೇಶದಲ್ಲಿ ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿ ಒಂದು ವಾರ ಕಳೆದ್ರೂ ಇಲಾಖೆ ಸಿಬ್ಬಂದಿಗೆ ಗೊತ್ತಾಗದೇ ಇರುವುದು ಅನುಮಾನ ಮೂಡಿಸಿದೆ. ಅಧಿಕಾರಿಗಳ ಕಣ್ಣಾಮುಚ್ಚಾಲೆ ವೇಳೆ ಕ್ಯಾಮರಾ ನಾಪತ್ತೆಯಾಗಿದ್ದು ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಟ್ರ್ಯಾಪಿಂಗ್ ಕ್ಯಾಮರಾ ಆ ಸ್ಥಳದಿಂದ ನಾಪತ್ತೆಯಾಗಿದೆ.
Published On - 6:28 pm, Sat, 27 June 20