
ಚಿಕ್ಕಮಗಳೂರು, ಡಿಸೆಂಬರ್ 27: ಶೃಂಗೇರಿಗೆ ಭೇಟಿ ನೀಡಿದ್ದ ಕಿರುತೆರೆ ನಟಿಯೊಬ್ಬರು ಮಠದ ಹಿರಿಯ ಸ್ವಾಮೀಜಿ ಜೊತೆಗೆ ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ಸುದ್ದಿ ಪ್ರಕಟಿಸಿರೋದು ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ನಟಿ ಶೃಂಗೇರಿಗೆ ಭೇಟಿ ನೀಡಿರುವ ಫೊಟೋ ಜೊತೆ ಮುಖಪುಟದಲ್ಲಿಯೇ ಸುದ್ದಿ ಪ್ರಕಟವಾಗಿರೋದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಶೃಂಗೇರಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಎಂಬ ಶೀರ್ಷಿಕೆಯ ಅಡಿಯಲ್ಲಿ ಪತ್ರಿಕೆ ಸುದ್ದಿ ಪ್ರಕಟಿಸಿದೆ. ಕನ್ನಡದ ಖ್ಯಾತ ಕಿರುತರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ನಾಡಿನ ಸುಪ್ರಸಿದ್ಧ ಕ್ಷೇತ್ರವಾದ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ಆಶೀರ್ವಾದ ಪಡೆದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಇದು ಕಿರುತೆರೆ ನಟಿಯ ಎರಡನೇ ಭೇಟಿಯಾಗಿದ್ದು, ಈ ಬಾರಿ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಅವರು, ಅಲ್ಲಿಯೇ ವಾಸ್ತವ್ಯ ಮಾಡಿದ್ದಾರೆ. ಮರುದಿನ ಶೃ೦ಗೇರಿ ಮಠದ ಹಿರಿಯ ಸ್ವಾಮಿಗಳನ್ನು ಭೇಟಿಯಾಗಿ ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿ, ಆಶೀರ್ವಾದ ಪಡೆದಿರುವುದು ವಿಶೇಷ ಎಂಬ ವಿಷಯಗಳು ಇದರಲ್ಲಿವೆ.
ಇದನ್ನೂ ಓದಿ: ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ
ಪತ್ರಿಕೆಯಲ್ಲಿ ಈ ರೀತಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಶೃಂಗೇರಿ ಮಠ ಈ ಬಗ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ದಿನಾಂಕ 20-12-2025ನೇ ಶನಿವಾರದಂದು ಲೋಕ ಧ್ವನಿ ಎಂಬ ಇ-ಪತ್ರಿಕೆಯಲ್ಲಿ ಪಲ್ಲವಿ ಮತ್ತಿಘಟ್ಟ ಎಂಬ ಕಿರುತೆರೆ ನಟಿ ಶೃಂಗೇರಿಗೆ ಬಂದು ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಯವರ ಜೊತೆಗೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂಬುದಾಗಿ ಪ್ರಕಟಿಸಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಶ್ರೀಗಳು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತ ಜನರಿಗೆ ಕೇವಲ ದರ್ಶನವನ್ನು ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು ಯಾರ ಬಳಿಯಲ್ಲೂ ದೀರ್ಘವಾಗಿ ಮಾತುಕತೆ ನಡೆಸಿರುವುದಿಲ್ಲ. ಪಲ್ಲವಿ ಮತ್ತಿಘಟ್ಟರವರು ಎಲ್ಲಾ ಭಕ್ತಾದಿಗಳಂತೆ ಸ್ವಾಮೀಜಿಯವರ ದರ್ಶನ ಪಡೆದಿರಬಹುದೇ ವಿನಃ ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಒಂದು ಘಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಷಯವು ಅಪ್ಪಟ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಮಠದ ಹಾಗೂ ಜಗದ್ಗುರುಗಳ ಕುರಿತಂತೆ ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯ ಎಂದು ತಿಳಿಸಿದೆ.
ಶೃಂಗೇರಿಗೆ ಪ್ರತಿದಿನ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ರಾಜಕಾರಣಿಗಳು, ಉದ್ಯಮಿಗಳು ಸೇರಿ ನಟ-ನಟಿಯರು ಇಲ್ಲಿಗೆ ಭೇಟಿ ನೀಡೋದು ಸರ್ವೇ ಸಾಮಾನ್ಯ. ಹೀಗಿರುವಾಗ ಕಿರುತೆರೆ ನಟಿಯೊಬ್ಬರ ಭೇಟಿಯನ್ನೇ ಪತ್ರಿಕೆ ಈ ರೀತಿ ವೈಭವೀಕರಿಸಿ ಸುದ್ದಿ ಪ್ರಕಟಿಸಿರೋದು ಯಾಕೆ? ಇದರ ಹಿಂದೆ ಷಡ್ಯಂತ್ರ ಇರಬಹುದು ಎಂಬಿತ್ಯಾದಿ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Fri, 26 December 25