ಚಿಕ್ಕಮಗಳೂರು: ಮುಂಬರುವ ಅಸೆಂಬ್ಲಿ ಚುನಾವಣೆ ನಿಮಿತ್ತ (Karnataka Assembly Elections 2023) ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಮಹತ್ವಾಕಾಂಕ್ಷಿ/ ದೂರಗಾಮಿಯ ಪಂಚರತ್ನ ರಾಜಕೀಯ ಯಾತ್ರೆ (JDS Pancharatna Yatra) ಮುಗಿದ ಬಳಿಕ ಉಳಿದಿದ್ದ (Left over Food) ಅನ್ನವನ್ನು ತಿಂದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ. ಯಾತ್ರೆ ಮುಗಿದ ಎರಡು ದಿನಗಳ ಬಳಿಕ ನಿನ್ನೆ ಹಾಗೂ ಇಂದು ಎರಡು ಹಸುಗಳು ಸಾವನ್ನಪ್ಪಿವೆ.
ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಬರುತ್ತಾರೆ ಎಂದು ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಅಂದು 2000 ಜನರಿಗೆ ಅಡುಗೆ ಮಾಡಿಸಿದ್ದರು. ಆದರೆ ಊಟ ಮಾಡಿದ್ದು 1000 ಜನ ಮಾತ್ರ. ಉಳಿದ ಆಹಾರ ಹಾಗೂ ಪ್ಲಾಸ್ಟಿಕ್ ಗಳನ್ನ (Plastic) ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಅದನ್ನ ತಿಂದು ಇದೀಗ ಎರಡು ಹಸುಗಳು ಸಾವನ್ನಪ್ಪಿವೆ.
ಬೆಳಗ್ಗೆ ಮೇವಿಗೆ ಹೋಗಿದ್ದ ರಾಸುಗಳು ಸಂಜೆ ಮನೆಗೆ ಬಂದ ಬಳಿಕ ಹೊಟ್ಟೆ ಉಬ್ಬರಿಸಿಕೊಂಡು ಬೆಳಗಾಗುವುದರಲ್ಲಿ ಎರಡು ಹಸುಗಳು ಸಾವನ್ನಪ್ಪಿವೆ. ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಹಸುಗಳು ಸಾವನ್ನಪ್ಪಿರುವುದರಿಂದ ಕಂಗಾಲಾಗಿವೆ. ಪಂಚರತ್ನ ಯಾತ್ರೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬದುಕಿಗೆ ಅನಿವಾರ್ಯವಾಗಿದ್ದ ರಾಸುಗಳು ಸಾವನ್ನಪ್ಪಿವೆ. ಅದಕ್ಕೆ ಜವಾಬ್ದಾರಿ ಯಾರೆಂದು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
Published On - 1:23 pm, Tue, 28 February 23