ಚಿಕ್ಕಮಗಳೂರು, ಆ.10: ವಯನಾಡು, ಶಿರೂರು ದುರಂತದಿಂದ ದೇಶವೇ ಬೆಚ್ಚಿಬಿದ್ದಿದೆ. ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ(Hill collapse) ಸಂಭವಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಗುಡ್ಡ ಕುಸಿತಕ್ಕೆ ಅಸಲಿ ಕಾರಣ ತಿಳಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆ ರಾಜ್ಯ ಸರ್ಕಾರ ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದ ನೇತೃತ್ವದಲ್ಲಿ ಗುಡ್ಡ ಭೂ ಕುಸಿತವಾದ ಸ್ಥಳಗಳಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ.
ಚಿಕ್ಕಮಗಳೂರು ಜಿಲ್ಲಾಡಳಿತ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ 88 ಪ್ರದೇಶಗಳು ಅಪಾಯಕಾರಿ ಎಂದು ಪಟ್ಟಿ ಮಾಡಿದ್ದು, ಇಂದು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸೆಂಥಿಲ್ ನೇತೃತ್ವದ ತಂಡ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಸೇರಿದಂತೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಾಧಾರ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಚಂದ್ರದ್ರೋಣ ಪರ್ವತದ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, 50 ಕ್ಕೂ ಅಧಿಕ ಪ್ರದೇಶದಲ್ಲಿ ಭೂ ಕುಸಿತವಾಗಿದ್ರೆ, ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳುವ ರಸ್ತೆ ಕವಿಕಲ್ ಗಂಡಿ ಬಳಿ 200 ಅಡಿ ಪ್ರಪಾತಕ್ಕೆ ಕುಸಿದು ಬಿದ್ದಿದೆ.
ಇದನ್ನೂ ಓದಿ:ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?
ಮಲೆನಾಡಿನ ಬಹುತೇಕ ಪ್ರದೇಶದಲ್ಲಿ ಮಳೆಯಿಂದ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಗುರುತು ಮಾಡಿರುವ 5 ತಾಲೂಕಿನ 88 ಸ್ಥಳಗಳಲ್ಲಿ ಜಿಯೋಲಾಜಿಕಲ್ ತಂಡ ಇಂದಿನಿಂದ ಮೂರು ದಿನಗಲ ಸರ್ವೇ ಕಾರ್ಯ ನಡೆಸಲಿದೆ. ಪ್ರಮುಖವಾಗಿ ಮಳೆಯಿಂದ ಗುಡ್ಡ ಕುಸಿತವಾಗುತ್ತಿದೆಯಾ ಅಥವಾ ಅವೈಜ್ಞಾನಿಕ ಕಾಮಗಾರಿಯಿಂದ ಅನಾಹುತ ಸೃಷ್ಟಿಯಾಗಿದೆಯಾ ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದೆ. ಮೂರು ದಿನಗಳ ಕಾಲ ಜಿಯೋಲಾಜಿಕಲ್ ತಂಡ ಜಿಲ್ಲೆಯಾದ್ಯಂತ ಸರ್ವೇ ಕಾರ್ಯ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.
ಮಳೆಗಾಲ ಆರಂಭವಾದರೆ ಸಾಕು ಗುಡ್ಡ ಕುಸಿತ, ಭೂ ಕುಸಿತದ ಆತಂಕದಲ್ಲೇ ಮಳೆಗಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಕ್ಷಣದಲ್ಲಿ ಯಾವ ಗುಡ್ಡ ಕುಸಿದು ಬೀಳುತ್ತೋ ಎಂದು ಮಲೆನಾಡಿನ ಜನರನ್ನ ಕಾಡ ತೊಡಗಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದ ವರದಿಗಾಗಿ ಜನರು ಕಾದು ಕುಳಿತಿದ್ದು, ಗುಡ್ಡದ ಭೂತದ ಅಸಲಿ ಸತ್ಯ ಹೊರ ಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ