ಚಿಕ್ಕಮಗಳೂರು: ಕೊರೊನಾ ಕೂಪದಲ್ಲಿ ಸಿಲುಕಿಕೊಂಡು ಕಾಫಿನಾಡು ಒದ್ದಾಡುತ್ತಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಮುಂದೇನು ಎನ್ನುವ ಆತಂಕದಲ್ಲಿದ್ದಾರೆ. ಕೊರೊನಾ ಎರಡನೇ ಅಲೆಗೆ 20, 30 ವರ್ಷದ ಯುವಕರು ಸೇರಿದಂತೆ ಹಿರಿಯ ಜೀವಿಗಳು ಬಲಿಯಾಗುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಡ್ಗಳ ಕೊರತೆ ಎದುರಾದರೂ ಅಚ್ಚರಿಯಿಲ್ಲ. ಇಷ್ಟಾದರೂ ಜಿಲ್ಲೆಯ ಆಗುಹೋಗುಗಳನ್ನು ನೋಡಿಕೊಳ್ಳುವುದಕ್ಕೆ ಸರ್ಕಾರ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಕಾಫಿನಾಡನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲೂ ಜವಾಬ್ದಾರಿ ವಹಿಸಲು ಸರಿಯಾಗಿ ಅಪ್ಪ, ಅಮ್ಮ ಯಾರು ಇಲ್ಲದಂತಾಗಿ ಅನಾಥವಾಗುವ ಪರಿಸ್ಥಿತಿ ಜಿಲ್ಲೆಗೆ ಬಂದೊದಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರು ಇಲ್ಲದೇ ಸದ್ಯದ ಕೊರೊನಾ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿ ವರ್ಗ ಹೆಣಗಾಡುವಂತಾಗಿದೆ. ಐದು ತಿಂಗಳ ಹಿಂದೆ ಸಚಿವ ಸ್ಥಾನಕ್ಕೆ ಸಿ.ಟಿ ರವಿ ರಾಜೀನಾಮೆ ನೀಡಿದ ಮೇಲೆ ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಜನವರಿ 26ರಂದು ಪ್ರಭಾರಿ ಉಸ್ತುವಾರಿ ಸಚಿವರಾಗಿ ಅರವಿಂದ ಲಿಂಬಾವಳಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೋದವರು ಮತ್ತೆ ಅವರು ಕೂಡ ಇತ್ತ ತಲೆ ಹಾಕಲಿಲ್ಲ. ಯಾರು ಇಲ್ಲದಿದ್ದರೆ ಪ್ರಪಂಚವೇನೂ ಪ್ರಳಯವಾಗಲ್ಲ ಅಂತ ಜನರು ಹೇಗೋ ಕಾಲ ಕಳೆಯುತ್ತಿದ್ದರು. ಕೊನೆಪಕ್ಷ ಕೊರೊನಾ ಅಲೆ ಅಪ್ಪಳಿಸಿದ ಮೇಲಾದರೂ ಸರ್ಕಾರ ಎಚ್ಚೆತ್ತು ಉಸ್ತುವಾರಿ ಸಚಿವರನ್ನು ಮಾಡಬಹುದೆಂದು ಸಾರ್ವಜನಿಕರು ಭಾವಿಸಿದ್ದರು. ಆದರೆ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿದ್ದರೂ, ಮರಣ ಹೊಂದವರ ಸಂಖ್ಯೆ ಜಾಸ್ತಿ ಆಗುತ್ತಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ ಎಂದು ಸರ್ಕಾರದ ವಿರುದ್ಧ ರಾಜಕೀಯ ಮುಖಂಡರು ಸೇರಿದಂತೆ ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.
ಬೆಡ್ ಸಮಸ್ಯೆ ಆತಂಕ
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ 3,000ಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಸದ್ಯ 2,400ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ದಿನೇ ದಿನೇ ಏರಿಕೆ ಆಗುತ್ತಿರುವ ಪ್ರಕರಣಗಳನ್ನು ಕಂಡರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ತಲೆದೋರುತ್ತದೆ ಎನ್ನುವ ಎದುರಾಗಿದೆ. ಆರೋಗ್ಯ ಇಲಾಖೆ ಸಂಬಂಧಿಸಿದ ವೈದ್ಯರು, ಸಿಬ್ಬಂದಿಗಳು, ಅಧಿಕಾರಿಗಳು ಹೆಚ್ಚಿನ ಶ್ರಮವೇನೋ ಹಾಕುತ್ತಿದ್ದಾರೆ. ಆದರೆ ಜನಸಾಮಾನ್ಯರ ಓಡಾಟಕ್ಕೆ ನಿರ್ಬಂಧ ಹೇರಿರುವುದರಿಂದ ಬೇರೆ ಬೇರೆ ಇಲಾಖೆಯ ಬಹುತೇಕ ಅಧಿಕಾರಿಗಳು, ಸಿಬ್ಬಂದಿಗಳು ಮಾತ್ರ ಯಾವುದೇ ಕೆಲಸವಿಲ್ಲದೆ ಲಾಟರಿ ಹೊಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿಯೇ ಕಾಫಿನಾಡಿಗರು ಕಂಗಾಲಾಗಿದ್ದಾರೆ. ಜಿಲ್ಲೆಗೆ ಹೊಂದಿಕೊಂಡಿರುವ ಪಕ್ಕದ ಹಾಸನ ಜಿಲ್ಲೆಯಲ್ಲೂ ಕೊರೊನಾ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲೂ ಹೆಮ್ಮಾರಿ ಓಟ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗೆ ಕೊರೊನಾ ತನ್ನ ಆರ್ಭಟವನ್ನು ಮುಂದುವರಿಸಿದರೆ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲ. ನಮ್ಮ ಜಿಲ್ಲೆಯಲ್ಲಿ ಇನ್ನೂ ಮೆಡಿಕಲ್ ಕಾಲೇಜು ನಿರ್ಮಾಣವಾಗಿಲ್ಲ. ಈಗ ಬರುತ್ತಿರುವ 300-400 ಕೇಸ್ಗಳಿಗೆ ಅಧಿಕಾರಿಗಳು ಸುಸ್ತಾಗಿದ್ದಾರೆ. ಮುಂದೆ ಈ ಸಂಖ್ಯೆ 1000ರ ಗಡಿ ದಾಟಿದರೆ ಹೇಗೆ ಎನ್ನುವ ಆತಂಕ ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದೆ.
ಇದನ್ನೂ ಓದಿ
ಧನ್ವಂತರಿ ಮಹಾವಿಷ್ಣುವಿನ ಈ ಮಂತ್ರ ಹೇಳಿ ಅಥವಾ ಕೇಳಿಸಿಕೊಳ್ಳಿ; ರೋಗಬಾಧೆಗಳಿಂದ ರಕ್ಷಣೆ ಪಡೆಯಿರಿ
(chikmagalur People outraged against government for not appointing a in charge minister)
Published On - 12:48 pm, Sat, 1 May 21