ಕೊಪ್ಪಳದ ಈ ಕೊವಿಡ್ ಹೀರೋಗೆ ಥ್ಯಾಂಕ್ಸ್ ಹೇಳೋಣ: ಮಗ ಹುಟ್ಟಿ ತಿಂಗಳಾದರೂ ವಿಡಿಯೋದಲ್ಲಿ ಮಗು ಮುಖ ನೋಡಿ ಸಮಾಧಾನ ಪಡ್ತಿರೋ ತಂದೆ!
ಮೂಲತಃ ವಿಜಯಪುರ ಜಿಲ್ಲೆಯ ಮಂಜುನಾಥ್, ಕಳೆದ ಆರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ರೂ ಎತ್ತಿ ಮುದ್ದಾಡದ ಸ್ಥಿತಿಗೆ ಈ ಕೊರೊನಾ ತಂದು ನಿಲ್ಲಿಸಿದೆ. ಇವರ ಈ ಸೇವಾ ಕೈಕಂಕರ್ಯ ನೋಡಿದರೆ, ಸ್ವಂತಃ ಅವರು ಅನುಭವಿಸುತ್ತಿರುವ ಪಡಿಪಾಟಲು ನೋಡಿದರೆ ಯಾರಿಗೇ ಆಗಲಿ ಕಣ್ಣಾಲಿಗಳು ತೇವವಾಗದೆ ಇರದು. ಧಿಕ್ಕಾರವಿರಲಿ ಕೊರೊನಾ ಕ್ರಿಮಿಗೆ, ಜಯಕಾರ ಹಾಕಿ ಈ ತಂದೆಗೆ
ಕೊಪ್ಪಳ: ಈ ಕೊರೊನಾ ಕಾಲದಲ್ಲಿ ಸರ್ಕಾರಿ ವ್ಯವಸ್ಥೆ ಅದರಲ್ಲೂ ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದು ಜನರ ಅನುಭವಕ್ಕೆ ಬಂದ ಸಂಗತಿಯಾಗಿದೆ. ಆದರೆ ಇಲ್ಲೊಬ್ಬ ಕೊವಿಡ್ ಹೀರೋ ಒಂದು ತಿಂಗಳಿಂದ ಆಸ್ಪತ್ರೆಯಲ್ಲೇ ಉಳಿದುಕೊಂಡು ತನ್ನವರನ್ನ ಬರೀ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ, ಸಮಾಧಾನ ಪಟ್ಟುಕೊಳ್ಳುತ್ತಿರುವುದನ್ನ ನೋಡಿದರೆ ಕರುಳು ಕಿವುಚಿಬರುತ್ತದೆ; ಆತನ ತ್ಯಾಗಕ್ಕೆ ಕೃತಜ್ಞತೆ ಸೂಚಿಸೋಣ ಅನ್ನಿಸದಿರದು.
ಎದುರಿಗೆ ಕೊವಿಡ್ ಡ್ಯೂಟಿ ಹರಡಿಕೊಂಡು, ಅದಾಗತಾನೇ ಹುಟ್ಟಿದ ತನ್ನ ಮಗುವನ್ನೂ ನೋಡದ ತಂದೆಯೊಬ್ಬರು ನಮ್ಮ ವೈದ್ಯಕೀಯ ವ್ಯವಸ್ಥೆಯಲ್ಲಿ ಮಾದರಿಯಾಗಿ ಕಾಣುತ್ತಿದ್ದಾರೆ. ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮನಕಲಕುವ ಪ್ರಸಂಗ ನಡೆದಿದೆ. ಗಮನಾರ್ಹ ಸಂಗತಿಯೆಂದರೆ ಆ ತಂದೆ ಇನ್ನಾದರೂ ತನ್ನ ಮನೆಗೆ ತೆರಳಿ ಮಗುವನ್ನು ಅಪ್ಪಿ ಮುದ್ದಾಡುತ್ತಾರಾ ಅಂದ್ರೆ ಉಹುಃ ಅವರು ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ. ಮೊದಲು ಕೆಲಸ ಆಮೇಲೆ ಮಗ, ಮನೆಯನ್ನು ನೋಡುವೆ ಅನ್ನುತ್ತಿದ್ದಾರೆ!
ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿರೋ ಮಂಜುನಾಥ್ ಅವರೇ ಈ ನಮ್ಮ ಕೋವಿಡ್ ಹೀರೋ. ಏಪ್ರಿಲ್ ಒಂದರಂದು ತಮಗೆ ಗಂಡು ಮಗು ಜನಿಸಿದ್ರೂ ಮಗು ಮುಖ ನೋಡದೆ ಒದ್ದಾಟದಲ್ಲೇ ರೋಗಿಗಳ ಆರೈಕೆಗೆ ನಿಂತಿದ್ದಾರೆ ಈ ಸಹೃದಯಿ ತಂದೆ. ಇಡೀ ಜಗತ್ತಲ್ಲೇ ಇರುವಂತೆ ತಮ್ಮ ಜಿಲ್ಲೆಯಲ್ಲಿಯೂ ಕೊವಿಡ್ ಮಹಾಮಾರಿ ಠಿಕಾಣಿ ಹೂಡಿರುವುದರಿಂದ ಮಗು ಮುಖ ನೋಡದಿರೋ ಮಂಜುನಾಥ್ ಮನೆ ಆಮೇಲೆ ಎಂದು ತಮ್ಮ ಸರ್ಕಾರಿ ಉದ್ಯೋಗವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ಮಂಜುನಾಥ್ ಹಾಗೂ ಸುಮಲತಾ ದಂಪತಿಗೆ ಏಪ್ರಿಲ್ ಒಂದರಂದು ಮುದ್ದಾದ ಗಂಡು ಮಗು ಜನಿಸಿದೆ. ಇತ್ತ ಮಗುವಿನ ತಂದೆ ಮಂಜುನಾಥ್ ಕೊವಿಡ್ ಡ್ಯೂಟಿಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಮುಖ ನೋಡಲು ಹೋಗಲಾರದೆ ತಂದೆ ಮಂಜುನಾಥ್ ಅವರು ನಿತ್ಯವೂ ಒಂದಷ್ಟು ಸಮಯ ಮಾಡಿಕೊಂಡು ಮನೆಗೆ ವಿಡಿಯೋ ಕಾಲ್ ಮಾಡುತ್ತಾರೆ. ಆ ವೇಳೆ ಮಡದಿ, ಮತ್ತೊಂದು ಮಗು, ಜೊತೆಗೆ ಹೊಸದಾಗಿ ಮನೆಗೆ ಬಂದಿರುವ ನವಜಾತ ಶಿಶುವನ್ನು ನೋಡಿ, ಸಂತಸಪಟ್ಟು, ಮಡದಿಯನ್ನು ಸಂತೈಸಿ, ಮಗಳಿಗೆ ಧೈರ್ಯ ತುಂಬುತ್ತಾರೆ. ಇದು ಸರ್ಕಾರಿ ಕೆಲಸದ ಜೊತೆಗೆ ಅವರ ನಿತ್ಯದ ಕಾಯಕವಾಗಿದೆ.
ಮೂಲತಃ ವಿಜಯಪುರ ಜಿಲ್ಲೆಯ ಮಂಜುನಾಥ್, ಕಳೆದ ಆರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ರೂ ಎತ್ತಿ ಮುದ್ದಾಡದ ಸ್ಥಿತಿಗೆ ಈ ಕೊರೊನಾ ತಂದು ನಿಲ್ಲಿಸಿದೆ. ಇವರ ಈ ಸೇವಾ ಕೈಕಂಕರ್ಯ ನೋಡಿದರೆ, ಸ್ವಂತಃ ಅವರು ಅನುಭವಿಸುತ್ತಿರುವ ಪಡಿಪಾಟಲು ನೋಡಿದರೆ ಯಾರಿಗೇ ಆಗಲಿ ಕಣ್ಣಾಲಿಗಳು ತೇವವಾಗದೆ ಇರದು. ಧಿಕ್ಕಾರವಿರಲಿ ಕೊರೊನಾ ಕ್ರಿಮಿಗೆ.. ಜಯಕಾರ ಹಾಕಿ ಈ ತಂದೆಗೆ.
(Covid hero father manjunath in Koppal daily look at his new born baby through video call and console him self)