ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕು ಹಳಿಯೂರು ಗ್ರಾಮದ 22 ಮಂದಿ ರೈತರು 8 ವರ್ಷದಿಂದ ಶ್ರೀಗಂಧ ಬೆಳೆಯುತ್ತಿದ್ದಾರೆ. ಆದ್ರೆ ಇದೀಗ ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯನ್ನ ನಿರ್ಮಿಸೋ ಸಲುವಾಗಿ ಶ್ರೀಗಂಧ ಮರಗಳಿಗೆ ಕೊಡಲಿ ಪೆಟ್ಟು ಬೀಳೋ ಸಮಯ ಸನ್ನಿಹಿತವಾಗಿದೆ.
ನಾಲ್ಕು ವರ್ಷದ ಹಿಂದೆಯೇ ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೋಟಿಫಿಕೇಶನ್ ನೀಡಿದೆ. ನೋಟಿಫಿಕೇಶನ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಧಿಕಾರಿಗಳು ಮೊದಲು ಜಾಗ ಬಿಡಿ ಎಂದಿದ್ದಾರೆ. ಅದಕ್ಕೆ ಇಲ್ಲಾ, ನಾವು ಶ್ರೀಗಂಧ ಬೆಳೆದಿದ್ದೀವಿ, ಬದುಕೇ ಇಲ್ಲಿ ಕಟ್ಟಿಕೊಂಡಿದ್ದೀವಿ. ಹೇಗೆ ಬಿಡೋದು? ಅಂತಾ ರೈತರು ಆತಣಕದದ ದನಿಯಲ್ಲಿ ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಅಯ್ಯೋ! ಡೋಂಟ್ ವರಿ. ಒಳ್ಳೇ ಪರಿಹಾರ ಕೊಡ್ತೀವಿ ಜಾಗ ಬಿಡ್ಬೇಕು ನೋ ದೂಸ್ರಾ ಮಾತು ಅಂತಾ ರಿಪ್ಲೈ ಮಾಡಿದ್ದಾರೆ. ಸರಿ, ಇನ್ನೇನ್ ಮಾಡೋದ್, ರಾಷ್ಟ್ರೀಯ ಹೆದ್ದಾರಿಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾಗ ಬಿಡ್ತೀವಿ ಅಂತಾ ರೈತರು ಒಪ್ಪಿಕೊಂಡಿದ್ದರು.
ಹೆದ್ದಾರಿಗೆ 2,523 ಶ್ರೀಗಂಧ ಮರಗಳ ಹನನ.. ಸೂಕ್ತ ಪರಿಹಾರ ಕೊಡಲು ಪ್ರಾಧಿಕಾರ ಹಿಂದೇಟು:
ಆದ್ರೆ ಶ್ರೀಗಂಧ ಬೆಳೆಗಾರರು ಸಮ್ಮತಿ ಸೂಚಿಸಿದ ಬಳಿಕ ಕೇವಲ ಭೂಮಿಗೆ ಮಾತ್ರ ಅತಿ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ ಅನ್ನೋದು ಶ್ರೀಗಂಧ ಬೆಳೆಗಾರರ ಆರೋಪ. ಅದೇ ಭೂಮಿಯಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರದ ಹಣ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿರೋದು ಇದೀಗ ರೈತರನ್ನ ಅಡಕತ್ತರಿಯಲ್ಲಿ ಸಿಲುಕಿ ಹಾಕಿಕೊಳ್ಳುವಂತೆ ಮಾಡಿದೆ.
ಯಾವಾಗ 22 ಖಾತೆದಾರರ 2,523 ಮರಗಳು ಹರಣವಾಗುತ್ತೆ ಅಂತಾ ಗೊತ್ತಾಯ್ತೋ ಆಗ, ಪ್ರಾಧಿಕಾರದವ್ರು ಮರಗಳಿಗೆ ಬೆಲೆ ನಿಗದಿ ಮಾಡಲು ಹಿಂದೇಟು ಹಾಕಿದ್ರು. ಅಳೆದು ತೂಗಿ ಕೊನೆಗೆ ಅರಣ್ಯ ಇಲಾಖೆಯೇ ಒಟ್ಟು 61 ಕೋಟಿ ಪರಿಹಾರ ನೀಡುವಂತೆ ಒಪ್ಪಿಗೆ ಸೂಚಿಸಿತ್ತು. ಆದ್ರೆ ಈ ಪರಿಹಾರದ ಹಣವನ್ನ ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂದೇಟು ಹಾಕುತ್ತಿದ್ದು, ಶ್ರೀಗಂಧ ಮರಗಳಿಗೆ ಪರಿಹಾರ ಕೊಡೋ ವಿಚಾರವಾಗಿ ಪ್ರಾಧಿಕಾರದವ್ರು ಬೆಳೆಗಾರರರನ್ನ ಸತಾಯಿಸುತ್ತಿರೋದು ಸಂತ್ರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಕಿಯಿಂದ ಬಾಣಲೆಗೆ ಬಿದ್ದ ಸ್ಥಿತಿ ಶ್ರೀಗಂಧ ಬೆಳೆಗಾರರದ್ದು:
ಮೊದಲೇ ಶ್ರೀಗಂಧ ಬೆಳೆಯ ಮೇಲೆ ಕಳ್ಳಕಾಕರ ಕಾಟ ಹೆಚ್ಚಿತ್ತು. ಕಣ್ಣಿಗೆ ಎಣ್ಣೆ ಬಿಡ್ಕೊಂಡು ರಾತ್ರಿ ಹಗಲೆನ್ನದೇ ಶ್ರೀಂಗಧದ ಮರಗಳನ್ನ ಪೋಷಿಸಿ, ಕಾಪಾಡಿಕೊಂಡು ಬಂದಿದ್ರು. ಆ ಜಾಗದಲ್ಲಿ ಸೊಗಸಾಗಿ ಬೆಳೆದಿರೋ ಈ ಶ್ರೀಗಂಧದ ವನವನ್ನ ನೋಡಿದ್ರೆ, ನಾವಿರುವ ತಾಣವೇ ಗಂಧದ ಗುಡಿ.. ಚಂದದ ಗುಡಿ.. ಶ್ರೀಗಂಧದ ಗುಡಿ.. ಅನ್ನೋ ಕನ್ನಡದ ಕಣ್ಮಣಿ ಡಾ.ರಾಜ್ ಸಾಂಗ್ ನೆನಪಾಗದೇ ಇರದು.
ಆದ್ರೆ ಈಗ ಈ ರೈತರಿಗೆ ತಾವು ಬೆಳೆದ ಮರಗಳನ್ನು ಉಳಿಸಿಕೊಳ್ಳಲು ಅಂಗಲಾಚೋ ಸ್ಥಿತಿ ಬಂದಿದೆ. ಕೋರ್ಟ್ ನ ಪರಿಹಾರದ ಆದೇಶ ಇಟ್ಕೊಂಡ್ ತೋರಿಸೋ ಜರೂರತ್ತು ಎದುರಾಗಿದೆ. ದೇವ್ರು ಕೊಟ್ರೂ ಪೂಜಾರಿ ಕೊಡ್ತಿಲ್ಲಲ್ವಾ ಅನ್ನೋ ಆತಂಕ ಶುರುವಾಗಿದೆ. ಒಂದ್ಕಡೆ ಪರಿಹಾರ ಕೊಡೋದಕ್ಕೆ ಪ್ರಾಧಿಕಾರ ಹಿಂದೆ ಮುಂದೆ ನೋಡ್ತಿರೋದಲ್ಲದೇ ಜಾಗ ಖಾಲಿ ಮಾಡಿ ಅಂತಾ ನೋಟಿಸ್ ಬೇರೆ ನೀಡಿದ್ದಾರೆ. ಶ್ರೀಗಂಧ ಬೆಳೆದಿದ್ದ ರೈತರ ಪಾಡು ಇದೀಗ ಬಾಣಲೆಯಿಂದ ಬೆಂಕಿಗೆ ಬಿದ್ದಂಗೆ ಆಗಿದೆ.
ಶ್ರೀಗಂಧ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಹೈಕೋರ್ಟ್ ಸೂಚನೆ:
ಮೊದಲು ಶ್ರೀಗಂಧದ ಬೆಳೆಗೆ ಬೆಲೆ ಫಿಕ್ಸ್ ಮಾಡಲು ಹಾವು ಏಣಿ ಆಟವನ್ನ ಪ್ರಾಧಿಕಾರ ಮಾಡ್ತು. ಸರ್ಕಾರಿ, ಖಾಸಗಿ ಎಜೆನ್ಸಿ ಅಂತಾ ವರ್ಷಗಟ್ಟಲ್ಲೇ ಸಮಯ ದೂಡುತ್ತಲ್ಲೇ ಬಂತು. ಶ್ರೀಗಂಧ ಮರದ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಅರಣ್ಯ ಇಲಾಖೆಯವರೇ ಕೊಟ್ಟ ಪರಿಹಾರದ ಮೌಲ್ಯವನ್ನ ಪರಿಗಣಿಸಿ, ಹೈ ಕೋರ್ಟ್ ಕೂಡ ಶ್ರೀಗಂಧ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಈಗಾಗಲೇ ಆದೇಶಿಸಿದೆ. ಆದ್ರೆ ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಇದೀಗ ಮೇಲ್ಮನವಿ ಸಲ್ಲಿಸಿರೋ ಪ್ರಾಧಿಕಾರ ಮತ್ತೆ ರೈತರಿಗೆ ನೀಡೋ ಪರಿಹಾರದ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಅಲ್ಲದೇ ಜಾಗವನ್ನ ಬಿಟ್ಟುಕೊಡಿ ಅಂತಾ ನೋಟೀಸ್ ಬೇರೆ ನೀಡಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಶ್ರೀಗಂಧ ಬೆಳೆದು ಸೈ ಅನ್ನಿಸಿಕೊಂಡಿರೋ ವಿಶುಕುಮಾರ್:
ಅಂದಾಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ಶ್ರೀಗಂಧದ ಘಮಲು ಎಲ್ಲೆಡೆ ಹರಡುವಂತೆ ಮಾಡಿದ್ದು ಸದ್ಯ ಹೋರಾಟದಲ್ಲಿ ಭಾಗಿಯಾಗಿರೋ ವಿಶುಕುಮಾರ್. 15 ವರ್ಷದಿಂದಲೂ ಶ್ರೀಗಂಧ ಬೆಳೆಯಲ್ಲಿ ಆಸಕ್ತಿ ವಹಿಸಿ ಶ್ರೀಗಂಧ ಕೃಷಿ ಮಾಡಿಕೊಂಡು ಒಮ್ಮೆ ಕಟಾವು ಕೂಡ ಮಾಡಿದ್ದಾರೆ. ಅಲ್ಲದೇ ಶ್ರೀಗಂಧ ಬೆಳೆಯನ್ನ ಬೆಳೆಯುವಂತೆ ದೇಶ ಮತ್ತು ವಿದೇಶದಲ್ಲೂ ಕೂಡ ಅರಿವು ಮೂಡಿಸುವ ಕೆಲಸವನ್ನ ವಿಶುಕುಮಾರ್ ಮಾಡಿದ್ದಾರೆ.
2017ರಲ್ಲಿ ವಿಶುಕುಮಾರ್, ಆಫ್ರಿಕಾಗೆ ಹೋಗಿ ಆ ದೇಶದ ರೈತರು ಶ್ರೀಗಂಧ ಬೆಳೆಯುವಂತೆ ಪ್ರೋತ್ಸಾಹ ನೀಡಿದ್ರು. ಅಲ್ಲದೆ ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಹೋಗಿ ಶ್ರೀಗಂಧ ಬೆಳೆ ಬಗ್ಗೆ ಅರಿವು ಮೂಡಿಸಿದ್ರು. ಅಲ್ಲದೇ ಪ್ರತಿ ವರ್ಷ ಸಾಲುಮರದ ತಿಮ್ಮಕ್ಕರನ್ನ ಕರೆದು ಗೌರವಿಸಿ, ಎಲ್ಲಾ ರೈತರಿಗೂ ಶ್ರೀಗಂಧ ಬೆಳೆಯುವಂತೆ ಬೆಂಬಲ ನೀಡ್ತಿದ್ರು.
ಬೆಂಗಳೂರಿನಲ್ಲಿ ಕಟಾವು ಮಾಡಿದ ಒಂದೇ ಶ್ರೀಗಂಧ ಮರಕ್ಕೆ ಸಿಕ್ಕಿದೆ 63 ಲಕ್ಷ ಪರಿಹಾರ!
ಹೌದು, ಬೆಂಗಳೂರಿನಲ್ಲಿ ಕಟಾವು ಮಾಡಿದ ಶ್ರೀಗಂಧ ಮರಕ್ಕೆ ಸರ್ಕಾರ ಬರೋಬ್ಬರಿ 63 ಲಕ್ಷ ರೂ ಪರಿಹಾರ ನೀಡಿದೆ. ಆದ್ರೆ ನಮ್ಮ ಸಾವಿರಾರು ಶ್ರೀಗಂಧದ ಮರಗಳನ್ನ ಹೆದ್ದಾರಿಗೋಸ್ಕರ ಕಟಾವು ಮಾಡ್ತಿದ್ದೂ, ಕೊನೆಯ ಪಕ್ಷ ಒಂದು ನ್ಯಾಯಯುತ ಪರಿಹಾರವಾದ್ರೂ ಕೊಡಲಿ ಅನ್ನೋದು ಸಂತ್ರಸ್ತ ರೈತರ ಬೇಡಿಕೆಯಾಗಿದೆ. ಒಟ್ಟಾರೆ ಶ್ರೀಗಂಧ ಬೆಳೀಬೇಕು, ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಅಂತಾ ಕಂಡಿದ್ದ ರೈತರ ಕನಸಂತೂ ಪ್ರಾಧಿಕಾರದ ನಡೆಯಿಂದ ಭಗ್ನವಾಗಿದೆ.
ಅಭಿವೃಧಿ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಗೆ ಶ್ರೀಗಂಧ ಮರಗಳು ಬಲಿಯಾಗೋದು ಪಕ್ಕಾ ಆಗಿದೆ. ಒಂದೆಡೆ ರೈತರು ಶ್ರೀಗಂಧದ ಬೆಳೆ ಬೆಳೆಯಲು ಪ್ರಾಧಿಕಾರದವ್ರು ಅವಕಾಶ ಮಾಡಿಕೊಡ್ತಿಲ್ಲ, ಸರಿ ನಿಮ್ಗೆ ಬಿಟ್ಟು ಕೊಡ್ತೀವಿ ಅಂತಾ ಕೋರ್ಟ್ ಆದೇಶ ಮಾಡಿರೋ ಪರಿಹಾರವನ್ನಾದ್ರೂ ಕೊಡಿ ಅಂದ್ರೂ ಕೇಳ್ತಿಲ್ಲ ಪ್ರಾಧಿಕಾರದ ಅಧಿಕಾರಿಗಳು. ಒಟ್ಟಾರೆ ದೇವ್ರು ಕೊಟ್ರೂ ಪೂಜಾರಿ ಕೊಡದ ಪರಿಸ್ಥಿತಿ ಈ ರೈತರದ್ದಾಗಿದ್ದು ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕಿದೆ.
ಶ್ರೀಗಂಧ ಬೆಳೆಗಾರರಿಂದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ
Published On - 1:12 pm, Sat, 19 December 20