Chitradurga Child Talent: ಆರು ವರ್ಷದ ಬಾಲಕಿ ಚಾಣಾಕ್ಷತನಕ್ಕೆ ಶಿಕ್ಷಕರೇ ಫಿದಾ..

| Updated By: ಸಾಧು ಶ್ರೀನಾಥ್​

Updated on: Feb 19, 2021 | 3:19 PM

Chitradurga Child Talent: ಒಂದನೇ ತರಗತಿಗೆ ಅಡ್ಮಿಷನ್ ಆಗಿರುವ ಆರು ವರ್ಷದ ತಾನ್ವಿ ಎಲ್ಲರ ಗಮನ ಸೆಳೆದಿದ್ದಾಳೆ. ಕಾಲ್ಕೆರೆ ಗ್ರಾಮದಲ್ಲಿ ಕೃಷಿ ಕಾಯಕ ಮಾಡುವ ಮಲ್ಲಿಕಾರ್ಜುನ್ ಮತ್ತು ಪ್ರಿಯಾ ದಂಪತಿಯ ಪುತ್ರಿ ತಾನ್ವಿಯ ಬುದ್ಧಿವಂತಿಕೆ, ಮೆಮೊರಿ ಪವರ್ ಕಂಡು ಶಿಕ್ಷಕರೇ ಫುಲ್ ಫಿದಾ ಆಗಿದ್ದಾರೆ.

Chitradurga Child Talent: ಆರು ವರ್ಷದ ಬಾಲಕಿ ಚಾಣಾಕ್ಷತನಕ್ಕೆ ಶಿಕ್ಷಕರೇ ಫಿದಾ..
ಪಟಪಟನೆ ಉತ್ತರಿಸುವ ತಾನ್ವಿ
Follow us on

ಚಿತ್ರದುರ್ಗ: ಆರು ವರ್ಷದ ಆ ಬಾಲೆಯ ಚಾಣಾಕ್ಷತನಕ್ಕೆ ಶಿಕ್ಷಕರೇ ಫಿದಾ ಆಗಿದ್ದಾರೆ. ಆದಿಕಾಲ ಶಾಸನಗಳಿಂದ ಹಿಡಿದು ಆಧುನಿಕ ಯುಗದ ಸಮಕಾಲೀನ ವಿಷಯಗಳು ಅವಳ ತಲೆಯಲ್ಲಿವೆ. ಹರಳು ಹುರಿದಂತೆ ಪಟಪಟನೆ ಉತ್ತರಿಸುವ ಪರಿ ಎಂಥವರನ್ನೂ ಬೆರಗುಗೊಳಿಸುತ್ತಿದೆ. ವಿಶ್ವದಲ್ಲಿರುವ 195 ದೇಶಗಳ ಹೆಸರು‌ ನಿರರ್ಗಳವಾಗಿ ಹೇಳುವ ಬಾಲೆಯ ಹೆಸರು ತಾನ್ವಿ. ಈಕೆಗೆ ಕೇವಲ ಆರು ವರ್ಷ. ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ದುಮ್ಮಿ ಗ್ರಾಮದ ಜ್ಞಾನ ಜ್ಯೋತಿ ಖಾಸಗಿ ಶಾಲೆಯಲ್ಲಿ ತಾನ್ವಿ ಓದುತ್ತಿದ್ದಾಳೆ. ರಾಜ್ಯ ಮತ್ತು ರಾಜಧಾನಿಗಳ ಹೆಸರು ಚಾಚೂ ತಪ್ಪದೆ ಹೇಳುತ್ತಾಳೆ. ಇತಿಹಾಸ, ಕಲೆ, ಸಂಸ್ಕೃತಿ, ಸಾಹಿತ್ಯ ಸಂಬಂಧಿತ ಯಾವುದೇ ವಿಷಯಗಳನ್ನು ಕೇಳಿದರೂ ಪಟಪಟನೇ ಉತ್ತರಿಸುವ ಚಾಣಾಕ್ಷೆ ಇವಳು.

ಇತರೆ ಮಕ್ಕಳಿಗೂ ಮಾದರಿ
ಒಂದನೇ ತರಗತಿಗೆ ಅಡ್ಮಿಷನ್ ಆಗಿರುವ ಆರು ವರ್ಷದ ತಾನ್ವಿ ಎಲ್ಲರ ಗಮನ ಸೆಳೆದಿದ್ದಾಳೆ. ಕಾಲ್ಕೆರೆ ಗ್ರಾಮದಲ್ಲಿ ಕೃಷಿ ಕಾಯಕ ಮಾಡುವ ಮಲ್ಲಿಕಾರ್ಜುನ್ ಮತ್ತು ಪ್ರಿಯಾ ದಂಪತಿಯ ಪುತ್ರಿ ತಾನ್ವಿಯ ಬುದ್ಧಿವಂತಿಕೆ, ಮೆಮೊರಿ ಪವರ್ ಕಂಡು ಶಿಕ್ಷಕರೇ ಫುಲ್ ಫಿದಾ ಆಗಿದ್ದಾರೆ. ಜಗತ್ತಿನ ಏಳು ಅದ್ಭುತಗಳು, ವಿಶ್ವ ಮಾನ್ಯತೆ ಪಡೆದ 195 ದೇಶಗಳು, 64 ವಿದ್ಯೆ, ಸಪ್ತ ನದಿಗಳು, ಜ್ಞಾನಪೀಠ ಪುರಸ್ಕೃತರು, ರಾಷ್ಟ್ರ ಕವಿಗಳು, ಪಂಪ‌ ಪ್ರಶಸ್ತಿ ಪುರಸ್ಕೃತರು, ಶಾಸನಗಳು, ದೇಶದ ಪ್ರಧಾನಿಗಳು, ರಾಜ್ಯ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪಟಪಟನೆ ಉತ್ತರಿಸುತ್ತಾಳೆ. ಹೀಗಾಗಿ, ನಮ್ಮ ವಿದ್ಯಾರ್ಥಿನಿ ತಾನ್ವಿ ನಮ್ಮೆಲ್ಲರ ಹೆಮ್ಮೆ ಆಗಿದ್ದು ಇತರೆ ಮಕ್ಕಳಿಗೂ ಮಾದರಿ ಆಗಿದ್ದಾಳೆ ಎಂದು ಮುಖ್ಯ ಶಿಕ್ಷಕ ರಂಗಸ್ವಾಮಿ ಹೇಳುತ್ತಾರೆ.

ತಾನ್ವಿಯ ಟ್ಯಾಲೆಂಟ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸಹ ಬಾಲಕಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಬೆನ್ನು ತಟ್ಟಿದ್ದಾರೆ. ಅಂತೆಯೇ ವಿವಿಧ ಮಠಾಧೀಶರು ತಾನ್ವಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಶ್ಲಾಘನಾ ಪತ್ರ

ಗಾಡ್ ಗಿಫ್ಟ್
ಕಂಡಿದ್ದು, ಕೇಳಿದ್ದು ಮರೆಯದೇ ನೆನಪಿಟ್ಟುಕೊಳ್ಳುವುದನ್ನು ಗುರುತಿಸಿ ಮೊದಲಿಗೆ ಪಂಚಾಂಗದ ಬಗ್ಗೆ ಕಲಿಸಿದೆವು. ಬಳಿಕ ಸಂವತ್ಸರ, ನಕ್ಷತ್ರ, ರಾಶಿ, ಅರವತ್ನಾಲ್ಕು ವಿದ್ಯೆ ಹೀಗೆ ಏನೇ ಹೇಳಿದರೂ ಅವಳು ನೆನಪಿಟ್ಟುಕೊಳ್ಳುತ್ತಲೇ ಬಂದಳು. ಶಿಕ್ಷಕರ ಸಲಹೆ ಮೇರೆಗೆ ಇತಿಹಾಸ, ಸಾಹಿತ್ಯ, ಸಾಮಾನ್ಯ ಜ್ಞಾನ, ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಕಲೆ ಹಾಕಿ ತಿಳಿಸಲಾಯಿತು. ಈಗ ದೇಶ ವಿದೇಶದ ಅನೇಕ ವಿದ್ಯಮಾನಗಳ ಬಗ್ಗೆ ನಿರ್ಗಳವಾಗಿ ಉತ್ತರಿಸುತ್ತಾಳೆ‌. ಹೀಗಾಗಿ, ಇಂಥ ಜಾಣೆ ಮಗಳು ನಮ್ಮ ಮಡಿಲಲ್ಲಿ ಜನಿಸಿದ್ದು ಗಾಡ್ ಗಿಫ್ಟ್ ಎಂದು ಭಾವಿಸಿದ್ದೇವೆ ಎಂದು ತಾನ್ವಿ ತಾಯಿ ಪ್ರಿಯಾ ಖುಷಿಪಟ್ಟರು. ಇನ್ನು ತಾತ ಮತ್ತು ಪೋಷಕರ ಆಶಯದಂತೆ ಐಎಎಸ್ ಅಥವಾ ಕೆಎಎಸ್ ಓದಿ ಜನ ಸೇವೆ ಮಾಡುತ್ತೀನಿ ಅಂತಾಳೆ ಪುಟ್ಟ ಹುಡುಗಿ ತಾನ್ವಿ.

ಶಿಕ್ಷಕರೊಂದಿಗೆ ಇರುವ ತಾನ್ವಿ

ಕೋಟೆನಾಡು ಚಿತ್ರದುರ್ಗದಲ್ಲಿ ತನ್ನ ಟ್ಯಾಲೆಂಟ್ ಮೂಲಕವೇ ತಾನ್ವಿ ಎಲ್ಲರ ಗಮನ ಸೆಳೆದಿದ್ದಾಳೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತನ್ನ ಪ್ರತಿಭೆ ಹೊರ ಚೆಲ್ಲಿದ್ದಾಳೆ. ಅಪರೂಪದ ಟ್ಯಾಲೆಂಟ್ ಇರುವ ತಾನ್ವಿಗೆ ಉತ್ತಮ ಶಿಕ್ಷಣ ಸಿಕ್ಕು ಸಾಧನೆಯ ಶಿಖರವೇರಲಿ ಎಂಬುದು ದುರ್ಗದ ಜನರ ಆಶಯವಾಗಿದೆ.

ಇದನ್ನೂ ಓದಿ: Periods: ಮಹಿಳೆಯರ ಸಮಸ್ಯೆಗಳು ಹಲವಾರು; ಅದರಲ್ಲೊಂದು ಅನಿಯಮಿತ ಮುಟ್ಟು.. ಕಾರಣ, ಪರಿಹಾರವೇನು?

ಇದನ್ನೂ ಓದಿ: ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!