ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!

Lip care tips: ಚಳಿಗಾಲದಲ್ಲಿ ನಮ್ಮ ತುಟಿಯ ಕಾಳಜಿಗಾಗಿ ಏನು ಮಾಡಬಹುದು ಎಂಬ ಗೊಂದಲವಿದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ.

ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!
ಸಾಂದರ್ಭಿಕ ಚಿತ್ರ
Follow us
| Updated By: ganapathi bhat

Updated on:Apr 06, 2022 | 7:57 PM

ಮಳೆಗಾಲ, ಚಳಿಗಾಲ, ಬೇಸಿಗೆಕಾಲ.. ಪ್ರತಿಯೊಂದು ಕಾಲವೂ ತನ್ನದೇ ಆದ ಸವಾಲುಗಳೊಂದಿಗೆ ಎದುರಾಗುತ್ತದೆ. ಆಯಾ ಕಾಲವು ಅದರದೇ ಆದ ಖುಷಿ ತಂದಂತೆ, ಸಮಸ್ಯೆಗಳನ್ನೂ ಹೊತ್ತು ತರುತ್ತವೆ. ಚುಮುಚುಮು ಚಳಿ, ತಂಪು ಗಾಳಿ, ಶೀತಲ ವಾತಾವರಣ ತುಂಬಿರುವ ಚಳಿಗಾಲವನ್ನು ನಾವೀಗ ಎದುರಿಸುತ್ತಿದ್ದೇವೆ. ಎಲ್ಲಾ ಅವಧಿಯಂತೆ ಚಳಿಗಾಲದಲ್ಲಿಯೂ ಕೆಲವಷ್ಟು ಸಮಸ್ಯೆಗಳಿರುತ್ತದೆ.

ಚಳಿಗಾಲದಲ್ಲಿ ವಾತಾವರಣದ ಗಾಳಿಯಲ್ಲಿರುವ ತೇವಾಂಶದ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತದೆ. ಇದರಿಂದ ನಮ್ಮ ಚರ್ಮಕ್ಕೆ ಬೇಕಾದಷ್ಟು ತೇವಾಂಶ ಸಿಗದೇ ಹೋಗಬಹುದು. ಚರ್ಮ ಸಂಬಂಧಿ ಸಮಸ್ಯೆಗಳೂ ಎದುರಾಗಬಹುದು. ಜೊತೆಗೆ, ತುಟಿಯ ರಕ್ಷಣೆಯೂ ಸವಾಲಾಗಬಹುದು. ತುಟಿ ಒರಟಾಗುವುದು, ಚರ್ಮ ಬಿರುಕಾಗುವುದು, ತುಟಿ ಒಡೆಯುವುದು, ಒಣಗುವುದು ಇತ್ಯಾದಿ. ಈ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಸೂಕ್ತ ರಕ್ಷಣೆ ಕೈಗೊಳ್ಳಬೇಕು. ನಮ್ಮ ತುಟಿಯ ಕಾಳಜಿಗಾಗಿ ಏನು ಮಾಡಬಹುದು ಎಂಬ ಗೊಂದಲವಿದ್ದರೆ ಈ ಅಂಶಗಳನ್ನು ಗಮನಿಸಿ.

ಸರಿಯಾಗಿ ನೀರು ಕುಡಿಯಿರಿ: ಚಳಿಗಾಲದಲ್ಲಿ ದೇಹದಲ್ಲಿನ ತೇವಾಂಶದ ಪ್ರಮಾಣ ಕಡಿಮೆಯಾಗುತ್ತದೆ. ಅದನ್ನು ಸರಿದೂಗಿಸುವುದಕ್ಕಾಗಿ ಸರಿಯಾಗಿ ನೀರು ಕುಡಿಯುವುದು ಅನಿವಾರ್ಯ. ತುಟಿ ಹಾಗೂ ದೇಹವನ್ನು ಆರೋಗ್ಯವಾಗಿ ಕಾಪಾಡಲು ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯಿರಿ.

ಲಿಪ್ ಬಾಮ್ ಉಪಯೋಗಿಸಿ: ಲಿಪ್ ಬಾಮ್​ಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಅವುಗಳನ್ನು ಬಳಸಿಕೊಳ್ಳುವುದು ಒಳ್ಳೆಯದು. ತುಟಿಯ ತೇವಾಂಶವನ್ನು ಉಳಿಸಿಕೊಳ್ಳಲು ಲಿಪ್ ಬಾಮ್​ಗಳು ಬಹಳಷ್ಟು ಸಹಕಾರಿ.

ಇದನ್ನೂ ಓದಿ: ಬಂಗಾರಪೇಟೆಯ ವೆರೈಟಿ ವೆರೈಟಿ ಪಾನಿ ಪುರಿ.. ಏನಿದರ ವಿಶೇಷ? ಇಲ್ಲಿದೆ ನೋಡಿ

ತುಟಿ ಸವರಿಕೊಳ್ಳುವುದು ಒಳ್ಳೆಯದಲ್ಲ: ಹೌದು, ನಾವು ಸುಲಭವಾಗಿ ಹಾಗೂ ಬಹಳಷ್ಟು ಬಾರಿ ಹೀಗೆಯೇ ಮಾಡುತ್ತೇವೆ. ಚಳಿಯಿಂದ ಒಣಗಿರುವ ತುಟಿಗಳನ್ನು ನಾಲಗೆಯಿಂದ ಸವರಿಕೊಳ್ಳುತ್ತೇವೆ. ಇದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ತುಟಿಗಳು ಮತ್ತೆ ಮತ್ತೆ ಒಣಗುತ್ತವೆ. ಹಾಗಾಗಿ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದೇ ಒಳ್ಳೆಯದು.

ಮನೆಮದ್ದು ಬಳಸಿ: ಚಳಿಗಾಲದಲ್ಲಿ ತುಟಿಗಳ, ದೇಹದ ಆರೋಗ್ಯ ಕಾಪಾಡಿಕೊಳ್ಳಲು ದ್ವಿದಳ ಧಾನ್ಯಗಳನ್ನು ಸೇವಿಸುವುದು ಉತ್ತಮ. ಹೆಸರುಕಾಳು, ತೊಗರಿ, ಕಡಲೆ, ಅವರೆ ಮುಂತಾದ ಕಾಳು ಪದಾರ್ಥಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ. ಅಲೋವೀರಾ ಮತ್ತು ಜೇನು ಕೂಡ ತುಟಿಗಳಲ್ಲಿ ತೇವಾಂಶ ಕಾಪಾಡಲು ಸಹಕರಿಸುತ್ತವೆ.

ತುಟಿ ಚರ್ಮವನ್ನು ಕಚ್ಚಬೇಡಿ: ಹಲವರು ಈ ಅಭ್ಯಾಸ ಹೊಂದಿರುತ್ತಾರೆ. ತುಟಿಗಳನ್ನು ಕಚ್ಚುವುದು, ಒಡೆದ ಚರ್ಮ ಕೀಳುವುದು ಇತ್ಯಾದಿ. ಈ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ತುಟಿಗೆ ಹೆಚ್ಚಿನ ಹಾನಿ ಉಂಟಾಗಬಹುದು. ಜೊತೆಗೆ, ಹೆಚ್ಚು ಚರ್ಮ ಕಿತ್ತರೆ ರಕ್ತಸ್ರಾವವೂ ಉಂಟಾಗಬಹುದು.

ಚರ್ಮ ಒಣಗುವ, ತೇವಾಂಶ ಕಳೆದುಕೊಳ್ಳುವ ಸಮಸ್ಯೆ ಎಷ್ಟು ದೊಡ್ಡದಾಗಿ ಕಂಡರೂ ಸುಲಭ ಉಪಾಯಗಳಿಂದ ಅವುಗಳನ್ನು ಇಲ್ಲವಾಗಿಸಬಹುದು. ಹೆಚ್ಚು ಹಣ ವ್ಯಯಿಸದೆ, ಸುಲಭವಾಗಿ, ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದಲೇ ತುಟಿಯ ಆರೋಗ್ಯ ಕಾಪಾಡಿಕೊಳ್ಳಬಹುದು. ಮಿತವಾಗಿ ನೀರು ಸ್ವೀಕರಿಸುವುದು ಎಲ್ಲಕ್ಕಿಂತ ಮುಖ್ಯ. ದೇಹವನ್ನು ತೇವಾಂಶಭರಿತವಾಗಿಡಲು ನಿಗದಿತ ಪ್ರಮಾಣದಲ್ಲಿ ನೀರು ಕುಡಿಯಬೇಕು.

ಇದನ್ನೂ ಓದಿ: ಕೆಲವರು ಎಷ್ಟೇ ಬುದ್ಧಿವಂತರಾದರೂ.. ಜೀವನದಲ್ಲಿ ಸಕ್ಸಸ್ ಕಾಣಲ್ಲ, ಯಾಕೆ?

Published On - 10:04 pm, Tue, 16 February 21