Bangarpet panipuri ಬಾಯಲ್ಲಿ ನೀರು ತರಿಸುತ್ತೆ ಬಂಗಾರಪೇಟೆಯ ವೆರೈಟಿ ವೆರೈಟಿ ಪಾನಿ ಪುರಿ.. ಏನಿದರ ವಿಶೇಷ? ಇಲ್ಲಿದೆ ನೋಡಿ
Bangarpet panipuri ಪಾನಿಪುರಿ ಎಂದರೆ ಕೇವಲ ರಸ್ತೆ ಬದಿಯ ವ್ಯಾಪಾರ ಎನ್ನುವಂತಿತ್ತು ಆದರೆ ಇಂದು ಪಾನಿಪುರಿ ಎನ್ನುವುದು ಬಹುದೊಡ್ಡ ಉದ್ಯಮವಾಗಿ ಮಾರ್ಪಾಟಾಗಿದೆ. ಅಷ್ಟೇ ಅಲ್ಲ ಬಂಗಾರಪೇಟೆ ಪಾನಿಪುರಿ ಎಂದರೆ ಅದೊಂದು ವಿಶೇಷ ರುಚಿ ಹಾಗೂ ವಿಭಿನ್ನ ಟೇಸ್ಟ್ ಮೂಲಕ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ.
ಕೋಲಾರ: ಚಿನ್ನದ ನಾಡು ಕೋಲಾರ ಎಂದ ಕೂಡಲೆ ಎಲ್ಲರಿಗೂ ನೆನಪಾಗುವುದು ಚಿನ್ನ. ಆದರೆ ಕೇವಲ ಚಿನ್ನದ ಗಣಿಗಷ್ಟೇ ಅಲ್ಲ ಕೋಲಾರದ ಬಂಗಾರಪೇಟೆ ತಿಂಡಿ ತಿನಿಸುಗಳಿಗೂ ಜಿಲ್ಲೆ ಖ್ಯಾತಿ ಪಡೆದಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಕೂಡ ಬಂಗಾರಪೇಟೆ ಪಾನಿ ಪುರಿ ಅಂದರೆ ಸಾಕು.. ಸಿಕ್ಕಾಪಟ್ಟೆ ಪ್ರಖ್ಯಾತಿ ಪಡೆದಿದೆ. ಅಷ್ಟಕ್ಕೂ ಬಂಗಾರಪೇಟೆಯ ಪಾನಿ ಪುರಿಯನ್ನು (Bangarpet panipuri) ತಿನ್ನದವರು ನಿಜಕ್ಕೂ ಅಭಿರುಚಿಯ ಉತ್ತುಂಗಕ್ಕೆ ಇನ್ನೂ ಏರಿಲ್ಲ ಎನ್ನುವ ಮಾತಿದೆ.
ಬಂಗಾರಪೇಟೆ ಪಾನಿ ಪುರಿ: ಸಾಮಾನ್ಯವಾಗಿ ತಿಂಡಿ ತಿನಿಸುಗಳು ಎಂದರೆ ಯಾರು ತಾನೆ ಇಷ್ಟ ಪಡೋದಿಲ್ಲ ಹೇಳಿ, ಅದರಲ್ಲೂ ವೀಕೆಂಡ್ ಬಂದರೆ ಸಾಕು ಜನರು ಒಂದಷ್ಟು ಭಿನ್ನ ಅನುಭವ ಪಡೆಯಲು ಸಿನಿಮಾ, ಪಾರ್ಕ್, ಅಥವಾ ಯಾವುದಾದರೂ ತಂಪಾದ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ಬಂಗಾರಪೇಟೆಯ ಜನರು ಮಾತ್ರ ಹಾಗಲ್ಲ.. ವೀಕೆಂಡ್ ಬಂದರೆ ಸಾಕು ಅಥವಾ ದಿನದ ಸಂಜೆಯಾದರೆ ಸಾಕು ಪಾನಿಪುರಿ ತಿನ್ನುವುದಕ್ಕೆ ಮನೆಯಿಂದ ಹೊರಗೆ ಬರುತ್ತಾರೆ. ಬಂಗಾರಪೇಟೆ ಪಾನಿಪುರಿ ಹೆಸರು ಹೇಳಿದರೆ ಸಾಕು ರಾಜ್ಯ ಹಾಗೂ ಹೊರ ರಾಜ್ಯದ ಜನರ ಬಾಯಲ್ಲೂ ನೀರು ಬರುತ್ತದೆ. ಅಷ್ಟರ ಮಟ್ಟಿಗೆ ಪಾನಿಪುರಿ ಫೇಮಸ್ ಆಗಿದೆ.
ರಸ್ತೆ ಬದಿ ಅಂಗಡಿ ಇಂದು ದೊಡ್ಡ ಉದ್ಯಮವಾಗಿದ್ದು ಹೇಗೆ? ಮೊದಲಿಗೆ ಪಾನಿ ಪುರಿ ಎಂದರೆ ಕೇವಲ ಬೀದಿ ಬದಿಯ ವ್ಯಾಪಾರ ಎನ್ನುವಂತಿತ್ತು. ಆದರೆ ಇಂದು ಪಾನಿ ಪುರಿ ಎನ್ನುವುದು ಬಹುದೊಡ್ಡ ಉದ್ಯಮವಾಗಿ ಮಾರ್ಪಾಟಾಗಿದೆ. ಅಷ್ಟೇ ಅಲ್ಲ ಬಂಗಾರಪೇಟೆ ಪಾನಿ ಪುರಿ ಎಂದರೆ ಅದೊಂದು ವಿಶೇಷ ರುಚಿ ಹಾಗೂ ವಿಭಿನ್ನ ಟೇಸ್ಟ್ ಮೂಲಕ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ. ಹೀಗಾಗಿ ಇಂದು ಮೈಸೂರು ದಸರಾದಿಂದ ಹಿಡಿದು ಶ್ರೀಮಂತರ ಮನೆಯ ಮದುವೆ ಮನೆಗಳಲ್ಲಿ ಬಂಗಾರಪೇಟೆ ಪಾನಿ ಪುರಿ ಸ್ಟಾಲ್ ಹಾಕುವುದು ಒಂದು ಪ್ರತಿಷ್ಠೆ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಪಾನಿ ಪುರಿ ಉದ್ಯಮ.
ಬಂಗಾರಪೇಟೆ ಪಾನಿ ಪುರಿ ಇತಿಹಾಸ ಏನು? ಕಳೆದ ಹಲವು ದಶಕಗಳ ಹಿಂದೆ ದೂರದ ಬಾಂಬೆಯಿಂದ ಕೋಲಾರದ ಬಂಗಾರಪೇಟೆ ಪಟ್ಟಣಕ್ಕೆ ಬಂದಂತಹ ಕೆಲವು ವ್ಯಾಪಾರಿಗಳು ಮೊದಲಿಗೆ ಚಿಕ್ಕದಾಗಿ ಪಾನಿ ಪುರಿ ಅಂಗಡಿಗಳನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಬಂಗಾರಪೇಟೆ ಪಾನಿ ಪುರಿಯಲ್ಲಿ ಹೊಸದೊಂದು ಬಗೆಯ ಸಂಶೋಧನೆ ಆರಂಭವಾಗಿತ್ತು.
ಪಾನಿ ಪುರಿ ತಿನ್ನುವ ಪಾನಿ ಪುರಿ ಪ್ರಿಯರ ಆಸಕ್ತಿ, ಅಭಿರುಚಿಗನುಗುಣವಾಗಿ ಹೊಸ ಹೊಸ ರುಚಿಗಳನ್ನು ಹೊಸ ಹೊಸ ರೀತಿಯಲ್ಲಿ ಮಾಡುವುದಕ್ಕೆ ಶುರು ಮಾಡಿದರು. ಇದು ದಿನೇ ದಿನೇ ಪಾನಿ ಪುರಿ ಪ್ರಿಯರನ್ನು ಹೆಚ್ಚಿಸುತ್ತಾ ಬಂದು ಇಂದಿಗೆ ದೇಶದ ಹಲವಾರು ರಾಜ್ಯಗಳಲ್ಲಿ ಬಂಗಾರಪೇಟೆ ಪಾನಿ ಪುರಿ ಎಂದರೆ ಹೆಸರುವಾಸಿಯಾಗಿ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದು, ಸಾವಿರಾರು ಕುಟುಂಬಗಳು ಇಂದು ಪಾನಿ ಪುರಿ ಅಂಗಡಿಗಳಿಂದಲೇ ಜೀವನ ಸಾಗಿಸುತ್ತಿವೆ.
ವೈವಿಧ್ಯ ರುಚಿಯ ಪಾನಿ ಪುರಿ ಇಲ್ಲಿದೆ! ಮೊದಲಿಗೆ ಪಾನಿ ಪುರಿ ಎಂದರೆ ಒಂದು ಅಥವಾ ಎರಡು ವೆರೈಟಿ ಇದ್ದರೆ ಹೆಚ್ಚು ಆದರೆ ಇಂದು ಬಂಗಾರಪೇಟೆ ಪಾನಿ ಪುರಿಯ ಪ್ರಭಾವದಿಂದ ನೂರಾರು ವೆರೈಟಿ ಪಾನಿ ಪುರಿ ಸಿಗುತ್ತದೆ. ಅದರಲ್ಲೂ ಬಂಗಾರಪೇಟೆಯಲ್ಲಿ ಪಾನಿ ಪುರಿ, ಮಸಾಲೆ ಪುರಿ, ಡಿಕ್ಕಿ ಮಾಸಾಲಾ, ಭೇಲ್ಪುರಿ, ನಿಪ್ಪಟ್ ಬೇಲ್, ಚಕ್ಕಲಿ ಬೇಲ್, ಸಿಸಿಎಂ, ಮಿಕ್ಸ್ಚರ್ ಮಸಾಲಾ, ತರಕಾರಿ ಮಲಾಸಾ, ಗುಲ್ಕನ್ ಮಿಕ್ಸ್, ಬೋಟಿ ಬೇಲ್, ಕರಿಬೇವು ಮಸಾಲಾ, ಪುದೀನಾ ಮಸಾಲಾ, ಸಲಾಡ್ ಮಾಸಾಲೆ, ಡಿಪ್ ಪಾನಿಪುರಿ, ಸೆವೆನ್ ಡಿ ಪಾನಿಪುರಿ, ಪ್ರೂಟ್ ಮಸಾಲಾ, ಆಲೂ ಪೂರಿ, ಹೀಗೆ ಸುಮಾರು 50ರಿಂದ 60 ರೀತಿಯ ಪಾನಿ ಪುರಿ ಮಾಡಲಾಗುತ್ತದೆ. ಅಷ್ಟೇ ಅಲ್ಲ ತಂಪು ಪಾನೀಯಗಳಿಗೂ ಮಸಾಲೆ ಹಾಕಿ ಅದನ್ನು ವಿಶೇಷವಾಗಿ ನೀಡುತ್ತಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರನಟರ ಮನೆ ಪ್ರವೇಶ ಮಾಡಿದ ಬಂಗಾರಪೇಟೆ ಪಾನಿ ಪುರಿ! ಬಂಗಾರಪೇಟೆ ಪಾನಿ ಪುರಿ ಎಂದರೆ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಬಂಗಾರಪೇಟೆ ಪಾನಿ ಪುರಿ ಎನ್ನುವ ಹೆಸರಲ್ಲೇ ಹೆಸರುವಾಸಿಯಾಗಿದೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಇಷ್ಟೇ ಅಲ್ಲಾ ಇದು ದೊಡ್ಡ ದೊಡ್ಡ ಫುಡ್ ಫೆಸ್ಟಿವಲ್ಗಳಲ್ಲೂ ಬಂಗಾರಪೇಟೆ ಪಾನಿ ಪುರಿಗೆ ವಿಶೇಷ ಸ್ಥಾನಮಾನ ಇದೆ. ಅಷ್ಟೇ ಅಲ್ಲ.. ಇದು ಮದುವೆ ಸಮಾರಂಭಗಳಿಗೂ ಪ್ರವೇಶಿಸಿದೆ. ರಿಸೆಪ್ಷನ್ ಅಂದ್ರೆ ಮದುವೆ ಆರತಕ್ಷತೆ ಮುಂತಾದ ಘಳಿಗೆಯಲ್ಲಿ ಮೊದಲ ಪ್ರಾಶಸ್ತ್ಯ ಈ ಪಾನಿ ಪುರಿ ತಿಂಡಿಗೆ ಪ್ರಾಪ್ತಿಯಾಗಿದೆ.
ಆರಂಭದ ದಿನಗಳಲ್ಲಿ ಪಾನಿ ಪುರಿ ಕೇವಲ ಬೀದಿ ಬದಿ ವ್ಯಾಪಾರವಾಗಿ ಮಾತ್ರ ಸೀಮಿತವಾಗಿತ್ತು. ಆದರೆ ಇದು ದಿನ ಕಳೆದಂತೆ ಇದೊಂದು ದೊಡ್ಡ ಉದ್ದಿಮೆಯಾಗಿ ಪರಿಣಮಿಸಿ ರಾಜ್ಯದ ಪ್ರಮುಖ ನಗರಗಳಲ್ಲೂ ಬಂಗಾರಪೇಟೆ ಪಾನಿ ಪುರಿ ಎನ್ನುವ ಹೆಸರಲ್ಲೇ ದೊಡ್ಡ ದೊಡ್ಡ ಅಂಗಡಿಗಳು ತಲೆ ಎತ್ತಿದ್ದು, ಬಂಗಾರಪೇಟೆ ಪಾನಿ ಪುರಿ ತಯಾರು ಮಾಡಲು ಬಳಸುವ ವಸ್ತುಗಳನ್ನು ಸರಬರಾಜು ಮಾಡೋದಕ್ಕೆಂದೇ ಗುಡಿ ಕೈಗಾರಿಕೆಗಳು ಆರಂಭವಾಗಿವೆ. ಹಾಗಾಗಿ ಇಂದಿಗೆ ಪಾನಿ ಪುರಿ ಕೇವಲ ಬಾಯಲ್ಲಿ ನೀರು ತರಿಸುವ ಖಾದ್ಯವಾಗಿ ಉಳಿದಿಲ್ಲ. ಇದೊಂದು ಲಕ್ಷ ಲಕ್ಷ ಸಂಪಾದನೆ ಮಾಡುವ ಉದ್ಯಮವಾಗಿ ಬೆಳೆದಿದೆ.
ಪಾನಿ ಪುರಿ ವ್ಯಾಪಾರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಶುರುವಾಗಿದೆ, ಕೇವಲ ನಮ್ಮ ರಾಜ್ಯವಷ್ಟೇ ಅಲ್ಲಾ ಹೊರ ರಾಜ್ಯಗಳಿಂದಲೂ ಒಳ್ಳೆಯ ಬೇಡಿಕೆ ಇದೆ, ಜನರ ಆಸಕ್ತಿಗೆ ತಕ್ಕಂತೆ ಹೊಸ ವೆರೈಟಿ ಮಾಡುತ್ತಿದ್ದೇವೆ. ಬೇರೆ ರಾಜ್ಯದ ಜನರು ಸಮಾರಂಭಗಳಲ್ಲಿ ಪಾನಿ ಪುರಿ ಸ್ಟಾಲ್ ಮಾಡುವುದು ಹೊಸ ಟ್ರೆಂಡ್ ಆಗಿದೆ. ಹಾಗಾಗಿ ಸಂಪಾದನೆಯೂ ಚೆನ್ನಾಗಿದೆ ಎಂದು ಪಾನಿಪುರಿ ವ್ಯಾಪಾರಿ ಪ್ರಸನ್ನ ಹೇಳಿದ್ದಾರೆ.
ತಿನ್ನುವ ಮುನ್ನ ಎಚ್ಚರಾ! ಬೇಕರಿಯಲ್ಲಿ ಅವಧಿ ಮುಗಿದ ತಿಂಡಿ ಮಾರಾಟ, ಮಾಲೀಕನಿಗೆ ದಂಡ
Published On - 2:51 pm, Wed, 10 February 21