Periods: ಮಹಿಳೆಯರ ಸಮಸ್ಯೆಗಳು ಹಲವಾರು; ಅದರಲ್ಲೊಂದು ಅನಿಯಮಿತ ಮುಟ್ಟು.. ಕಾರಣ, ಪರಿಹಾರವೇನು?
Periods: ಕೇವಲ ಹೊಟ್ಟೆ ನೋವು ಮಾತ್ರ ಇದ್ದರೆ ಹೇಗಾದರೂ ತಡೆದುಕೊಳ್ಳಬಹುದೇನೋ. ಆದರೆ ಇದರ ಜೊತೆಗೆ ಸುಸ್ತು, ಬೆನ್ನು ನೋವು, ಕೈ ಕಾಲುಗಳ ಸ್ನಾಯುಗಳ ಸೆಳೆತದಿಂದ ಜೀವವೆ ಹೋಗುವುದೇ ಒಳಿತು ಎನ್ನುವಷ್ಟು ಭಾಸವಾಗುತ್ತದೆ. ಕೆಲವರಿಗೆ ವಾಂತಿಯಾಗುವ ಸಾಧ್ಯತೆಯು ಹೆಚ್ಚಿರುತ್ತದೆ.
ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟಾಗುತ್ತದೆ (Periods). ಇದು ಪ್ರಕೃತಿ ನಿಯಯ. ಗರ್ಭಾಶಯದಿಂದಾಗುವ ರಕ್ತ ಸ್ರಾವವೇ ಮುಟ್ಟು (Menstruation). ಸಾಮಾನ್ಯವಾಗಿ ಹನ್ನೆರಡು ಅಥವಾ ಹದಿಮೂರನೇ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಮೊದಲು ಮುಟ್ಟಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ 10ನೇ ವಯಸ್ಸಿಗೆ ಮುಟ್ಟಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಆಹಾರವೂ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮುಟ್ಟಿನ ಸಮಯದಲ್ಲಿ ಆಗುವ ಹೊಟ್ಟೆ ನೋವು ಯಾವ ವೈರಿಗೂ ಬೇಡ. ಏಕೆಂದರೆ ಆ ನೋವನ್ನು ತಡೆಯಲು ಸಾಧ್ಯವಿಲ್ಲ. ಮುಟ್ಟಾದ ಮೊದಲ ಮೂರು ದಿನಗಳು ನರಕಕ್ಕೆ ಹೋಗಿ ಬಂದಂತಾಗುತ್ತದೆ. ಅತಿರೇಕದ ಹೊಟ್ಟೆ ನೋವಿನಿಂದ ಊಟವೂ ಸೇರುವುದಿಲ್ಲ. ಕೆಲವೊಮ್ಮೆ ಜೀವವೆ ಹೋಗಲಿ ಎನಿಸುವಷ್ಟು ನರಕಯಾತನೆ ಅನುಭವಿಸುತ್ತಾರೆ ಹೆಣ್ಣು ಮಕ್ಕಳು.
ಕೇವಲ ಹೊಟ್ಟೆ ನೋವು ಮಾತ್ರ ಇದ್ದರೆ ಹೇಗಾದರೂ ತಡೆದುಕೊಳ್ಳಬಹುದೇನೋ. ಆದರೆ ಇದರ ಜೊತೆಗೆ ಸುಸ್ತು, ಬೆನ್ನು ನೋವು, ಕೈ ಕಾಲುಗಳ ಸ್ನಾಯುಗಳ ಸೆಳೆತದಿಂದ ಜೀವವೆ ಹೋಗುವುದೇ ಒಳಿತು ಎನ್ನುವಷ್ಟು ಭಾಸವಾಗುತ್ತದೆ. ಕೆಲವರಿಗೆ ವಾಂತಿಯಾಗುವ ಸಾಧ್ಯತೆಯು ಹೆಚ್ಚಿರುತ್ತದೆ. ಪ್ರತಿ ತಿಂಗಳು ಆಗುವ ಮುಟ್ಟು ಸುಮಾರು 4 ರಿಂದ 5 ದಿನಗಳ ವರೆಗೆ ರಕ್ತಸ್ರಾವವಾಗುತ್ತದೆ. ಮೊದಲು ಎರಡು ಅಥವಾ ಮೂರು ದಿನಗಳ ಕಾಲ ನೋವಿನ ಯಾತನೆ ಅನುಭವಿಸುತ್ತಾರೆ. ಎಲ್ಲರಿಗೂ ಈ ಋತು ಚಕ್ರದ ವೇಳೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಮುಟ್ಟಾದರೂ ಯಾವುದೇ ನೋವು ಕಾಣಿಸಿಕೊಳ್ಳಲ್ಲ. ಆದರೆ ಬಹುತೇಕ ಹೆಣ್ಣಿಗೆ ನೋವು ಇರುತ್ತದೆ.
ಮುಟ್ಟಾಗುವ ನಾಲ್ಕು ಅಥವಾ ಐದು ದಿನಗಳ ಮುಂಚೆಯೇ ಕೆಲವು ಸೂಚನೆಗಳು ಸಿಗುತ್ತವೆ. ಕಾಲುಗಳ ಸೆಳೆತ, ಸುಸ್ತು, ಬೆನ್ನು ನೋವು, ಕೋಪದ ಜೊತೆಗೆ ತಲೆ ನೋವಾಗುತ್ತದೆ. ಅಲ್ಲದೇ ಬಿಳಿ ಸರೆಗು ಹೋಗುವುದು, ಮುಖದಲ್ಲಿ ಮೊಡವೆ ಏಳುವುದು ಮತ್ತು ಬಹು ಮುಖ್ಯವಾಗಿ ಕೆಲಸ ಕಾರ್ಯಗಳನ್ನು ಮಾಡಲು ಆಸಕ್ತಿ ಅಥವಾ ಉಲ್ಲಾಸ ಇಲ್ಲದಿರುವುದು. ಇವೆಲ್ಲಾ ಮುಟ್ಟಾಗುವ ಲಕ್ಷಣಗಳಾಗಿವೆ.
ಹೆಣ್ಣಿಗೆ 14 ವರ್ಷವಾದರೂ ಮುಟ್ಟು ಆರಂಭವಾಗದಿದ್ದರೇ ಅದನ್ನು ಪ್ರೈಮರಿ ಎ-ಮೆನೋರಿಯಾ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಬಹುಮುಖ್ಯವಾಗಿ ಹಾರ್ಮೊನ್ ಸಮಸ್ಯೆಯಾಗಿರುತ್ತದೆ. 14 ವರ್ಷವಾದರೂ ಎದೆ, ಕಂಕುಳಲ್ಲಿ ಕೂದಲು ಸೇರಿದಂತೆ ಹಲವು ಸ್ತ್ರೀ ಲಕ್ಷಣಗಳು (ಫೆಮಿನೈಸ್ ಫ್ಯೂಚರ್ಗಳು) ಕಂಡುಬರದಿದ್ದರೆ ಅಂತಹ ಹೆಣ್ಣು ಮಕ್ಕಳನ್ನು ಪರೀಕ್ಷೆ ಮಾಡಲಾಗುತ್ತದೆ. ಜೊತೆಗೆ ಇವೆಲ್ಲಾ ಲಕ್ಷಣಗಳಿದ್ದೂ ಮುಟ್ಟಾಗದಿದ್ದರೇ 16 ವರ್ಷದ ವರೆಗೆ ಯಾವುದೇ ವೈದ್ಯರ ಸಲಹೆ ಅಗತ್ಯವಿರುವುದಿಲ್ಲ ಎಂದು ಸ್ತ್ರೀ ರೋಗ ತಜ್ಞೆ ಡಾ. ಶಾಂತಲಾ ಹೇಳುತ್ತಾರೆ. ಅನಿಯಮಿತ ಮುಟ್ಟಾಗುವುದಕ್ಕೆ (Irregular Periods) ಕಾರಣವೇನು? ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೆ ಕಾಡುವ ದೊಡ್ಡ ಸಮಸ್ಯೆ ಎಂದರೆ ಇರ್ರೆಗ್ಯುಲರ್ ಪೀರಿಯಡ್ಸ್. ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಪೀರಿಯಡ್ಸ್ ಆಗುತ್ತಿಲ್ಲ ಎಂದು ಬಹಳ ಹೆಣ್ಣು ಮಕ್ಕಳ ಬಾಯಲ್ಲಿ ಕೇಳಬಹುದು. ಇದಕ್ಕೆ ಪರಿಹಾರವಾಗಿ ಸಾಕಷ್ಟು ಚಿಕಿತ್ಸೆಯನ್ನು ಪಡೆಯುತ್ತಾರೆ. ಕೆಲವರಿಗೆ ಔಷಧಿಯನ್ನು ಪಡೆದ ನಂತರ ನಿಯಮಿತವಾಗಿ ಮುಟ್ಟಾಗುತ್ತದೆ. ಇನ್ನು ಕೆಲವರಿಗೆ ಈ ಸಮಸ್ಯೆ ಮುಂದುವರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಆಹಾರ ಸಮಸ್ಯೆ ಎನ್ನಬಹುದು.
ಮೊದಲೆಲ್ಲಾ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ಆಹಾರವನ್ನು ಸೇವಿಸುತ್ತಿದ್ದರು. ದೇಹದ ಸಮತೋಲನ ಕಾಪಾಡುವುದಕ್ಕೆ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ಅನಿವಾರ್ಯ. ಆದರೆ ಜಂಕ್ ಫುಡ್ಗಳ (Junk Food) ಆಗಮನದಿಂದ ಅವುಗಳು ಕೇವಲ ಬಾಯಿಗೆ ರುಚಿ ಸಿಗುತ್ತದೆಯೇ ಹೊರತು ಯಾವುದೇ ಪೌಷ್ಟಿಕಾಂಶಗಳಿಂದ ಕೂಡಿರುವುದಿಲ್ಲ. ಇದನ್ನು ಅತಿಯಾಗಿ ಸೇವಿಸಿದಾಗ ಅನಿಯಮಿತ ಮುಟ್ಟಾಗುವುದಕ್ಕೆ ಕಾರಣವಾಗುತ್ತದೆ. ಇನ್ನು ಕೆಲಸ ಅಥವಾ ಕುಟುಂಬ ಸೇರಿದಂತೆ ಹಲವು ವಿಚಾರಗಳ ಒತ್ತಡದಿಂದಲೂ ಅನಿಯಮಿತ ಮುಟ್ಟಾಗುತ್ತಾರೆ. ಥೈರಾಯ್ಡ್ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಅನುವಂಶಿಕಗಳೆಲ್ಲವೂ ಇದಕ್ಕೆ ಕಾರಣವಾಗುತ್ತದೆ.
ಪರಿಹಾರವೇನು? ಸಾಮಾನ್ಯವಾಗಿ ಮುಟ್ಟಾದಾಗ ನೋವಿನ ಪರಿಹಾರಕ್ಕೆ ಹಲವು ಮದ್ದನ್ನು ಹುಡುಕುತ್ತಾರೆ. ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಾಗ ಮೆಡಿಕಲ್ಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಮುಟ್ಟೆನ್ನುವುದು ನೈಸರ್ಗಿಕ ಕ್ರಿಯೆ. ಆದ್ದರಿಂದ ಗುಳಿಗೆಗಳನ್ನು ತೆಗೆದುಕೊಳ್ಳುವುದು ಒಳಿತಲ್ಲ. ಇದಕ್ಕೆ ಬದಲಾಗಿ ಪ್ರಕೃತಿದತ್ತ ಆಹಾರಗಳನ್ನು ಸೇವಿಸುವುದು ಸೂಕ್ತ. ಅತಿಯಾದ ಖಾರ ಪದಾರ್ಥ, ಕೊಬ್ಬಿನ ಅಂಶಗಳ ಆಹಾರಗಳನ್ನು ಕಡಿಮೆ ಮಾಡಿ ಹಣ್ಣು ಹಂಪಲುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ನೀರನ್ನು ಹೆಚ್ಚು ಕುಡಿದಾಗ ಹೊಟ್ಟೆ ನೋವು ಮತ್ತು ನಿಯಮಿತ ಪೀರಿಯಡ್ಸ್ ಹೆಚ್ಚು ಒಳ್ಳೆಯದು. ಅತಿ ಮುಖ್ಯವಾಗಿ ತರಕಾರಿ ತಿನ್ನುವುದು ಇಷ್ಟವಾಗದೇ ಇದ್ದರೂ ಆರೋಗ್ಯ ದೃಷ್ಟಿಯಿಂದ ತರಕಾರಿಯನ್ನು ಹೆಚ್ಚು ಬಳಸಬೇಕು. ಹೊಟ್ಟೆಯ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮಗಳನ್ನು ಮಾಡಬೇಕು.
ಮುಟ್ಟಾದಾಗ ಮುಟ್ಟಬಾರದು ಏಕೆ.. ವೈಜ್ಞಾನಿಕ ಕಾರಣವೇನು? ಈಗಲೂ ಜನರಲ್ಲಿ ಇರುವ ಕೆಟ್ಟ ಯೋಚನೆಗಳೆಂದರೆ ಮುಟ್ಟದಾಗ ಮಹಿಳೆಯರನ್ನು ಮುಟ್ಟಬಾರದು. ಅವರನ್ನು ಮನೆಯ ಒಳಗೆ ಬಾರದಂತೆ ತಡೆಯುವುದು, ಮುಟ್ಟಿನ ಸಮಯದಲ್ಲಿ ಅವರಿಗಾಗಿ ಬೇರೆ ಬಟ್ಟೆ, ತಟ್ಟೆ ಮತ್ತು ಇರಲು ಜಾಗವನ್ನು ನೀಡುವುದು. ಇವೆಲ್ಲಾ ಈಗಲೂ ಹೆಣ್ಣನ್ನು ಪ್ರತಿಕ್ಷಣ ಕುಗ್ಗಿಸುವ ಆಚರಣೆಗಳು.
ಮುಟ್ಟಿದರೆ ಮುನಿಯಾಗುತ್ತಾಳೆ ಹೌದು, ವೈಜ್ಞಾನಿಕವಾಗಿ ಹೇಳುವಾಗ ಹೆಣ್ಣು ಮುಟ್ಟಾದ ಸಮಯದಲ್ಲಿ ಆಕೆ ಗಂಡನ ಜೊತೆ ಲೈಂಗಿಕ ಕ್ರಿಯೆಯಿಂದ ದೂರವಿರಬೇಕಾಗುತ್ತದೆ. ಜೊತೆಗೆ ಆಕೆಗೆ ಯಾವುದೇ ಸೋಂಕು ತಾಗದಂತೆ ರಕ್ಷಣೆ ಮಾಡಲು ಒಂದು ಕೋಣೆಯಲ್ಲಿ ಆಕೆಯನ್ನು ಇರಿಸುವುದು ಸೂಕ್ತವಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪೀರಿಯಡ್ಸ್ ಅಂದ್ರೇನೇ ಹೆಣ್ಣು ಮಗಳು ಬಸವಳಿದು, ಬಸಿದು ಹೋಗಿರುತ್ತಾಳೆ. ಆ ಸಮಯದಲ್ಲಿ ಅವಳ ಮೇಲೆ ಸಣ್ಣ ವಸ್ತು ಬೀಳುವುದು, ಒಂದು ಸ್ಪರ್ಷ ಸಹ ಹಿಂಸೆಯಾಗಿ ಕಾಡುತ್ತದೆ. ಹಾಗಾಗಿ, ಯಾವುದೂ ಬೇಡ. ಯಾರೂ ಬೇಡ. ಒಬ್ಬಂಟಿಯಾಗಿ ಬಿಟ್ಟುಬಿಡಿ ಎಂದು ಹೆಣ್ಣೇ ಬಯಸುತ್ತಾಳೆ. ಮುಟ್ಟಿದರೆ ಮುನಿಯಾಗುತ್ತಾಳೆ. ಬಹುಶಃ ಈ ಅಂಶಗಳನ್ನು ಪರಿಗಣಿಸಿ, ಅವಳನ್ನು ಪ್ರತ್ಯೇಕವಾಗಿ ಇಡುವ ಚಿಂತನೆಯೂ ಇರುತ್ತದೆ. ಹಾಗಾಗಿ ಈ ವೈಜ್ಞಾನಿಕ ಕಾರಣಗಳನ್ನು ಅರಿಯದ ಜನರು ಅನಗತ್ಯ ಆಚಾರ-ವಿಚಾರಗಳಿಗೆ ಒತ್ತುಕೊಡುತ್ತಾರೆ. ಇದರಿಂದ ಆಕೆ ಮಾನಸಿಕವಾಗಿ ಕುಗ್ಗಲು ಕಾರಣವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾರೆ ಅ ಸಂದರ್ಭದಲ್ಲಿ ಆಕೆಯನ್ನು ಆಕೆಯ ಪಾಡಿಗೆ ಬಿಡುವುದೇ ಕ್ಷೇಮವಾಗಿರುತ್ತದೆ.
ಇದನ್ನೂ ಓದಿ: ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!
Published On - 1:39 pm, Wed, 17 February 21