
ಬೆಂಗಳೂರು, ಸೆಪ್ಟೆಂಬರ್ 30: ವಿಶ್ವದಲ್ಲಿ ಪ್ರತಿವರ್ಷ ಸುಮಾರು 2.73 ಲಕ್ಷ ಮಕ್ಕಳಿಗೆ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಂದರೆ, ದಿನಕ್ಕೆ ಸರಾಸರಿ 1,000 ಮಕ್ಕಳಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ. ವಿಶ್ವದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 1.5ರಷ್ಟು ಮಕ್ಕಳ ಕ್ಯಾನ್ಸರ್ ಪ್ರಕರಣಗಳಾಗಿವೆ. ಭಾರತದಲ್ಲೂ ಬಾಲ್ಯ ಕ್ಯಾನ್ಸರ್ ಪ್ರಕರಣಗಳು ಆತಂಕ ಮೂಡಿಸಿವೆ. ದೇಶದಲ್ಲಿ ಪ್ರತಿವರ್ಷ ಸುಮಾರು 35,240 ಮಕ್ಕಳಿಗೆ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಬಾಲ್ಯ ಕ್ಯಾನ್ಸರ್‌ನಿಂದ ವರ್ಷಕ್ಕೆ 16,850 ಸಾವುಗಳು ಸಂಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಭಾರತದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 2.5ರಷ್ಟು ಮಕ್ಕಳ ಕ್ಯಾನ್ಸರ್ ಪ್ರಕರಣಗಳಾಗಿವೆ ಎಂದು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಮಾಹಿತಿ ಬಹಿರಂಗಪಡಿಸಿದೆ.
20206 ರ ಬಾಲ್ಯ ಕ್ಯಾನ್ಸರ್ ಜಾಗೃತಿ ಅಭಿಯಾನದ ಪ್ರಯುಕ್ತ, ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಲಹೆ ಸೂಚನೆಗಳನ್ನು ನೀಡಿದೆ. ಜತೆಗೆ ಮಕ್ಕಳ ಕ್ಯಾನ್ಸರ್ ಕುರಿತ ಅಂಕಿಅಂಶಗಳನ್ನೂ ಬಿಡುಗಡೆ ಮಾಡಿದೆ.
ಮಕ್ಕಳಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಲ್ಯುಕೇಮಿಯಾ ಪ್ರಮುಖವಾಗಿದೆ. ಬಾಲಕರ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40.3ರಷ್ಟು ಹಾಗೂ ಬಾಲಕಿಯರ ಪ್ರಕರಣಗಳಲ್ಲಿ ಶೇ 34.3ರಷ್ಟು ಲ್ಯುಕೇಮಿಯಾ ಪ್ರಕರಣಗಳಾಗಿವೆ. ಇದಲ್ಲದೆ, ಮೆದುಳು ಮತ್ತು ನರ್ವಸ್ ಸಿಸ್ಟಂಗೆ ಸಂಬಂಧಿಸಿದ ಟ್ಯೂಮರ್‌ಗಳೂ ಮಕ್ಕಳಲ್ಲಿ ಪ್ರಮುಖ ಕ್ಯಾನ್ಸರ್‌ಗಳಾಗಿವೆ ಎಂದು ಸಂಸ್ಥೆ ತಿಳಿಸಿದೆ.
ಕರ್ನಾಟಕದಲ್ಲಿ 2025ರಲ್ಲಿ 1,882 ಬಾಲ್ಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿ. ಇದೇ ಅವಧಿಯಲ್ಲಿ ಬಾಲ್ಯ ಕ್ಯಾನ್ಸರ್‌ನಿಂದ 312 ಸಾವುಗಳು ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ 2025ರಲ್ಲಿ 349 ಬಾಲ್ಯ ಕ್ಯಾನ್ಸರ್ ಪ್ರಕರಣಗಳು ಹಾಗೂ 56 ಸಾವುಗಳು ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಇದನ್ನೂ ಓದಿ: ಕ್ಯಾನ್ಸರ್ ಔಷಧಿ ದರ ಸುಲಿಗೆಗೆ ಬ್ರೇಕ್: ಕೇಂದ್ರಕ್ಕೆ ಮನವಿ ಮಾಡಿದ್ದೇವೆಂದ ಸಚಿವ ಯು.ಟಿ. ಖಾದರ್
2024ರಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ 0 – 19 ವರ್ಷದೊಳಗಿನವರಲ್ಲಿ 588 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದವು. ಮಕ್ಕಳಿಗಾಗಿ ಆಸ್ಪತ್ರೆಯಲ್ಲಿ 65 ಹಾಸಿಗೆಗಳ ವಾರ್ಡ್ ಹಾಗೂ 16 ಹಾಸಿಗೆಗಳ PICU ಸೌಲಭ್ಯವಿದೆ.
ಮಕ್ಕಳಲ್ಲಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮಹತ್ವದ್ದಾಗಿದೆ. ದೇಹದಲ್ಲಿ ಗಡ್ಡೆ, ನಿರಂತರ ಜ್ವರ ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು. ಚರ್ಮ ಬಿಳಿಯಾಗುವುದು, ಸುಲಭವಾಗಿ ರಕ್ತಸ್ರಾವವಾಗುವುದು, ತಲೆನೋವು, ವಾಂತಿ, ತೂಕ ಇಳಿಕೆ ಹಾಗೂ ನಿರಂತರ ಸುಸ್ತು ಕಂಡುಬಂದರೂ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಸಂಸ್ಥೆ ಸಲಹೆ ನೀಡಿದೆ.
ಕಣ್ಣಿನಲ್ಲಿ ಬಿಳಿ ಪ್ರತಿಫಲನ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಕ್ಯಾನ್ಸರ್ ಪತ್ತೆ ತಡವಾದರೆ ಚಿಕಿತ್ಸೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆರಂಭಿಕ ಪತ್ತೆ ಹಾಗೂ ಸಮಯೋಚಿತ ಚಿಕಿತ್ಸೆ ಮೂಲಕ ಮಕ್ಕಳ ಗುಣಮುಖತೆಯ ಅವಕಾಶ ಹೆಚ್ಚಿಸಬಹುದು. 2026ರ ಬಾಲ್ಯ ಕ್ಯಾನ್ಸರ್ ಜಾಗೃತಿ ಅಭಿಯಾನದ ಥೀಮ್ “Demonstrating Impact: From Challenge to Change” ಆಗಿದ್ದು, ಪ್ರತಿಯೊಂದು ಮಗುವಿಗೂ ಸಮಾನ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಹೇಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ