ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ: ವಿವಾದದ ಕಿಡಿಹೊತ್ತಿಸಿದ ಸಾಣೇಹಳ್ಳಿ ಶ್ರೀ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ ಸ್ಮರಣೋತ್ಸವದಲ್ಲಿ ಮಾತನಾಡಿದ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯಶ್ರೀ, ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ ಎಂದು ಹೇಳುವ ಮೂಲಕ ವಿವಾದದ ಕಿಡಿಹೊತ್ತಿಸಿದ್ದಾರೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ ಎಂದಿದ್ದಾರೆ.
ಚಿತ್ರದುರ್ಗ, ಆಗಸ್ಟ್ 08: ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯಶ್ರೀ (sanehalli swamiji) ಹೇಳಿದ್ದಾರೆ. ಜಿಲ್ಲೆಯ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಹಿಂದೂ ಎಂಬುದು ಅನೈತಿಕ, ಅನಾಚಾರ ಒಳಗೊಂಡಿದೆ ಎಂದು ಹೇಳಿದ್ದಾರೆ.
ಬಸವಣ್ಣನವರ ಹಿಂದಿನ ಧರ್ಮ ದಯಾಧೀನ ಧರ್ಮ. ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು. ವೇದ ಪುರಾಣಗಳನ್ನು ಶರಣರು ತಿರಸ್ಕಾರ ಮಾಡಿದ್ದರು. ಅಹಿಂಸಾ ಜೀವನ ನಡೆಸಬೇಕೆಂದು ಬಸವಣ್ಣ ಹೇಳಿದರು. ಸಿಂಧೂ ನದಿಯ ಬಯಲಿನಲ್ಲಿ ಇರುವವರು ಹಿಂದೂಗಳು ಎಂದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಸಿರಿಗೆರೆ ಶ್ರೀಗಳ ಪೀಠ ತ್ಯಾಗಕ್ಕೆ ಭಕ್ತರ ಒತ್ತಾಯ, ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಲ್ಲಿಕಾರ್ಜುನ ಸ್ವಾಮೀಜಿ ಬಸವತತ್ವದ ನಿಷ್ಠರಾಗಿದ್ದರು. ಈಗಿನ ದಿನಗಳಲ್ಲಿ ಸ್ವಾಮೀಜಿಗಳೆಲ್ಲರೂ ನಿಷ್ಠೆ ಬಿಟ್ಟಿದ್ದೇವೆ. ಭಕ್ತರಲ್ಲ ಸ್ವಾಮೀಜಿಗಳು ಬದಲಾಗಬೇಕಿದೆ. ಮಠಾಧೀಶರ ಮೇಲೆ ಹೊಣೆಗಾರಿಕೆ ಇದೆ, ಆರೋಪವೂ ಇದೆ. ಸ್ವಾಮೀಜಿಗಳು ತಪ್ಪು ಮಾಡಿದಾಗ ತಪ್ಪು ಎಂದು ಹೇಳಬೇಕು ಎಂದು ತಿಳಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲವೆಂದ ಸಾಣೇಹಳ್ಳಿ ಶ್ರೀ
ಬಸವಣ್ಣ ಲಿಂಗಾಯತ ಧರ್ಮದ ಪ್ರತಿಪಾದಕರು. ಲಿಂಗಾಯತ ಧರ್ಮ, ಹಿಂದೂ ಧರ್ಮದ ಒಳಗಡೆ ಇರುವಂಥದ್ದಲ್ಲ. ಹಿಂದೂ ಧರ್ಮಕ್ಕೆ ಭಿನ್ನವಾಗಿ ಹುಟ್ಟಿಕೊಂಡಿದ್ದೇ ಲಿಂಗಾಯತ ಧರ್ಮ. ವೇದ, ಪುರಾಣಗಳನ್ನ ಖಂಡಿಸಿ ಶರಣರು ಮಾತನಾಡಿದ್ದರು. ಬಹು ದೇವತಾ ಆರಾಧನೆಯನ್ನು ವಿರೋಧ ಮಾಡಿದ್ದರು. ಏಕ ದೇವ ನಿಷ್ಠೆಯನ್ನು ಎತ್ತಿ ಹಿಡಿದಿದ್ದಾರೆ. ಜಾತ್ಯಾತೀತ ಮನೋಭಾವ ಬೆಳೆಸಿದ್ದಾರೆ. ಹಿಂದೂ ಧರ್ಮಕ್ಕಿಂತ ವಿಭಿನ್ನ ಲಿಂಗಾಯತ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಜೈನ, ಬೌದ್ಧ, ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗ: ವಚನಾನಂದ ಶ್ರೀ
ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀ ಮಾತನಾಡಿ, ಹಿಂದೂ ಎಂಬುದು ಸತ್ಯ ಸನಾತನ ಆಗಿರುವಂಥದ್ದು. ಹಿಂದೂ ಎಂಬ ಮಹಾಸಾಗರದ ನದಿಗಳು ನಾವು. ಜೈನ, ಬೌದ್ಧ, ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗ. ಹಿಂದೂ ಅಲ್ಲ ಎಂಬುವರು ಹಿಂದೂ ಲಿಂಗಾಯತ ಎಂಬ ಮೀಸಲಾತಿ ಪಡೆಯುವುದು ಎಂದು ಹೇಳಿದ್ದಾರೆ.
ಎಲ್ಲರಿಗೂ ಅಧ್ಯಯನದ ಅವಶ್ಯಕತೆ ಇದೆ. ನಾವೆಲ್ಲಾ ಹಿಂದೂಗಳು, ಬೌದ್ಧ, ಸಿಕ್ಕ ಧರ್ಮೀಯರಂತೆ ಲಿಂಗಾಯತರು. ಕೇವಲ ವೈದಿಕರು ಹಿಂದೂಗಳಲ್ಲ, ಅವೈದಿಕರೂ ಇದ್ದಾರೆ. ಹಿಂದೂ ಎಂಬುದೊಂದು ಮಹಾಸಾಗರ. ದಾರ್ಶನಿಕರು ಆಯಾಕಾಲಕ್ಕೆ ವಿವಿಧ ವಿಚಾರ ಹೇಳಿದ್ದಾರೆ. ಸಾಂವಿಧಾನಿಕವಾಗಿ ಮೀಸಲಾತಿ ಪಡೆದುಕೊಳ್ಳುತ್ತಿದ್ದೇವೆ. ಹಿಂದೂ ಎಂದು ಹೇಳಿಕೊಂಡೇ ನಾವು ಮೀಸಲಾತಿ ಪಡೆಯುತ್ತಿದ್ದೇವೆ. ಹಿಂದೂಗಳಲ್ಲ ಎಂದರೆ ಮೀಸಲಾತಿ ಏಕೆ ಪಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಳ್ಳತನವಾಗಿದ್ದ ಮುರುಘಾಶ್ರೀ ಪುತ್ಥಳಿ ಪತ್ತೆ: ನಾಲ್ವರು ಶಂಕಿತ ಆರೋಪಿಗಳ ಪಾಲಿಗ್ರಫಿ ಪರೀಕ್ಷೆಗೆ ಪೊಲೀಸರ ಸಿದ್ದತೆ
ಹಿಂದೂ ಲಿಂಗಾಯತ ಎಂದೇ ಹಿರಿಕರು ಬರೆಸಿದ್ದಾರೆ. ಅಮ್ಮ ಅಜ್ಜ, ಹಿರಿಯರು ಸರ್ಟಿಫಿಕೇಟ್ನಲ್ಲಿ ಏನು ಬರೆಸಿದ್ದಾರೆ. ಅವರು ಯಾರೂ ಜ್ಞಾನಿಗಳಲ್ಲವೇ. ಸಮಾಜ ಕೂಡಿಸಿ, ಒಡೆಯುವ ಕೆಲಸವನ್ನು ಮಾಡಿ. ತಾತ್ವಿಕವಾಗಿ ವೀರಶೈವ, ಲಿಂಗಾಯತ ಭಿನ್ನ ಆಚರಣೆ ಇರಬಹುದು. ನಾವು ಸಹ ಬಸವಣ್ಣ ಅವರನ್ನು ಗುರು ಎಂದು ಒಪ್ಪಿಕೊಂಡಿದ್ದೇವೆ. ವಚನಗಳನ್ನು ನಮ್ಮ ಗ್ರಂಥ ಎಂದು ನಾವು ಒಪ್ಪಿಕೊಂಡಿದ್ದೇವೆ. ಸಮಾಜಿಕವಾಗಿ, ರಾಜಕೀಯವಾಗಿ ವೀರಶೈವ ಲಿಂಗಾಯತರು ಒಂದಾಗಿ ಹೋದರೆ ಭವಿಷ್ಯ.
ಹಿಂದೂ ಅಲ್ಲ ಎಂಬುದಕ್ಕೆ ನಾವು ವಿರೋಧಿಸುತ್ತೇವೆ. ನಾವು ಹಿಂದೂಗಳು ಎಂದೇ ಹೇಳುತ್ತೇವೆ. ಹಿಂದೂ ಅಲ್ಲ ಅಂದರೆ ಲಿಂಗಾಯತ ಇಲ್ಲ ಎಂದರ್ಥ. ಹಿಂದು ಇಲ್ಲ ಅಂದರೆ ಲಿಂಗಾಯತ ಇಲ್ಲವೇ ಇಲ್ಲ. ಜೈನರು, ಬೌದ್ಧರು ಹಿಂದೂಗಳನ್ನು ವಿರೋಧಿಸಿ ಧರ್ಮ ಪಡೆದರಾ? ಮಾತೆತ್ತಿದರೆ ಹಿಂದೂಗಳನ್ನು ಬೈಯುತ್ತೀರಿ. ಎಷ್ಟು ಜನ ಶಿಯೋಗದ ಬಗ್ಗೆ ತಿಳಿದುಕೊಂಡಿದ್ದೀರಿ, ಬಸವಣ್ಣನ ಲಿಂಗಾಗ ಸಾಮರಸ್ಯ ಮಾಡುವುದಿಲ್ಲ. ವೇದಿಕೆ ಸಿಕ್ಕರೆ ಭಾಷಣ ಮಾಡುತ್ತೀರಿ. ಸಾವಿರ ಜನ ಹಿಂದೂಗಳಲ್ಲ ಅಂದರೆ ಕೋಟಿ ಕೋಟಿ ಜನ ನಾವು ಹಿಂದೂಗಳು ಅನ್ನುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:00 pm, Thu, 8 August 24