ಚಿತ್ರದುರ್ಗ: ಮುರುಘಾಮಠದಲ್ಲಿ (Muruga Mutt) 47 ಫೋಟೋಸ್ (photos) ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನಮೂರ್ತಿ ಅಲಿಯಾಸ್ ಸ್ವಾಮಿ, ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಬಂಧಿತರು. ಮಠದ ಸಿಸಿ ಕ್ಯಾಮರಾದಲ್ಲಿ ಕಳ್ಳತನ ದೃಶ್ಯ ಸೆರೆಯಾಗಿದೆ. ಚಿತ್ರದುರ್ಗ ನ್ಯಾಯಾಲಯಕ್ಕೆ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಿದ್ದಾರೆ. ಎ1 ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ 2ದಿನ ಪೊಲೀಸ್ ಕಸ್ಟಡಿಯಲ್ಲಿದ್ದು, ಎ2 ಶಿವಾನಂದಸ್ವಾಮಿ 14ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಅಪಘಾತಕ್ಕೀಡಾಗಿ ಶಿವಾನಂದಸ್ವಾಮಿ ಕಾಲು ಮುರಿದುಕೊಂಡಿದ್ದಾರೆ. ವಿವಿಧ ಗಣ್ಯರ ಜತೆ ಮುರುಘಾಶ್ರೀ ಇರುವ ಚಿತ್ರಗಳು ಅಕ್ಟೋಬರ್ 6ರಂದು ಕಳ್ಳತನವಾಗಿದ್ದವು.
ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಮಾದಕ ವಸ್ತು ಬಳಕೆ, ಮಾನವ ಸಾಗಣೆ, ಅತ್ಯಾಚಾರ, ಕೊಲೆ ಆರೋಪ
ಮೈಸೂರು: ‘ಚಿತ್ರದುರ್ಗದ ಮುರುಘಾ ಮಠದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು ಅಷ್ಟೇ ಅಲ್ಲ, ಇತರ ಹಲವು ಅಪರಾಧ ಕೃತ್ಯಗಳು ನಡೆದಿವೆ. ವಿಸ್ತೃತ ತನಿಖೆ ನಡೆದರೆ ನಿಜ ಸಂಗತಿ ಬಹಿರಂಗವಾಗಲಿದೆ’ ಎಂದು ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಅವರು ಹೇಳಿದರು. ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವುದು, ಮಾನವ ಸಾಗಣೆ, ಅತ್ಯಾಚಾರ, ಕೊಲೆಯಂತಹ ಆರೋಪಗಳು ಕೇಳಿಬಂದಿವೆ. ಶಿವಮೂರ್ತಿ ಮುರುಘಾ ಶರಣ ಸಹ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಇದೆ ಎಂದು ಅವರು ತಿಳಿಸಿದರು.
ಮಠದಲ್ಲಿದ್ದ ಮಗುವಿನ ಮೇಲೆ ಅತ್ಯಾಚಾರ ನಡೆದು ನಂತರ ಕೊಲೆಯಾಗಿದೆ. ಆ ಮಗುವಿನ ಶವ ರೈಲ್ವೆ ಹಳಿಗಳ ಮೇಲೆ ಸಿಕ್ಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಮಠದ ಆವರಣದಲ್ಲಿ ಕಾಂಡೋಮ್ ಮತ್ತು ಸಿರಂಜ್ಗಳು ಸಿಕ್ಕಿವೆ. ಈ ಬಗ್ಗೆಯೂ ತನಿಖೆ ನಡೆಯಬೇಕಿದೆ. ಮಾನವ ಸಾಗಣೆ, ಮಾದಕ ದ್ರವ್ಯ ಬಳಕೆಯ ಕಲಂಗಳನ್ನೂ ಲಗತ್ತಿಸಿ ಪ್ರಕರಣ ಮುನ್ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಾಮಾನ್ಯ ಪುರುಷನೊಬ್ಬ ಇಷ್ಟು ಕ್ರೂರವಾಗಿ, ಕೆಟ್ಟದಾಗಿ ವರ್ತಿಸಲು ಸಾಧ್ಯವಿಲ್ಲ. ವಿಕೃತಕಾಮಿಗಳನ್ನೂ ಮೀರಿಸುವ ರೀತಿಯಲ್ಲಿ ಶಿವಮೂರ್ತಿ ಮುರುಘಾ ವರ್ತನೆ ಇದೆ. ಆತ ಶಕ್ತಿವರ್ಧಕ ಅಥವಾ ಬೇರೆ ಯಾವುದಾದರೂ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆಯೂ ನಮಗೆ ಅನುಮಾನಗಳಿವೆ ಎಂದರು. ಮಠದಲ್ಲಿರುವ ಪಿಟ್ ಬಗ್ಗೆಯೂ ಪರಿಶೀಲನೆ ಆಗಬೇಕಿದೆ. 15 ವರ್ಷಗಳ ಹಿಂದೆ ಪಿಟ್ ಅನ್ನು ಸ್ವಾಮೀಜಿ ಸ್ವತಃ ಸ್ವಚ್ಛಗೊಳಿಸಿದ್ದರು. ಈ ಸಂದರ್ಭದಲ್ಲಿ ಕಾಂಡೋಮ್, ಸಿರಿಂಜ್ ಸೇರಿ ಹಲವು ವಸ್ತುಗಳು ಸಿಕ್ಕಿದ್ದವು. ಇವು ಮಠದ ಅತಿಥಿಗಳ ಕೃತ್ಯ ಎಂದು ಆ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದ್ದರಂತೆ. ಈಗಲೂ ಆ ಪಿಟ್ ಮಠದಲ್ಲಿಯೇ ಇದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Mon, 7 November 22