ಚಿತ್ರದುರ್ಗ: ಸರ್ಕಾರಿ ಮೆಡಿಕಲ್ ಕಾಲೇಜು(Government medical college) ಸ್ಥಾಪನೆ ಆಗಬೇಕು ಎಂಬುವುದು ಕೋಟೆನಾಡಿನ ಜನರ ಬಹುದಿನಗಳ ಕನಸು. ಆದರೆ ಮೆಡಿಕಲ್ ಕಾಲೇಜು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿತ್ತು. ಸದ್ಯ ರಾಜ್ಯ ಸರ್ಕಾರ(State Government) ಅನುಮೋದನೆ ನೀಡಿ 500 ಕೋಟಿ ರೂ. ಮಂಜೂರು ಮಾಡಿದೆ. ಆದರೆ ಇದೀಗ ಮತ್ತೊಂದು ಸಮಸ್ಯೆ ಸೃಷ್ಠಿ ಆಗಿದೆ. ಮೊದಲ ಹಂತದಲ್ಲಿ ಐನೂರು ಕೋಟಿ ರೂಪಾಯಿಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಘೋಷಣೆ ಮಾಡಿದ್ದಾರೆ. ಈ ವಿಷಯ ದುರ್ಗದ ಜನರಿಗೆ ಖುಷಿಯೇನೋ ಮೂಡಿಸಿದೆ. ಆದರೆ ಬಿ.ಎಸ್.ಯಡಿಯೂರಪ್ಪ(B.S.Yediyurappa) ಸಿಎಂ ಆಗಿದ್ದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜೆಂದು ಘೋಷಿಸಲಾಗಿತ್ತು.
ವರ್ಷದ ಹಿಂದೆಯೇ ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್, ಹಿಂದಿನ ಗೃಹಮಂತ್ರಿಗಳಾಗಿದ್ದ ಹಾಲಿ ಸಿಎಂ ಬೊಮ್ಮಾಯಿ ಇಲ್ಲಿಗೆ ಆಗಮಿಸಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಖಾಲಿ ಜಾಗ ಪರಿಶೀಲಿಸಿದ್ದರು. ಆದರೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಮ್ಮ ವಿರೋಧ ಇದೆ. ಸಚಿವರು ಮತ್ತು ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್ ಎಚ್ಚರಿಸಿದ್ದಾರೆ.
ಇನ್ನು ಹಿಂದುಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ದೀನ ದಲಿತ ಸಮುದಾಯದ ಜನರೇ ಹೆಚ್ಚಾಗಿದ್ದಾರೆ. ಹೀಗಾಗಿ, ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ನೀಡಿದರೆ ಪ್ರಯೋಜನ ಆಗದು. ಅಧಿಕಾರಿಗಳು, ಖಾಸಗಿಯವರು ಲೂಟಿ ಹೊಡೆಯುವ ಕೆಲಸ ನಡೆಯುತ್ತದೆ ಅಷ್ಟೇ. ಹೀಗಾಗಿ, ಬಡವರಿಗೆ ಉಚಿತ ಚಿಕಿತ್ಸೆ ಸಿಗಲು ಸರ್ಕಾರಿ ಮೆಡಿಕಲ್ ಕಾಲೇಜನ್ನೇ ನಮ್ಮ ಜಿಲ್ಲೆಗೆ ನೀಡಬೇಕು ಎಂದು ಭಾರತೀಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಪ್ರಕಾಶ್ ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಮಂಜೂರಾಗಿದೆ 2023-24ನೇ ಸಾಲಿನಿಂದಲೇ ಪ್ರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಈ ವಿಷಯ ದುರ್ಗದ ಜನರಿಗೆ ಒಂದು ಖುಷಿ ತಂದಿದೆ. ಮತ್ತೊಂದು ಕಡೆ ಖಾಸಗಿ ಸಹಭಾಗಿತ್ವದ ಕಾಲೇಜು ಆದರೆ ಪ್ರಯೋಜನವಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ಸರ್ಕಾರ ಮೆಡಿಕಲ್ ಕಾಲೇಜಿನ ಬಗ್ಗೆ ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ:
Published On - 9:48 am, Sat, 19 February 22