PM Modi Varanasi Visit: ಕಾಶಿ ಮೆಡಿಕಲ್ ಹಬ್ ಆಗಿ ಬದಲಾಗುತ್ತಿದೆ..ಯೋಗಿ ಜೀ ಅವರಿಂದ ಉತ್ತರಪ್ರದೇಶ ಅಭಿವೃದ್ಧಿಯಾಗುತ್ತಿದೆ: ಪ್ರಧಾನಿ ಮೋದಿ
Modi in Varanasi Today: 2017ಕ್ಕೂ ಮೊದಲು ಉತ್ತರಪ್ರದೇಶಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳೂ ಇರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಅನುದಾನ ಬಿಡುಗಡೆ ಮಾಡಿದರೂ ಅದು ಬಳಕೆಯಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಂಥದ್ದೇ ಸಂದರ್ಭದಲ್ಲೂ ನಾವು ಧೃತಿಗೆಡುವುದಿಲ್ಲ ಎಂದು ಕಾಶಿ ಜನರು ತೋರಿಸಿದ್ದಾರೆ. ಕಳೆದ ಕೆಲವು ಕಾಲಗಳಿಂದಲೂ ನಾವೆಲ್ಲ ಅತ್ಯಂತ ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ಅದರಲ್ಲೂ ಕಾಶಿ ಸೇರಿ ಉತ್ತರಪ್ರದೇಶದ ಅನೇಕ ಭಾಗಗಳಲ್ಲಿ ಕೊರೊನಾ ವೈರಸ್ನ ಅಪಾಯಕಾರಿ ರೂಪಾಂತರಿ ಸೋಂಕು ಕೂಡ ಕಾಣಿಸಿಕೊಂಡಿದೆ. ಆದರೆ ಅದನ್ನೆಲ್ಲ ಧೈರ್ಯವಾಗಿ ಎದುರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ವಾರಾಣಸಿಗೆ ತೆರಳಿರುವ ಪ್ರಧಾನಿ ಮೋದಿ, ಮೊದಲು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಶಿಶು ಮತ್ತು ತಾಯಂದಿರ ಆರೋಗ್ಯ ಕೇಂದ್ರ ಉದ್ಘಾಟಿಸಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೊವಿಡ್ 19 ಸಾಂಕ್ರಾಮಿಕವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್ರನ್ನು ಶ್ಲಾಘಿಸಿದರು.
ಕೊವಿಡ್ 19 ಎರಡನೇ ಅಲೆಯನ್ನು ಉತ್ತರಪ್ರದೇಶ ಎದುರಿಸಿ, ನಿಯಂತ್ರಿಸಿದ ರೀತಿ ನಿಜಕ್ಕೂ ಅದ್ಭುತವಾಗಿದ್ದು, ಅನುಕರಣೀಯ. ಅದಕ್ಕಾಗಿ ಇಲ್ಲಿನ ಆರೋಗ್ಯ ಕಾರ್ಯಕರ್ತರು, ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇವತ್ತು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಟೆಸ್ಟಿಂಗ್ ಮಾಡಿರುವ ರಾಜ್ಯವೆಂದರೆ ಅದು ಉತ್ತರ ಪ್ರದೇಶ. ಅಷ್ಟೇ ಅಲ್ಲ, ತುಂಬ ವೇಗವಾಗಿ ಕೊರೊನಾ ಲಸಿಕೆ ಅಭಿಯಾನ ನಡೆಸುತ್ತಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಜನರಿಗೆ ಲಸಿಕೆ ನೀಡಿದ ರಾಜ್ಯವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು. ಕಾಶಿ ಪೂರ್ವಾಂಚಲದ ಅತ್ಯಂದ ದೊಡ್ಡ ವೈದ್ಯಕೀಯ ಹಬ್ ಆಗಿ ಬದಲಾಗುತ್ತಿದೆ. ಈ ಹಿಂದೆ ಇಲ್ಲಿನ ಜನರು ಕೆಲವು ರೋಗಗಳ ಚಿಕಿತ್ಸೆಗೆ ಮುಂಬೈ ಅಥವಾ ದೆಹಲಿಯ ದೊಡ್ಡ ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು. ಇದೀಗ ಆ ವೈದ್ಯಕೀಯ ಸೌಲಭ್ಯಗಳನ್ನೆಲ್ಲ ಕಾಶಿಗೆ ಒದಗಿಸಲಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಖಂಡಿತ ಅನುಕೂಲವಾಗಲಿದೆ ಎಂದೂ ಹೇಳಿದರು.
ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಯಾವುದೇ ಉದ್ಯಮ ಮಾಡುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು. ಆದರೆ ಇಂದು ಈ ರಾಜ್ಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಅತ್ಯಂತ ಒಳ್ಳೆಯ ಪ್ರದೇಶವಾಗಿದೆ. 2017ಕ್ಕೂ ಮೊದಲು ಉತ್ತರಪ್ರದೇಶಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳೂ ಇರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಅನುದಾನ ಬಿಡುಗಡೆ ಮಾಡಿದರೂ ಅದು ಬಳಕೆಯಾಗುತ್ತಿರಲಿಲ್ಲ. ಆದರೆ ನಂತರ ಸಿಎಂ ಯೋಗಿಜೀ ಉತ್ತರಪ್ರದೇಶ ಅಭಿವೃದ್ಧಿಗಾಗಿ ತುಂಬ ಶ್ರಮಿಸಿದರು, ಈಗಲೂ ಶ್ರಮಿಸುತ್ತಿದ್ದಾರೆ ಎಂದು ಪಿಎಂ ಮೋದಿ ಹೇಳಿದರು. ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಭಯೋತ್ಪಾದನೆ, ಮಾಫಿಯಾಗಳೆಲ್ಲ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ.. ಕಾನೂನು ಸುವ್ಯವಸ್ಥೆ ಪ್ರಬಲವಾಗಿದೆ. ಇಂದು ಉತ್ತರಪ್ರದೇಶ ಸರ್ಕಾರ ನಡೆಯುತ್ತಿರುವುದು ಅಭಿವೃದ್ಧಿ ಮೂಲಕವೇ ಹೊರತು ಭ್ರಷ್ಟಾಚಾರದಿಂದ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: Gaganyaan: ಗಗನಯಾನ ಮಿಷನ್ಗಾಗಿ ಇಸ್ರೋದಿಂದ ವಿಕಾಸ್ ಎಂಜಿನ್ 3ನೇ ಟೆಸ್ಟ್ ಯಶಸ್ವಿ; ಎಲಾನ್ ಮಸ್ಕ್ ಅಭಿನಂದನೆ
Published On - 1:05 pm, Thu, 15 July 21