AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ನೀಡುವುದಾಗಿ ಮಂಗಳೂರಲ್ಲಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ; ತನಿಖೆ ವೇಳೆ ಬಯಲಾಯ್ತು ಮೆಡಿಕಲ್​ ಕಾಲೇಜುಗಳ ಅಕ್ರಮ

ಪೊಲೀಸರ ತನಿಖೆಯಲ್ಲಿ ಮಾಹಿತಿ ನೀಡುತ್ತಿರುವ ಆಸ್ಪತ್ರೆ ಮ್ಯಾನೇಜರ್​ 85 ಮಹಿಳೆಯರ ಸಾಗಾಟಕ್ಕೆ ಕಾರಣವೇನು ಎನ್ನುವುದನ್ನು ತಿಳಿಸುತ್ತಿದ್ದು, ಅವರಿಗೆಲ್ಲಾ ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಹಣ ಕೊಟ್ಟು ರೋಗಿಗಳಂತೆ ಮಲಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ಲಸಿಕೆ ನೀಡುವುದಾಗಿ ಮಂಗಳೂರಲ್ಲಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ; ತನಿಖೆ ವೇಳೆ ಬಯಲಾಯ್ತು ಮೆಡಿಕಲ್​ ಕಾಲೇಜುಗಳ ಅಕ್ರಮ
ಮಹಿಳೆಯರನ್ನು ಸಾಗಿಸುತ್ತಿದ್ದ ಬಸ್
TV9 Web
| Edited By: |

Updated on:Jun 30, 2021 | 8:42 AM

Share

ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣ ಮಂಗಳೂರಿನಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್​ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಇದರ ಹಿಂದಿನ ಅಸಲಿಯತ್ತು ತಿಳಿದುಬಂದಿದ್ದು, ಮೆಡಿಕಲ್​ ಕಾಲೇಜುಗಳು ಹೇಗೆ ವ್ಯವಸ್ಥೆಯ ಕಣ್ಣಿಗೆ ಮಂಕುಬೂದಿ ಎರಚುತ್ತಿವೆ ಎನ್ನುವುದೂ ಬಯಲಾಗಿದೆ.

ಕಣಚೂರು ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮ್ಯಾನೇಜರ್​ ನವಾಜ್​ ಇದರಲ್ಲಿ ಭಾಗಿಯಾಗಿದ್ದು ಕಾಲೇಜಿನ ಬಸ್​ನಲ್ಲಿ ಎಲ್ಲಾ ಮಹಿಳೆಯರನ್ನು ತಮ್ಮ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಇದನ್ನು ಗಮನಿಸಿದ ಊರಿನ ಬೇರೆ ಗ್ರಾಮಸ್ಥರು ಅನುಮಾನಗೊಂಡು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಮ್ಯಾನೇಜರ್ ನವಾಜ್​ ಉತ್ತರ ಕೊಡಲು ತಡಬಡಾಯಿಸಿದ್ದಾರೆ. ಇದರಿಂದಾಗಿ ಊರಿನವರಿಗೆ ಮತ್ತಷ್ಟು ಅನುಮಾನ ಮೂಡಿದ್ದು, ತಡರಾತ್ರಿ ಯಾವ ಕೊರೊನಾ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಊರಿನವರ ಪ್ರಶ್ನೆಗಳಿಂದ ಬಸ್​ ಚಾಲಕ ಪ್ರವೀಣ್ ಹಾಗೂ ಆಸ್ಪತ್ರೆ ಮ್ಯಾನೇಜರ್​ ನವಾಜ್​ ಸಂಪೂರ್ಣ ಕಂಗಾಲಾಗಿದ್ದಾರೆ. ನಂತರ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಚಾಲಕ ಪ್ರವೀಣ್ ಮತ್ತು ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಆದರೆ, ಪೊಲೀಸರ ವಿಚಾರಣೆ ವೇಳೆ ಮಹಿಳೆಯರ ಸಾಗಾಟದ ಹಿಂದಿನ ಅಸಲಿಯತ್ತು ಬಯಲಾಗಿದ್ದು, ಎನ್​ಎಮ್​ಸಿ (ನ್ಯಾಶನಲ್ ಮೆಡಿಕಲ್ ಕಮಿಷನ್) ವತಿಯಿಂದ ಮೇಲ್ವಿಚಾರಣೆ ಇದ್ದಾಗ ಮೆಡಿಕಲ್​ ಕಾಲೇಜುಗಳು ಈ ತೆರನಾದ ಕಳ್ಳಾಟದ ಮೊರೆ ಹೋಗುವುದು ತಿಳಿದುಬಂದಿದೆ. ರೋಗಿಗಳಂತೆ ನಟಿಸಲು ಹೇಳಿ ಮಹಿಳೆಯರ ಸಾಗಾಟ ಮಾಡಲಾಗುತ್ತಿದ್ದು, ಫ್ರೀ ಬೆಡ್​ಗಳಿಗೆ ಹಣ ಕೊಟ್ಟು ನಕಲಿ ರೋಗಿಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತನಿಖೆಯ ವೇಳೆ ಸತ್ಯ ಹೊರಬಿದ್ದಿದೆ.

ಪೊಲೀಸರ ತನಿಖೆಯಲ್ಲಿ ಮಾಹಿತಿ ನೀಡುತ್ತಿರುವ ಆಸ್ಪತ್ರೆ ಮ್ಯಾನೇಜರ್​ 85 ಮಹಿಳೆಯರ ಸಾಗಾಟಕ್ಕೆ ಕಾರಣವೇನು ಎನ್ನುವುದನ್ನು ತಿಳಿಸುತ್ತಿದ್ದು, ಅವರಿಗೆಲ್ಲಾ ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಹಣ ಕೊಟ್ಟು ರೋಗಿಗಳಂತೆ ಮಲಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಯಾದಲ್ಲಿ ಇನ್ನೂ ಹಲವು ಮೆಡಿಕಲ್ ಕಾಲೇಜುಗಳ ಅಕ್ರಮ ಬಯಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ಅತಿದೊಡ್ಡ ಹಗರಣ ನಡೆಸಿದ ಆರೋಪ; ಬ್ರೆಜಿಲ್​ ಅಧ್ಯಕ್ಷರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಕೊರೊನಾ ಲಸಿಕೆ 

ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮೆಡಿಕಲ್​ ಕಿಟ್​ ನೀಡೋದು ತಪ್ಪಲ್ಲ, ಆದರೆ ಸರ್ಕಾರ ಸೂಚಿಸಿರುವ ಔಷಧಗಳನ್ನೇ ನೀಡಲಿ: ಸುಧಾಕರ್​

Published On - 8:40 am, Wed, 30 June 21