ಭಾರತದ ಕೊವ್ಯಾಕ್ಸಿನ್ ಲಸಿಕೆ ಹೆಸರಲ್ಲಿ ಅತಿದೊಡ್ಡ ಹಗರಣ ನಡೆಸಿದ ಆರೋಪ; ಬ್ರೆಜಿಲ್ ಅಧ್ಯಕ್ಷರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಕೊರೊನಾ ಲಸಿಕೆ
1 ಡೋಸ್‌ಗೆ 1.34 ಡಾಲರ್ ದರ ವಿಧಿಸುವುದಾಗಿ ತಯಾರಿಕಾ ಸಂಸ್ಥೆ ಹೇಳಿತ್ತು. ಆದರೆ ಬ್ರೆಜಿಲ್ ಪ್ರತಿ ಡೋಸ್‌ಗೆ 15 ಡಾಲರ್ ನೀಡಲು ತಯಾರಾಗಿದೆ. ಇದು ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ನಡೆಯುತ್ತಿರುವ ಹಗರಣವಲ್ಲದೇ ಇನ್ನೇನು ಎಂದು ಅಧ್ಯಕ್ಷ ಜೈರ್ ಬಲಸೋನಾರ್‌ಗೆ ಸಂಸತ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ದೆಹಲಿ: ಕೊರೊನಾ ಲಸಿಕೆ ಹೆಸರಿನಲ್ಲಿ ಹಗರಣವಾಗುತ್ತಿದೆ, ಹಣ ಹೊಡೆಯಲಾಗುತ್ತಿದೆ, ಕಂಪೆನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಅವರಿಗೆ ಬೇಕಾದಂತೆ ನಿಯಮ ರೂಪಿಸಲಾಗುತ್ತಿದೆ ಎಂಬ ಅದೆಷ್ಟೋ ಆರೋಪಗಳು ಈವರೆಗೆ ಕೇಳಿ ಬಂದಿದ್ದವಾದರೂ ಅವುಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರಲಿಲ್ಲ. ಆದರೆ, ಈಗ ಭಾರತದ ಕೊವ್ಯಾಕ್ಸಿನ್ ಲಸಿಕೆ ಹೆಸರಲ್ಲಿ ಬ್ರೆಜಿಲ್ ದೇಶದಲ್ಲಿ ದೊಡ್ಡ ಹಗರಣವೊಂದು ಬಯಲಾಗಿದ್ದು, ಅದು ಬ್ರೆಜಿಲ್ ಅಧ್ಯಕ್ಷರ ಖುರ್ಚಿಯನ್ನೇ ಅಲುಗಾಡಿಸಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಭಾರತೀಯ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಹೆಸರಲ್ಲಿ ಬ್ರೆಜಿಲ್ ದೇಶದ ಆರೋಗ್ಯ ಇಲಾಖೆ ಭಾರೀ ಹಗರಣ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಭಾರತದಿಂದ ಇನ್ನೂ ಪೂರೈಕೆಯೇ ಆಗದ ಕೊವ್ಯಾಕ್ಸಿನ್ ಲಸಿಕೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಲಸಿಕೆ ಪೂರೈಕೆಯಾಗಿದೆ ಎನ್ನುವ ಮೂಲಕ 45 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಲು ಒತ್ತಡ ತರಲಾಗಿದೆ. ಮ್ಯಾಡಿಸನ್ ಬಯೋಟೆಕ್ ಎಂಬ ನಕಲಿ ಕಂಪನಿಯಿಂದ ಬ್ರೆಜಿಲ್‌ನ ಆರೋಗ್ಯ ಇಲಾಖೆಯ ಮೆಡಿಸಿನ್ ಆಮದು ವಿಭಾಗದ ರಿಕಾರ್ಡೊ ಮಿರಾಂಡಾಗೆ ಒತ್ತಡ ಹೇರಲಾಗುತ್ತಿದೆ ಎಂಬ ಆಪಾದನೆಗಳು ಕೇಳಿಬಂದಿವೆ.
ಬ್ರೆಜಿಲ್‌ನಲ್ಲಿ ಭಾರತದ ಕೊವ್ಯಾಕ್ಸಿನ್ ಲಸಿಕೆ ಹೆಸರಿನಲ್ಲಿ ಹಗರಣ ನಡೆದಿರುವುದು ಸ್ಪಷ್ಟ. 1 ಡೋಸ್‌ಗೆ 1.34 ಡಾಲರ್ ದರ ವಿಧಿಸುವುದಾಗಿ ತಯಾರಿಕಾ ಸಂಸ್ಥೆ ಹೇಳಿತ್ತು. ಆದರೆ ಬ್ರೆಜಿಲ್ ಪ್ರತಿ ಡೋಸ್‌ಗೆ 15 ಡಾಲರ್ ನೀಡಲು ತಯಾರಾಗಿದೆ. ಇದು ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ನಡೆಯುತ್ತಿರುವ ಹಗರಣವಲ್ಲದೇ ಇನ್ನೇನು ಎಂದು ಅಧ್ಯಕ್ಷ ಜೈರ್ ಬಲಸೋನಾರ್‌ಗೆ ಸಂಸತ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಮ್ಯಾಡಿಸನ್ ಬಯೋಟೆಕ್ ಎನ್ನುವ ನಕಲಿ ಕಂಪನಿಯಿಂದ ಲಸಿಕೆ ಪೂರೈಕೆಗೆ ಹಣ ನೀಡಲು ಬಿಲ್ ಸಲ್ಲಿಕೆಯಾಗಿದೆ. ಆದರೆ, ಭಾರತ್ ಬಯೋಟೆಕ್ ಸಂಸ್ಥೆ ಭಾರತದಿಂದ ಕೊವ್ಯಾಕ್ಸಿನ್ ಲಸಿಕೆ ಪೂರೈಸಿಯೇ ಇಲ್ಲ. ದಾಖಲೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪೂರೈಸಿದೆ ಎಂದು ಹೇಳಲಾಗಿದೆ. ಈ ಹಗರಣದಲ್ಲಿ ರಿಕಾರ್ಡೋ ಬರೋಸ್ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಇದು ಬ್ರೆಜಿಲ್‌ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಬ್ರೆಜಿಲ್ ಅಧ್ಯಕ್ಷ ಜೈರ್ ಬಲಸೋನಾರ್‌ಗೆ ಸಂಸತ್ ಸದಸ್ಯರು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಬ್ರೆಜಿಲ್ ಅಧ್ಯಕ್ಷರ ಕುರ್ಚಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಅಲ್ಲಿ ಶುರುವಾಗಿವೆ.
ಇದನ್ನೂ ಓದಿ: ಬ್ರೆಜಿಲ್‌ನ ಸೆರಾನಾ ನಗರದಲ್ಲಿ ಲಸಿಕೆ ಪಡೆದದ್ದು ಶೇ 75 ಮಂದಿ, ಶೇ 95ರಷ್ಟು ಇಳಿಕೆ ಆಯ್ತು ಕೊವಿಡ್ ಸಾವು ಪ್ರಕರಣ