ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಸಿದ್ದರಾಮಯ್ಯ ಗರಂ
ಡಿ.ಕೆ.ಶಿವಕುಮಾರ್ ಫಿಫ್ಟಿ ಫಿಫ್ಟಿ ಫಾರ್ಮುಲಾ ಮಂಡಿಸಿದ್ದರು. ಶಿವಕುಮಾರ್ ಸಲಹೆ ಒಪ್ಪದೆ ರಕ್ಷಾ ರಾಮಯ್ಯ ಹೊರಬಂದಿದ್ದರು. ನಾನು ಕೂಡ ನಿಮ್ಮ ಪರವಾಗಿಯೇ ಕೆಲಸ ಮಾಡುತ್ತೇನೆ. ನನ್ನ ಏಕೆ ಬೇರೆ ರೀತಿಯಲ್ಲಿ ನೋಡುತ್ತೀರಿ? ನನಗೆ ಅವಕಾಶ ಏಕೆ ಇಲ್ಲ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದರು.
ಬೆಂಗಳೂರು: ಏಕಾಏಕಿ ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಬಗೆಹರಿಯುತ್ತಿದೆ ಎನ್ನುವಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ನಡುವಿನ ಗುದ್ದಾಟ ಶುರುವಾಗಿದೆ. ನಲಪಾಡ್ಗೆ ಅಧಿಕಾರ ಹಸ್ತಾಂತರಿಸಲು ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೂನ್ 28 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನ್ನ ನಿವಾಸಕ್ಕೆ ರಕ್ಷಾ ರಾಮಯ್ಯ ಕರೆಸಿ ಮಾತುಕತೆ ನಡೆಸಿದ್ದರು. ಈ ವೇಳೆ ನಲಪಾಡ್ ಹಾಗೂ ನಿಮ್ಮ ನಡುವೆ ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದಿದ್ದರು.
ಡಿ.ಕೆ.ಶಿವಕುಮಾರ್ ಫಿಫ್ಟಿ ಫಿಫ್ಟಿ ಫಾರ್ಮುಲಾ ಮಂಡಿಸಿದ್ದರು. ಶಿವಕುಮಾರ್ ಸಲಹೆ ಒಪ್ಪದೆ ರಕ್ಷಾ ರಾಮಯ್ಯ ಹೊರಬಂದಿದ್ದರು. ನಾನು ಕೂಡ ನಿಮ್ಮ ಪರವಾಗಿಯೇ ಕೆಲಸ ಮಾಡುತ್ತೇನೆ. ನನ್ನ ಏಕೆ ಬೇರೆ ರೀತಿಯಲ್ಲಿ ನೋಡುತ್ತೀರಿ? ನನಗೆ ಅವಕಾಶ ಏಕೆ ಇಲ್ಲ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದರು.
ದೆಹಲಿ ಮಟ್ಟದಲ್ಲಿ ರಾಹುಲ್ ಗಾಂಧಿ ಹಾಗೂ ಸುರ್ಜೆವಾಲಾ ಕಚೇರಿಯಲ್ಲೂ ಕೂಡ ಲಾಬಿ ನಡೆಸಿ ಒಪ್ಪಂದ ಸೂತ್ರವನ್ನು ನಲಪಾಡ್ ಬಣ ಸಿದ್ಧಪಡಿಸಿತ್ತು. ಕೆಲ ದಿನಗಳ ಹಿಂದೆ ದೆಹಲಿಯಲ್ಲೇ ನಲಪಾಡ್ ತಂದೆ ಎನ್ಎ ಹ್ಯಾರಿಸ್ ಬೀಡು ಬಿಟ್ಟಿದ್ದರು. ಉಸ್ತುವಾರಿ ಸುರ್ಜೇವಾಲಾ ಜೊತೆ ಕೂಡಾ ಮಾತುಕತೆ ನಡೆಸಿದ್ದ ಶಿವಕುಮಾರ್, ನಲಪಾಡ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಿನ್ನೆ ಬಹುತೇಕ ಹೊಸ ಅಧ್ಯಕ್ಷ ವಿಚಾರದ ಘೋಷಣೆಗೆ ಶಿವಕುಮಾರ್ ಹಾಗೂ ನಲಪಾಡ್ ಬಣ ಮುಂದಾಗಿತ್ತು. ವಿಷಯ ತಿಳಿದು ನಿನ್ನೆ ಸಂಜೆ ಸಿದ್ದರಾಮಯ್ಯ ನಿವಾಸಕ್ಕೆ ರಕ್ಷಾ ತಂದೆ ಎಂ.ಆರ್.ಸೀತಾರಾಂ ದೌಡಾಯಿಸಿದರು.
ದೆಹಲಿ ಲಾಬಿ ಸೇರಿದಂತೆ ಸಂಪೂರ್ಣ ವಿವರವನ್ನು ಸಿದ್ದರಾಮಯ್ಯಗೆ ಎಂ.ಆರ್.ಸೀತಾರಾಮ್ ನೀಡಿದ್ದಾರೆ. ಕೂಡಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಹುಲ್ ಗಾಂಧಿ ಕಛೇರಿಗೆ ಕರೆ ಮಾಡಿ, ವಾಟಿಸ್ ದಿಸ್ ಹ್ಯಾಪನಿಂಗ್ ಎಂದು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೇ ರಣದೀಪ್ ಸುರ್ಜೆವಾಲಾಗೆ ಕರೆ ಮಾಡಿ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಸಿದ್ಧರಾಮಯ್ಯ ಸಿಟ್ಟಾದ ಹಿನ್ನೆಲೆ ಅವರ ನಿವಾಸಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಬಂದಿದ್ದರು. ಡಿಸೆಂಬರ್ ತನಕ ರಕ್ಷಾ ರಾಮಯ್ಯಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಡಿ.ಕೆ.ಶಿವಕುಮಾರ್ ಬಣ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ ಡಿ.ಕೆ.ಶಿವಕುಮಾರ್ ಬಣದ ಪ್ರಸ್ತಾವವನ್ನು ಸಿದ್ದರಾಮಯ್ಯ ಒಪ್ಪಲಿಲ್ಲ. ಆಗ ಫಿಫ್ಟಿ ಫಿಫ್ಟಿ ಫಾರ್ಮುಲಾವನ್ನು ಡಿಕೆಶಿ ಮುಂದೆ ಇಟ್ಟರು. ಹೊಸ ಪ್ರಸ್ತಾವನೆಗೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2 ದಿನಗಳ ಕಾಲ ಯಾರು ಏನನ್ನು ಮಾತನಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು. ಬಳಿಕ ಸಿದ್ದರಾಮಯ್ಯ ನಿವಾಸದಿಂದ ನೇರವಾಗಿ ರಕ್ಷಾ ರಾಮಯ್ಯ ಜೊತೆ ಕೆಪಿಸಿಸಿ ಕಚೇರಿಗೆ ಬಿ.ವಿ.ಶ್ರೀನಿವಾಸ್ ತೆರಳಿದರು. ನಲಪಾಡ್ ಹಾಗೂ ರಕ್ಷಾ ರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮಾತುಕತೆ ಫಲಪ್ರದ ಆಗದ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರವಾಗದೆ ಸಭೆ ಅಂತ್ಯವಾಗಿದೆ.
ಇದನ್ನೂ ಓದಿ
(Siddaramaiah has expressed opposition to the change of karnataka youth congress president)