ಚಿತ್ರದುರ್ಗ: ಕೋಟೆನಾಡಿನ ಇಬ್ಬರು ಪ್ರಭಾವಿಗಳ ಕದನ ಕೊನೆಗೂ ಶಮನಗೊಂಡಿದೆ. ಒಂದೂವರೆ ದಶಕಗಳ ಕಾಲ ಹಾವು ಮುಂಗಸಿಯಂತ್ತಿದ್ದವರು ದಿಢೀರ್ ಒಂದಾಗಿದ್ದು ಸಂಚಲನ ಮೂಡಿಸಿದೆ. ಕೋಟೆನಾಡು ಚಿತ್ರದುರ್ಗ ನಗರದ ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ನಡುವೆ ಕದನ ನಡೆಯುತ್ತಿತ್ತು. ಸದ್ಯ ಈಗ ಇಬ್ಬರ ಕೋಪ ತಣ್ಣಗಾಗಿದೆ.
ಮುರುಘಾಮಠದ ಆಡಳಿತಾಧಿಕಾರಿ ಆಗಿದ್ದ ಎಸ್.ಕೆ.ಬಸವರಾಜನ್, 2007ರಲ್ಲಿ ಮಠದಿಂದ ಹೊರಬಿದ್ದಿದ್ದರು. ಬಳಿಕ ಇಬ್ಬರ ನಡುವೆ ಬಹಿರಂಗ ಕದನವೇ ನಡೆದಿತ್ತು. ಆರೋಪ ಪ್ರತ್ಯಾರೋಪಗಳ ಸಮರವೇ ನಡೆದಿತ್ತು. ಇನ್ನೇನು ಇವರಿಬ್ಬರು ರಾಜಿ ಆಗುವುದು ಅಸಾಧ್ಯ ಎಂಬಂತ ಸ್ಥಿತಿ ನಿರ್ಮಾಣ ಆಗಿತ್ತು. ಈ ನಡುವೆ ಎಸ್.ಕೆ.ಬಸವರಾಜನ್ 2008ರಲ್ಲಿ ಜೆಡಿಎಸ್ನಿಂದ ಚಿತ್ರದುರ್ಗದ ಶಾಸಕರಾಗಿ ಆಯ್ಕೆ ಆಗಿದ್ದರು. 2013ರಲ್ಲಿ ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದು 2018ರಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಕಿರಲಿಲ್ಲ. ಆದ್ರೆ, ಇಂದು ಸಂಜೆ ದಿಢೀರ್ ಬೆಳವಣಿಗೆ ನಡೆದಿದ್ದು ಎಸ್.ಕೆ.ಬಸವರಾಜನ್ ಮಠಕ್ಕೆ ಭೇಟಿ ನೀಡಿ ಮುರುಘಾಶ್ರೀಗಳನ್ನು ಭೇಟಿ ಆಗಿದ್ದಾರೆ.
ಮುರುಘಾಶ್ರೀಗಳಿಗೆ ಮಾಲೆ ಹಾಕಿದ್ದು, ಅಭಿಮಾನಿಗಳು ಎಸ್.ಕೆ.ಬಸವರಾಜನ್ ಗೆ ಮಾಲೆ ಹಾಕಿದ್ದ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದವು. ಸಾಕಷ್ಟು ಜನ ಈ ಫೋಟೋಗಳು ಫೇಕ್ ಅನ್ನುವ ಮಟ್ಟಕ್ಕೆ ಚರ್ಚೆ ಶುರುವಾಗಿತ್ತು. ಇದೇ ವೇಳೆ ಟಿವಿ9ಗೆ ಎಸ್.ಕೆ.ಬಸವರಾಜ್ ಮಾತನಾಡಿದ್ದು ಮತ್ತೆ ಮುರುಘಾಮಠದ ಆಡಳಿತಾಧಿಕಾರಿ ಹಾಗೂ ಎಸ್.ಜೆ.ಎಮ್ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಟಿವಿ9 ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಸಂಪರ್ಕಿಸಲು ಯತ್ನಿಸಿದೆ. ಆದ್ರೆ, ಮುರುಘಾಶ್ರೀಗಳು ಕರೆ ಸ್ವೀಕರಿಸಿಲ್ಲ. ಆದ್ರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಕೆ.ಬಸವರಾಜನ್ ಆಡಳಿತಾತ್ಮಕ ದೃಷ್ಠಿಯಿಂದ ಅನುಭವಿಯಾದ ನನಗೆ ಗುರುಗಳು ಮತ್ತೆ ಅವಕಾಶ ನೀಡಿದ್ದಾರೆ. ಅಂತೆಯೇ ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತು ಈ ಮೊದಲಿನಂತೆ ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಮುರುಘಾಮಠಕ್ಕೆ ಮಾಜಿ ಶಾಸಕ, ಮಾಜಿ ಆಡಳಿತಾಧಿಕಾರಿ ರಿ ಎಂಟ್ರಿ ಆಗಿದ್ದು ಸದ್ಯ ಹೊಸ ಸಂಚಲನ ಮೂಡಿಸಿದೆ. ಸಮರಭ್ಯಾಸದಲ್ಲಿ ನಿರತರಾಗಿದ್ದ ಮುರುಘಾಶ್ರೀ ಹಾಗೂ ಎಸ್ಕೆ ಬಸವರಾಜನ್ ದಿಢೀರ್ ಕದನ ವಿರಾಮ ಘೋಷಿಸಿ ಕೈ ಕುಲುಕಿ ಶಾಕ್ ನೀಡಿದ್ದಾರೆ. ಗುರು ಶಿಷ್ಯರ ಮುಂದಿನ ನಡೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ
ಇದನ್ನೂ ಓದಿ: Tax Savings FDs: ತೆರಿಗೆ ಉಳಿತಾಯದ ಎಫ್ಡಿಗೆ ಯಾವ ಬ್ಯಾಂಕ್ನಿಂದ ಉತ್ತಮ ಬಡ್ಡಿ ದರ?
15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾದರೂ ನಮ್ಮ ಸಂಸದರು ಮತ್ತು ಸರ್ಕಾರ ಮೌನ: ಸಿದ್ದರಾಮಯ್ಯ