ಚಿತ್ರದುರ್ಗ: ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದೇನೆ. ಈ ಸಂಬಂಧ ಮಂಗಳವಾರ ಅಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನರಿಗೆ ಹೊರೆಯಾಗಲು ಬಿಡುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಕೊವಿಡ್ 3ನೇ ಅಲೆ ತಡೆ ಮತ್ತು ಮಳೆ ಹಾನಿ ಪರಿಹಾರ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಾರಿಗೆ ಇಲಾಖೆಯ ಬಗ್ಗೆ ನಾನಿನ್ನೂ ಅಧ್ಯಯನ ಮಾಡುತ್ತಿದ್ದೇನೆ. ಸಾಧಕ-ಬಾಧಕ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನರಿಗೆ ಹೊರೆ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು. ರಾಜಕೀಯ ಸ್ಥಾನಮಾನ ಏರುಪೇರಾದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ಭಾಗವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಮಾಧಾನವಿದೆ. ಸಾರಿಗೆ ನಿಗಮಗಳು ಇಲಾಖೆ ನಷ್ಟದಲ್ಲಿವೆ. ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತೇನೆ ಎಂದು ವಿವರಿಸಿದರು.
ರಾಜನಾದ ಸತ್ಯಹರಿಶ್ಚಂದ್ರ ಸ್ಮಶಾನ ಕಾಯ್ದು ಸೈ ಎನಿಸಿಕೊಂಡಿದ್ದ. ನಾನೂ ನನ್ನ ಈವರೆಗಿನ ರಾಜಕೀಯ ಜೀವನದಲ್ಲಿ ಹಲವು ಸವಾಲು ಎದುರಿಸಿದ್ದೇನೆ. ಸಾರಿಗೆ ಇಲಾಖೆಯನ್ನೂ ಸಮರ್ಪಕವಾಗಿ ನಿರ್ವಹಿಸಿ ಸೈ ಎನ್ನಿಸಿಕೊಳ್ಳುತ್ತೇನೆ ಎಂದು ತಮ್ಮ ಪರಿಸ್ಥಿತಿ ಮತ್ತು ಖಾತೆ ಹಂಚಿಕೆ ವಿಚಾರವನ್ನು ಹರಿಶ್ಚಂದ್ರನ ಕಥೆಗೆ ಹೋಲಿಕೆ ಮಾಡಿದರು.
ಸಿದ್ಧರಾಮಯ್ಯ ಈಚೆಗೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀರಾಮುಲು, ಅವರು ಈವರೆಗೂ ಸಮಾಧಾನದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿಯನ್ನು ಬದಲಿಸುವುದು, ಸಚಿವ ಸಂಪುಟವನ್ನು ಅಗತ್ಯಕ್ಕೆ ತಕ್ಕಂತೆ ಪುನರ್ ರೂಪಿಸುವುದು ಒಂದು ನಿಯಮಿತ ಪ್ರಕ್ರಿಯೆ. ಖಾತೆ ಬದಲಾವಣೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ ಎಂದು ಹೇಳಿದರು. ರಾಜಕಾರಣದಲ್ಲಿ ಏನೇ ಬಂದರೂ ಸವಾಲಾಗಿ ಸ್ವೀಕರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕೆಲಸ ಮಾಡುವುದೇ ಸಂತೋಷ ಮತ್ತು ಸಮಾಧಾನದ ಸಂಗತಿ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯುವುದು ನಮ್ಮ ಗುರಿ ಎಂದು ಘೋಷಿಸಿದರು.
ಶಾಸಕರು ಗೈರು: ಕೊವಿಡ್ 3ನೇ ಅಲೆ ತಡೆಗಟ್ಟುವುದು ಮತ್ತು ನೆರೆ ಪರಿಹಾರ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಗೆ ಚಿತ್ರದುರ್ಗ ಜಿಲ್ಲೆಯ ಶಾಸಕರು ಗೈರುಹಾಜರಾಗಿದ್ದರು. ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪಾಲ್ಗೊಳ್ಳಲಿಲ್ಲ. ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದರು. ಸಚಿವ ಶ್ರೀರಾಮುಲು ಆಗಮಿಸಿದ ವೇಳೆ ಜನರು ಸಾಮಾಜಿಕ ಅಂತರ ಮರೆತು ಸಚಿವರನ್ನು ಸ್ವಾಗತಿಸಲು ಮುಗಿಬಿದ್ದರು. ಅಧಿಕಾರಿಗಳು ಸಾಲುಗಟ್ಟಿ ನಿಂತು ಹೂಗುಚ್ಛ ನೀಡಿ ಸ್ವಾಗತಿಸಿದರು.
ಬೆಂಗಳೂರಿನಲ್ಲಿ ಶ್ರೀರಾಮುಲು ಬೆಂಗಲಿಗರ ಧರಣಿ
ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಬಿ.ಶ್ರೀರಾಮುಲು ನಿವಾಸದ ಬಳಿ ಬೆಂಬಲಿಗರು ಧರಣಿ ನಡೆಸಿದರು.
(B Sriramulu says he will take a decision soon on KSRTC BMTC Bus Fare Hike)