Bharat Jodo Yatra: ದಾಪುಗಾಲು ಹಾಕುತ್ತಿದ್ದ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ರಿಕ್ವೆಸ್ಟ್, ಬಳ್ಳಾರಿ ಸಮಾವೇಶಕ್ಕೆ ಭರದ ಸಿದ್ಧತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 14, 2022 | 9:39 AM

ಬಳ್ಳಾರಿ ಸಮಾವೇಶದಿಂದ ಅದೃಷ್ಟ ಒಲಿಯುವ ನಿರೀಕ್ಷೆ ಇರಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಚುರುಕಿನ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Bharat Jodo Yatra: ದಾಪುಗಾಲು ಹಾಕುತ್ತಿದ್ದ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ರಿಕ್ವೆಸ್ಟ್, ಬಳ್ಳಾರಿ ಸಮಾವೇಶಕ್ಕೆ ಭರದ ಸಿದ್ಧತೆ
ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ
Follow us on

ಚಿತ್ರದುರ್ಗ: ‘ಬಹಳ ಹೊತ್ತಿನಿಂದ ನಡೆಯುತ್ತಿದ್ದೀರಿ. ಸ್ವಲ್ಪ ರೆಸ್ಟ್ ಮಾಡಿ’ ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ದಾಪುಗಾಲಿನ ಹೆಜ್ಜೆ ಹಾಕುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಹಿಂದಕ್ಕೆ ಕಳಿಸಿದರು. ಈ ವೇಳೆ ಸಿದ್ದರಾಮಯ್ಯ ‘ನಿಗದಿತ ಸ್ಥಳದವರೆಗೆ ನಡೆಯುತ್ತೇನೆ’ ಎಂದು ಪಟ್ಟು ಹಿಡಿದರು. ‘ದಾರಿ ಬಹಳಷ್ಟಿದೆ, ದಯವಿಟ್ಟು ತಾವು ರೆಸ್ಟ್ ಮಾಡಿ’ ಎಂದು ರಾಹುಲ್ ಮತ್ತೊಮ್ಮೆ ಮನವಿ ಮಾಡಿದ ನಂತರ ಸಿದ್ದರಾಮಯ್ಯ ಪಾದಯಾತ್ರೆಯಿಂದ ಬದಿಗೆ ಸರಿದು ಕಾರಿನತ್ತ ಹೆಜ್ಜೆ ಹಾಕಿದರು. ಆರಂಭದಿಂದ 7 ‌ಕಿಮೀವರೆಗೆ ಸಿದ್ದರಾಮಯ್ಯ ನಡೆದಿದ್ದಾರೆ. ವಿಶ್ರಾಂತಿಯ ಸ್ಥಳವು ಇನ್ನೂ 6 ಕಿಮೀ ದೂರದಲ್ಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ ಚೇತರಿಕೆ ನಿರೀಕ್ಷೆ

ಕಲ್ಯಾಣ ಕರ್ನಾಟಕಕ್ಕೆ ಭಾರತ್ ಜೋಡೋ ಪಾದಯಾತ್ರೆಯಿಂದ ಹೊಸ ಜೀವ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಮೇಕೆದಾಟು ಪಾದಯಾತ್ರೆ ಬಳಿಕ ಕಲ್ಯಾಣ ಕರ್ನಾಟಕ ಕ್ರಾಂತಿ ಯಾತ್ರೆಗೆ ಕಾಂಗ್ರೆಸ್ ಶಾಸಕರು ಸಿದ್ಧತೆ ನಡೆಸಿದ್ದರಾದರೂ, ಹಳೇ ಮೈಸೂರು ಭಾಗದ ನಾಯಕರಿಂದ ಸೂಕ್ತ ಸಹಕಾರ ಸಿಗಲಿಲ್ಲ. ಹೀಗಾಗಿ ಕಲ್ಯಾಣ ಕ್ರಾಂತಿ ಯಾತ್ರೆ ಪ್ರಾರಂಭವಾಗಿರಲಿಲ್ಲ.

ಸುಮಾರು ಆರೇಳು ತಿಂಗಳಿಂದ ಯಾತ್ರೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತ್ ಜೋಡೋ ಯಾತ್ರೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಬೂಸ್ಟರ್ ಡೋಸ್ ಕೊಡುವ ನಿರೀಕ್ಷೆಯಿದೆ. ಕಲ್ಯಾಣ ಕರ್ನಾಟಕದ ಸುಮಾರು 41 ಮತಕ್ಷೇತ್ರಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಬಳ್ಳಾರಿ ಸಮಾವೇಶ ಸಿದ್ದತೆಯಲ್ಲಿ ಈಶ್ವರ್ ಖಂಡ್ರೆ ಮತ್ತು ಎಂ.ಬಿ.ಪಾಟೀಲ್ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಬಳ್ಳಾರಿಯೊಂದಿಗೆ ಭಾವುಕ ನಂಟು

ಕಾಂಗ್ರೆಸ್ ಪಕ್ಷಕ್ಕೂ ಬಳ್ಳಾರಿಗೂ ಭಾವನಾತ್ಮಕ ನಂಟು ಇದೆ. 20 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾಗಾಂಧಿ ಗೆಲುವು ಸಾಧಿಸಿದ್ದರು. ಈಗ ಅವರ ಮಗ ರಾಹುಲ್ ಗಾಂಧಿ ಜಿಲ್ಲೆಯನ್ನು ಪ್ರವೇಶಿಸಿದ್ದು, ಪಕ್ಷದ ಸಂಘಟನೆಗೆ ಹೊಸ ವೇಗ ತಂದುಕೊಡಲಿದ್ದಾರೆ ಎಂಬ ನಿರೀಕ್ಷೆ ಮೂಡಿಸಿದ್ದಾರೆ.

2012ರಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಅವರಿಗೆ 2013ರಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ಕಿತ್ತು. ಕಾಂಗ್ರೆಸ್ ಪರ ಜನಾಭಿಪ್ರಾಯ ಮೂಡಿಸುವಲ್ಲಿಯೂ ಪಾದಯಾತ್ರೆ ತನ್ನದೇ ಆದ ಕೊಡುಗೆ ನೀಡಿತ್ತು. ಜೊತೆಗೆ ಲೋಕಸಭಾ ಉಪಚುನಾವಣೆಯಲ್ಲೂ ಜಿದ್ದಾಜಿದ್ದಿನ ಪೈಪೋಟಿ ನಡುವೆಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ಹತ್ತು ವರ್ಷಗಳ ಬಳಿಕ ಪಾದಯಾತ್ರೆ ಮೂಲಕ ಬಳ್ಳಾರಿ ಪ್ರವೇಶಿಸುತ್ತಿರುವ ಕಾಂಗ್ರೆಸ್ ನಾಯಕರು ಇದೀಗ ಜಿಲ್ಲೆಯಲ್ಲಿ ಮತ್ತೊಮ್ಮೆ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಾ ರಾಜ್ಯ ನಾಯಕರು ಸಹ ಬಳ್ಳಾರಿ ಪ್ರವೇಶಿಸುತ್ತಿದ್ದಾರೆ. ಭಾರತ್ ಜೋಡೋ ನೆಪದಲ್ಲಿ ಬಳ್ಳಾರಿಯಲ್ಲಿ ನಾಳೆ (ಅ 15) ಬೃಹತ್ ಸಮಾವೇಶ ನಡೆಯಲಿದ್ದು, ಶಕ್ತಿ ಪ್ರದರ್ಶನವಾಗಲಿದೆ. ಸಮಾವೇಶಕ್ಕಾಗಿ ನಾಲ್ಕೈದು ಲಕ್ಷ ಜನರನ್ನ ಸೇರಿಸಿ ಸಂದೇಶ ರವಾನಿಸಲು ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಮಾವೇಶಕ್ಕಾಗಿ ಛತ್ತೀಸ್ ಗಢ, ರಾಜಸ್ತಾನದ ಮುಖ್ಯಮಂತ್ರಿಗಳೂ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯಲಿದ್ದಾರೆ. ಬಳ್ಳಾರಿ ಸಮಾವೇಶದಿಂದ ಅದೃಷ್ಟ ಒಲಿಯುವ ನಿರೀಕ್ಷೆ ಇರಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಚುರುಕಿನ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Published On - 9:39 am, Fri, 14 October 22