ಮೈಸೂರು: ಪೊಕ್ಸೊ ಕಾಯ್ದೆಯಡಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಮುರುಘಾ ಮಠದ ಸ್ವಾಮೀಜಿಯನ್ನು (Murugha Mutt Seer) ತಕ್ಷಣ ಬಂಧಿಸಬೇಕು. ನಮ್ಮ ದೇಶದಲ್ಲಿ ಸ್ವಾಮೀಜಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯ ಅಂತ ಇಲ್ಲ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ (BJP MLC H Vishwanath) ಆಗ್ರಹಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧನವಾಗಬೇಕಿತ್ತು. ಜಾತಿ, ಧರ್ಮ ಯಾವುದೂ ಇಲ್ಲಿ ಮಧ್ಯ ಪ್ರವೇಶಿಸಬಾರದು. ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ನೆಲದ ಕಾನೂನಿನ ಪ್ರಕಾರ ಬಲವಾದ ಕೇಸ್ ಶ್ರೀಗಳ ವಿರುದ್ಧ ದಾಖಲಾಗಿದೆ. ಇದರಲ್ಲಿ ಬೇರೆ ಯಾರೂ ತಲೆ ಹಾಕಬಾರದು. ಮಾಜಿ ಮುಖ್ಯಮಂತ್ರಿ, ಮುಖ್ಯಮಂತ್ರಿ, ಗೃಹ ಸಚಿವರು ಈ ಪ್ರಕರಣದ ಬಗ್ಗೆ ಏನೇನೋ ಹೇಳಬಾರದು. ಫೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾದ ನಂತರ ಆತ ಆರೋಪಿ ಆಗುವುದಿಲ್ಲ, ಅಪರಾಧಿ ಆಗುತ್ತಾನೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಅಪರಾಧಿಯ ಬಂಧನವಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸಂಧಾನ ಅಥವಾ ಅನುಸಂಧಾನದ ಪ್ರಶ್ನೆ ಇಲ್ಲಿ ಬರುವುದಿಲ್ಲ. ಗೃಹ ಸಚಿವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಮಾತಾಡಬೇಕಿತ್ತು. ಜಾತಿ, ಧರ್ಮ ಯಾವುದೇ ಇಲ್ಲಿ ಮಧ್ಯ ಪ್ರವೇಶಿಸಬಾರದು. ಸ್ವಾಮೀಜಿ ಎಲ್ಲಿಗೋ ಹೋಗುತ್ತಿದ್ದರೆ ಅವರನ್ನು ಪೊಲೀಸರು ಗೌರವದಿಂದ ವಾಪಸ್ಸು ಕರೆದುಕೊಂಡು ಬಂದಿದ್ದು ಸರಿಯೇ? ನಾವು ಸ್ವಾಮೀಜಿಗಳ ಪರ ಇದ್ದೇವೆ ಎಂದು ಅವರ ಅಭಿಮಾನಿಗಳು ಮಠದಲ್ಲಿ ಘೋಷಣೆ ಕೂಗುತ್ತಾರೆ. ಹಾಗಾದರೆ ತಪ್ಪು ಮಾಡಿದವರ ಪರ ಇದ್ದಾರಾ ಅವರು? ಚಿತ್ರದುರ್ಗದ ಎಸ್ಪಿ ಏನು ಮಾಡುತ್ತಿದ್ದಾರೆ? ಅವರನ್ನು ಮೊದಲು ಅಮಾನತು ಮಾಡಬೇಕಿತ್ತು ಎಂದು ಅಭಿಪ್ರಾಯಟ್ಟರು.
ಆ ಬಾಲಕಿಯರಿಗೆ ನ್ಯಾಯ ಸಿಗಬೇಕು. ಇದು ಅಪ್ರಾಪ್ತ ಬಾಲಕಿಯರ ವಿಚಾರ. ಅವರು ಅಮಾಯಕ ಬಾಲಕಿಯರು. ಕರ್ನಾಟಕದಲ್ಲಿ ಬಹಳ ದೊಡ್ಡ ಗುರು ಪರಂಪರೆ ಇದೆ. ತಾತ್ಕಾಲಿಕವಾಗಿ ಮುರುಘಾ ಶ್ರೀಗಳು ಪೀಠ ತ್ಯಜಿಸಬೇಕು. ಅಪವಾದವು ಸುಳ್ಳು ಎಂದು ಸಾಬೀತಾದ ನಂತರ ಮತ್ತೆ ಬೇಕಿದ್ದ ಪೀಠ ಅಲಂಕರಿಸಲಿ. ತಕ್ಷಣ ಪೀಠ ತ್ಯಜಿಸುವ ಮೂಲಕ ಸ್ವಾಮೀಜಿ ಮುರುಘಾ ಮಠದ ಪೀಠದ ಗೌರವ ಉಳಿಸಬೇಕು. ಸಿಎಂ ಯಾವ ಮುಲಾಜಿಗೂ ಒಳಗಾಗಬಾರದು ಎಂದು ಆಗ್ರಹಿಸಿದರು.
ಸರ್ಕಾರವು ಈ ವಿಚಾರದಲ್ಲಿ ಲೋಪ ಮಾಡಿದರೆ ಯಾರೂ ನಿಮ್ಮನ್ನು ಕ್ಷಮಿಸುವುದಿಲ್ಲ. ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕೆ ಮಾತನಾಡುತ್ತಿಲ್ಲ? ಈ ನಾಡಿನ ಮಕ್ಕಳ ಪ್ರಶ್ನೆ ಇದು. ಪ್ರಧಾನಿಗೆ ನಾನು ಈ ಬಗ್ಗೆ ವಿಸ್ತೃತವಾಗಿ ಪತ್ರ ಬರೆಯುತ್ತಿದ್ದೇನೆ. ಪತ್ರ ಯಾರ ವಿರುದ್ಧವೂ ಅಲ್ಲ. ಬದಲಾಗಿ ನಡೆದಿರುವ ಎಲ್ಲಾ ವಿಚಾರಗಳನ್ನು ಪತ್ರದಲ್ಲಿ ವಿವರಿಸುತ್ತೇನೆ ಎಂದು ಹೇಳಿದರು.
ಈ ನೆಲದಲ್ಲಿ ಸ್ವಾಮೀಜಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಇದೆಯೇ? ಮತಕ್ಕಾಗಿ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸುಮ್ಮನಾದರೆ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ನ್ಯಾಯ ಸಿಗಲೇಬೇಕು. ಸ್ವಾಮೀಜಿ ಪರ ನಿಲ್ಲುವುದಾದರೆ ಸರ್ಕಾರವೇ ಪೋಕ್ಸೋ ಕಾಯ್ದೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿಬಿಡಲಿ. ಈ ಪ್ರಕರಣದಿಂದ ಇಡೀ ರಾಜ್ಯದ ಮಾನಮರ್ಯಾದೆ ಹೋಗುತ್ತಿದೆ. ಚಿಂತಕರು, ಪ್ರಗತಿಪರರು ಏನು ಮಾಡುತ್ತಿದ್ದಾರೆ? ಮಕ್ಕಳ ಆಯೋಗ ಏನು ಮಾಡುತ್ತಿದೆ? ಈ ಘಟನೆಯಲ್ಲಿ ನ್ಯಾಯ ಸಿಗದಿದ್ದರೆ ಅದು 2023ರ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
Published On - 2:39 pm, Tue, 30 August 22