Ganesh Chaturthi 2022: ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಸಿದ್ಧವಾದ ಕೋಟೆ ನಾಡು, ಶಿವ ಪುತ್ರನ ದರ್ಶನಕ್ಕೆ ಬರುತ್ತಾರೆ ಗ್ರಾಮ ದೇವತೆಗಳು
ಗಣೇಶ ಕೂರಿಸಲಾಗುವ 18 ದಿನಗಳು ಅಶೋಕ್ ಸಿಂಘಲ್ ಜಿ ಮಂಟಪದಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ವಿಶೇಷವೆಂದರೆ ಮಂಟಪದಲ್ಲಿ ವೀರ ವೀರ ಸಾವರ್ಕರ್ರ ಜೀವನ, ಸಂದೇಶಗಳ ಚಿತ್ರ ನೋಟ ಹಾಕಲು ಹಿಂದೂ ಮಹಾಗಣಪತಿ ಸದಸ್ಯರು ತಯಾರಿ ನಡೆಸಿದ್ದಾರೆ.
ಚಿತ್ರದುರ್ಗ: ಶ್ರಾವಣ ಮಾಸ ಮುಗಿದು ಈಗ ಭಾದ್ರಪದ ಮಾಸ ಶುರುವಾಗಿದೆ. ಗಲ್ಲಿ ಗಲ್ಲಿಗಳಲ್ಲೂ ಗಣಪನ ಜಪ ಜೋರಾಗಿದೆ(Ganesh Chaturthi). ನಾನಾ, ನೀನಾ ಎಂದು ಮುಗಿಲೆತ್ತರದ ಗಣೇಶನ ಮೂರ್ತಿಗಳು ತಲೆ ಎತ್ತುತ್ತಿವೆ. ಪ್ರಥಮ ಪೂಜಿತ, ಸರ್ವ ವಿಘ್ನ ನಿವಾರಕ ಗಜಮುಖನ ಅದ್ಧೂರಿ ಮಹೋತ್ಸವಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕೊರೊನಾದಿಂದ ಕಳೆ ಕಳೆದುಕೊಂಡಿದ್ದ ಕಾರ್ಯಕ್ರಮಗಳು ದೊಡ್ಡ ಬ್ರೇಕ್ ಬಳಿಕ ಮತ್ತೆ ಕಳೆ ಕಟ್ಟುತ್ತಿವೆ. ಸದ್ಯ ಆಗಸ್ಟ್ 31ರಂದು ಗಣೇಶ ಹಬ್ಬ ಹಿನ್ನೆಲೆ ರಾಜ್ಯದಲ್ಲಿ ಗಣೇಶ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಅದರಲ್ಲೂ ಇಡೀ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಕೋಟೆ ನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ(Hindu Maha Ganapathi 2022) ಪ್ರತಿಷ್ಠಾಪನೆಗೆ ಸಿದ್ಧವಾಗಿದೆ.
ಇದೇ ಆಗಸ್ಟ್ 31ರ ಬುಧವಾರದಂದು ಚಿತ್ರದುರ್ಗದ ವೀರ ಸಾವರ್ಕರ್ ಮಂಟಪದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಅಶೋಕ್ ಸಿಂಘಲ್ ಜಿ ಮಂಟಪ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿದ್ಧವಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹಿಂದೂ ಮಹಾಗಣಪತಿಯ ಅದ್ಧೂರಿ ಮಹೋತ್ಸವ ನಡೆಯಲಿದೆ.
ಶಿವ ಪುತ್ರ ಗಣೇಶನನ್ನು ನೋಡಲು ಬರುತ್ತಾರೆ ಗ್ರಾಮ ದೇವತೆಗಳು
ಪ್ರತಿ ವರ್ಷ ಮಹಾರಾಷ್ಟ್ರದ ಸಾಂಗ್ಲಿಯಿಂದ ಚಿತ್ರದುರ್ಗಕ್ಕೆ ಗಣಪನ ಆಗಮನವಾಗುತ್ತಿತ್ತು. ಆದ್ರೆ ಈ ಬಾರಿ ಬೆಂಗಳೂರಿನಿಂದ 15 ಅಡಿಯ ಗಣಪನನ್ನು ಬರಮಾಡಿಕೊಳ್ಳಲಾಗಿದೆ. ಆಗಸ್ಟ್ 31ರಂದು ಅಂದ್ರೆ ನಾಳೆ ಶುಭ ಮುಹೂರ್ತದಲ್ಲಿ ಚಿತ್ರದುರ್ಗದ ವೀರ ಸಾವರ್ಕರ್ ಮಂಟಪದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತೆ. ಬಳಿಕ 18 ದಿನ ಮಹಾಗಣಪನಿಗೆ ವಿಶೇಷ ಪೂಜೆ, ಹವನಗಳು ನೆರವೇರುತ್ತವೆ. ಅದರಲ್ಲೂ ವಿಶೇಷ ಅಂದ್ರೆ ಸೆಪ್ಟೆಂಬರ್ 14ರಂದು ಮಹಾ ಹೋಮ ನಡೆಯುತ್ತೆ. ಗಣ ಹೋಮ, ಸುದರ್ಶನ ಹೋಮ, ನವಗ್ರಹ ಹೋಮಗಳನ್ನು ಮಾಡಿ ಬಂದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತೆ. ಈ ಹೋಮ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ನಗರ ದೇವತೆಗಳು ಭಾಗಿಯಾಗುತ್ತವೆ. ದೇವರ ವಿಗ್ರಹಗಳ ಹೋಮದಲ್ಲಿ ಪಾಲ್ಗೊಳ್ಳುವುದನ್ನು ಇಲ್ಲಿನ ಭಕ್ತರು ಗಣೇಶನನ್ನು ನೋಡಲು ಗ್ರಾಮ ದೇವತೆಗಳೇ ಬರುತ್ತಾರೆ ಎಂದು ವರ್ಣಿಸುತ್ತಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಒಟ್ಟುಗೂಡಿ 2007ರಲ್ಲಿ ಮೊದಲ ಬಾರಿಗೆ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆ ಮಾಡಿತ್ತು. ಅಂದಿನಿಂದ ಇಂದಿನ ವರೆಗೆ ಪ್ರತಿ ವರ್ಷ ಅದ್ಧೂರಿ ಗಣೇಶೋತ್ಸವ ಮಾಡುವ ಮೂಲಕ ಬೇರೆ ಬೇರೆ ರಾಜ್ಯದ ಲಕ್ಷಾಂತರ ಭಕ್ತರನ್ನು ಒಂದೇ ವೇದಿಕೆಗೆ ಕರೆತರುತ್ತಿದೆ. 2010ರಿಂದ ಹಿಂದೂ ಮಹಾಗಣಪತಿಯ ಹವಾ ಮತ್ತಷ್ಟು ಹೆಚ್ಚಾಗಿದ್ದು ಈಗ ಇಡೀ ರಾಜ್ಯದಲ್ಲಿ ಅದ್ಧೂರಿ ಗಣೇಶೋತ್ಸವ ಮಾಡುವ ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಬಂದಾಗಿದೆ. ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗಾಗಿಯೇ ತಿಂಗಳುಗಳಿಂದ ಸಿದ್ಧತೆಗಳು ಶುರುವಾಗುತ್ತವೆ. ದೂರದೂರಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಮಂದಿ ಗಣೇಶನ ವಿಸರ್ಜನೆಯಲ್ಲಿ ಭಾಗಿಯಾಗುತ್ತಾರೆ.
ಸೆಪ್ಟೆಂಬರ್ 17ರಂದು ಶೋಭಾಯಾತ್ರೆ
ಆಗಸ್ಟ್ 31ರಂದು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ 18ದಿನಗಳ ಕಾಲ ಪೂಜೆ, ಹವನ, ಪ್ರಸಾದಗಳನ್ನು ಹಂಚಿ ಕೊನೆಗೆ ಸೆಪ್ಟೆಂಬರ್ 17ರಂದು ಶೋಭಾಯಾತ್ರೆ ಮೂಲಕ ಗಣೇಶನ ವಿಸರ್ಜನೆ ಮಾಡಲಾಗುತ್ತೆ. ಲೈಟ್ಸ್, ಡಿಜೆ ಸದ್ದಿನಲ್ಲಿ, ಭಕ್ತರ ಜೈಕಾರದ ನಡುವೆ ಬೃಹತ್ ಗಣೇಶನ ವಿಸರ್ಜನಾ ಮೆರವಣಿಗೆ ನಡೆಯುತ್ತೆ. ಈ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಕುಣಿದು ಕುಪ್ಪಳಿಸಿ ದೇವರಿಗೆ ವಿದಾಯ ಮಾಡಲಾಗುತ್ತೆ.
ಅಶೋಕ್ ಸಿಂಘಲ್ ಜಿ ಮಂಟಪದಲ್ಲಿ ಭರ್ಜರಿ ಕಾರ್ಯಕ್ರಮಗಳು
ಗಣೇಶ ಕೂರಿಸಲಾಗುವ 18 ದಿನಗಳು ಅಶೋಕ್ ಸಿಂಘಲ್ ಜಿ ಮಂಟಪದಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ವಿಶೇಷವೆಂದರೆ ಮಂಟಪದಲ್ಲಿ ವೀರ ವೀರ ಸಾವರ್ಕರ್ರ ಜೀವನ, ಸಂದೇಶಗಳ ಚಿತ್ರ ನೋಟ ಹಾಕಲು ಹಿಂದೂ ಮಹಾಗಣಪತಿ ಸದಸ್ಯರು ತಯಾರಿ ನಡೆಸಿದ್ದಾರೆ. ಅಲ್ಲದೆ ಸಾವರ್ಕರ ಕುರಿತು ವಿಶೇಷ ಸಂವಾದ, ಚರ್ಚೆ ಇರಲಿದೆ. ಇದರ ಜೊತೆಗೆ ಹಾಡು, ನೃತ್ಯ ಸೇರಿದಂತೆ ಕೆಲ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ನಿತ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಗಣೇಶ ಚತುರ್ಥಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:22 pm, Tue, 30 August 22