ಚಿತ್ರದುರ್ಗ ಸೆ.04: ನಿಂತಿದ್ದ ಲಾರಿಗೆ (Lory) ಹಿಂದಿನಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಮಲ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ (National Highway) 150ರಲ್ಲಿ ನಡೆದಿದೆ. ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಶಂಶುದ್ದೀನ್(40), ಮಲ್ಲಿಕಾ(37), ಖಲೀಲ್(42), ತಬ್ರೇಜ್(13) ಮೃತ ದುರ್ದೈವಿಗಳು. ನರ್ಗೀಸ್, ರೆಹಾನ್, ರೆಹಮಾನ್ ಗಾಯಾಳುಗಳು. ಹೊಸಪೇಟೆ ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ಕಾರು ನಿಂತಿದ್ದ ಲಾರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿದೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ನೆಲಮಂಗಲ: ಬೈಕ್ ಮತ್ತು ಕಂಟೇನರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ಟಿ.ಬೇಗೂರು ಬಳಿ ನಡೆದಿದೆ.
ಇನ್ನು ಬೈಕ್ನಲ್ಲಿ ಹಿಂಬದಿ ಕೂತಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ಯಾಮಗೊಂಡ್ಲು ಗ್ರಾಮದ ನಿವಾಸಿ ದೊರೆಸ್ವಾಮಿ (24) ಮೃತ ಬೈಕ್ ಸವಾರ. ಮಾದನಾಯಕನಹಳ್ಳಿ ಗ್ರಾಮದ ನರಸಿಂಹಮೂರ್ತಿ (30) ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಅಪಘಾತದ ಬಳಿಕ ಕಂಟೇನರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಶಿವಗಂಗೆಯಲ್ಲಿ ಸ್ನೇಹಿತರನ್ನು ಬೇಟಿಯಾಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳ ದುರ್ಮರಣ; ಚಾಲಕ ಪರಾರಿ
ಕಲಬುರಗಿ: ನಿರಂತರವಾಗಿ ಮಳೆಯಿಂದ ಮನೆ ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆ ಮೃತಪಟ್ಟಿರುವ ಘಟನೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಪೂಜಾರಿ, ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿ, ಮೇಕೆ ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಕುರಿ, ಮೇಕೆ ಕಳೆದುಕೊಂಡು ಕುಟುಂಬಗಳು ಕಂಗಾಲಾಗಿವೆ. ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಟುಂಬ ನಿನ್ನೆ (ಸೆ.03) ರಂದು ಸಂಜೆ ಮನೆಯೊಂದರಲ್ಲಿ ಮೇಕೆ ಹಾಗೂ ಕುರಿಗಳನ್ನು ಇರಿಸಿದ್ದರು, ಸುರಿದ ಮಳೆಯಿಂದಾಗಿ ಗೋಡೆ ತೇವಗೊಂಡು ಕುಸಿದಿದೆ. ಪರಿಣಾಮ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 am, Mon, 4 September 23