ಚಿತ್ರದುರ್ಗ: ಸಮಾನತೆಗಾಗಿ ಕಾಯಕ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು. ಕಾಯಕ ಕ್ರಾಂತಿಗೆ ನಮ್ಮ ಸರ್ಕಾರ ಸಿದ್ಧವಿದೆ. ಕಲ್ಯಾಣ ಕ್ರಾಂತಿಯಾದಾಗ ಶರಣರು ದಿಕ್ಕುಪಾಲಾಗಬೇಕಾಯಿತು. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಜೊತೆಗೆ ಕಾಯಕ ಕ್ರಾಂತಿ ಆಗಿದೆ. ಮುಂದುವರಿದಿದ್ದರೆ ಕರ್ನಾಟಕದ ಚಿತ್ರಣ ಬದಲಾಗುತ್ತಿತ್ತು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಚಿತ್ರದುರ್ಗ (Chitradurga) ತಾಲೂಕಿನ ಸಿಬಾರ ಗ್ರಾಮದ ಬಳಿಯ ಮೇದಾರ ಗುರುಪೀಠದ (Medar Gurupetha) ಆವರಣದಲ್ಲಿ ನಡೆದ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೇದಾರ ಸಮುದಾಯದ ಕಾಯಕ ಜೀವಿಗಳಿಗೆ ಬಿದಿರು ಬೇಕು. ಮೀಸಲು ಪ್ರದೇಶದಲ್ಲಿ ಬಿದಿರು ಬೆಳೆಸಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಮೇದಾರ ಸಮಾಜಕ್ಕೆ ಗುರುಗಳ ಹೆಸರಿನಲ್ಲಿ ವೃತ್ತಿಪರವಾಗಿರುವ ನಿಗಮ ಸ್ಥಾಪನೆ ಮಾಡುತ್ತೇವೆ. ಮೇದಾರ ಮಠದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡುತ್ತೇವೆ. ಸರ್ಕಾರದಿಂದ ಮೇದಾರ ಗುರುಗಳ ಜಯಂತಿ ಆಚರಿಸುತ್ತೇವೆ. ದುಡಿಮೆ ನಿಮ್ಮದು, ದುಡಿಮೆಗೆ ಬೆಲೆ ತರುವ ಕೆಲಸ ನಮ್ಮದು ಎಂದು ಭರವಸೆ ನೀಡಿದರು.
ಪ್ರತಿ ಕಾಯಕ ಕೂಡ ಉತ್ಕೃಷ್ಟವಾಗಿದೆ. ರಾಜ್ಯ ಕಟ್ಟಲು ಶ್ರೀಮಂತರಿಂದ ಮಾತ್ರ ಸಾಧ್ಯವಿಲ್ಲ. ದುಡಿಯುವ ವರ್ಗಕ್ಕೆ ಮನ್ನಣೆ ಕೊಟ್ಟಾಗ ಜನಪರ ನಾಡು ನಿರ್ಮಾಣವಾಗುತ್ತದೆ. ಹಣದಿಂದ ಎಲ್ಲವೂ ಸಾಧ್ಯ ಎಂಬುದು ನಮ್ಮೆಲ್ಲರ ಭ್ರಮೆ ಅಷ್ಟೇ. ಆರ್ಥಿಕ ಸಬಲತೆಗಾಗಿ ವಿದ್ಯಾರ್ಜನೆ ಬಹಳ ಮುಖ್ಯ ಎಂದರು.
ಜಾಗತಿಕರಣ, ಖಾಸಗೀಕರಣ, ಉದಾರೀಕರಣದಿಂದಾಗಿ ಸಮಾಜದ ಸಣ್ಣ ಸಣ್ಣ ಸಮುದಾಯಗಳಿಗೆ ಹೊಡೆತ ಬಿದ್ದಿದೆ. ಅಂತಃಕರಣದಿಂದ ಸಮುದಾಯಗಳ ಅಭಿವೃದ್ಧಿ ಮಾಡಬೇಕಿದೆ ಎಂದು ಹೇಳಿದರು.
ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇನೆ. ಕಾನೂನು ಚೌಕಟ್ಟಿಗಾಗಿ ಕೇಂದ್ರಕ್ಕೆ ವರದಿ ಕಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅನೇಕ ಜನ ಜೇನುಗೂಡಿಗೆ ಕೈ ಹಾಕಬೇಡಿ ಎಂದು ನನಗೆ ಹೇಳಿದ್ದರು. ಹಾಗಾದರೆ ಬದಲಾವಣೆ ತರುವುದು ಯಾವಾಗ? ಇತಿಹಾಸ ಬದಲಾಯಿಸಬೇಕು, ಹೊಸ ಇತಿಹಾಸ ಸೃಷ್ಟಿಸಬೇಕು. ಪ್ರಧಾನಿ ನರೇಂದ್ರ ಮೋದಿ ದೊಡ್ಡ ಬದಲಾವಣೆ ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಯಕ ಕ್ರಾಂತಿ ಆಗಬೇಕೆಂಬುದು ನಮ್ಮ ಆಸೆ ಇದೆ. 21ನೇ ಶತಮಾನದಲ್ಲಿ ಕನಸು ನನಸಾಗಿಸುವ ಕೆಲಸವಾಗಬೇಕು. ಬೋವಿ, ಬಂಜಾರ, ಕುರುಬ ಸಮಾಜದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾತು ನೀಡಿದರು.
ರಾಜಕಾರಣದಲ್ಲಿ ನೀವೇ ಮಾಲೀಕರು. ಸುಳ್ಳು ಹೇಳಿ ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನಿಮ್ಮ ಬಗ್ಗೆ ಕಳಕಳಿಯಿಂದ ಕೆಲಸ ಮಾಡುವವರಿಗೆ ಮತ ಹಾಕಿ. ಮತದ ಗೌರವ ಹೆಚ್ಚಿಸಿ ಎಂದು ಮನವಿ ಮಾಡುತ್ತೇನೆ. ಗೋಡಾ ಹೈ ಮೈದಾನ್ ಹೈ ನಾವು ತಯಾರಿದ್ದೇವೆ. ಚುನಾವಣೆ ವೇಳೆ ಒಂದು ತಿಂಗಳು ಮಾತ್ರ ರಾಜಕಾರಣ ಮಾಡಬೇಕು ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ