ಶಿವಮೊಗ್ಗ: ಕಳೆದ ಒಂದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ (Karnataka cabinet expansion) ಆಗೋದೇ ಇಲ್ಲ ಎನ್ನುವ ಚರ್ಚೆಗಳು ಬಿಜೆಪಿಯಲ್ಲೇ ನಡೆದಿವೆ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಎಲ್ಲರೂ ಬ್ಯುಸಿಯಾಗಿದ್ದರಿಂದ ಮೂರ್ನಾಲ್ಕು ತಿಂಗಳು ಮಂತ್ರಿಯಾಗಿ ಏನು ಮಾಡುವುದು ಇದೆ ಎನ್ನುವ ಮಾತುಗಳು ಸಚಿವಾಕಾಂಕ್ಷಿಗಳ ಬಾಯಲ್ಲೇ ಬರುತ್ತಿವೆ. ಇದರೊಂದಿಗೆ ಆಕಾಂಕ್ಷಿಗಳು ಸಚಿವ ಸ್ಥಾನದ ಆಸೆಯನ್ನೇ ಬಿಟ್ಟು ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಆದ್ರೆ, ಇದರ ಮಧ್ಯೆ ಇದೀಗ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಸಿಎಂ ಬೊಮ್ಮಾಯಿ ಹೊಸ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೌದು…ಶಿವಮೊಗ್ಗದಲ್ಲಿ ಇಂದು(ಜನವರಿ 07) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎರಡ್ಮೂರು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಪ್ರಧಾನಿ ,ಕೇಂದ್ರದ ನಾಯಕರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು. ಇನ್ನು ಅತ್ತ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ.
ಶೀಘ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಕೇಂದ್ರ ನಾಯಕರ ಜತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈಗಾಗಲೇ ಕೇಂದ್ರ ನಾಯಕತ ಜತೆ ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದೇವೆ. ಶೀಘ್ರ ಮತ್ತೊಂದು ಸಭೆ ಮಾಡಿ ಸಚಿವ ಸಂಪುಟ ವಿಸ್ತರಣೆ ನಿರ್ಧಾರ ಮಾಡುತ್ತೇವೆ. ಈಶ್ವರಪ್ಪ, ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಎಲ್ಲಾ ವಿಚಾರವನ್ನು ಕೇಂದ್ತ ನಾಯಕರಿಗೆ ತಿಳಿಸಿದ್ದು, ಜಿಲ್ಲಾವಾರು ,ಪ್ರದೇಶಿಕ, ಸಾಮಾಜಿಕವಾಗಿ ಎಲ್ಲವೂ ಚರ್ಚೆಯಲ್ಲಿದೆ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸುತಿದ್ದಂತೆಯೇ ಸಂಪುಟ ವಿಸ್ತರಣೆ ಮತ್ತೆ ಮುನ್ನಲೆಗೆ ಬಂದಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಕುರಿತಾಗಿ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಸಿಕ್ಕಿಲ್ಲ.ಇದಿಷ್ಟೇ ಅಲ್ಲ, ಕೆಲವು ಪ್ರಮುಖ ನಿಗಮ, ಮಂಡಳಿಗಳ ನೇಮಕಾತಿಗೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಚುನಾವಣೆಗೆ ಇದೀಗ ಕೆಲವೇ ತಿಂಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಹೇಳಿಕೆಗಳಿಂದ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ಒಳಮನೆಯಲ್ಲಿ ಚರ್ಚೆ ಮುನ್ನಲೆಗೆ ಬಂದಿದೆ.
ಇತ್ತೀಚೆಗಷ್ಟೇ ಸಿಎಂ ಬೊಮ್ಮಾಯಿ ಒಂದು ತೀರ್ಮಾನ ಮಾಡಿಕೊಂಡು ಬರಲು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಚಿವ ಪಟ್ಟದ ಆಕಾಂಕ್ಷಿಗಳಿಗೆ ಸಂಪುಟ ವಿಸ್ತರಣೆ ಆಗಬಹುದಾ ಎಂಬ ನಿರೀಕ್ಷೆ ಮತ್ತೊಮ್ಮೆ ಗರಿಗೆದರಿತ್ತು. ಆದರೆ, ಎಂದಿನಂತೆ ಪುನಃ ನಿರಾಸೆಯೇ ಕಾದಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದರು. ಆ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾವೇ ಅಂತಿಮ ನಿರ್ಧಾರ ಮಾಡಿ ಹೇಳುತ್ತೇವೆ ಹೋಗಿ ಎಂದು ಹೈಕಮಾಂಡ್, ಬೊಮ್ಮಾಯಿಗೆ ಹೇಳಿ ಕಳುಹಿಸಿದ್ದರು. ಆದ್ರೆ, ಯಾವಾಗ? ಏನು? ಈ ಕುರಿತಾದ ಯಾವ ಮಾಹಿತಿಯೂ ಲಭ್ಯವಾಗಿರಲಿಲ್ಲ.
ಇದಾದ ಬಳಿಕ ಮೊನ್ನೇ ಅಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ನಿರೀಕ್ಷೆಗಳು ಇದ್ದವು. ಈ ಬಗ್ಗೆ ಸಚಿವಾಕಾಂಕ್ಷಿಗಳು ಸಹ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದ್ರೆ, ಶಾ ಮುಂದಿನ ಚುನಾವಣೆ ಬಗ್ಗೆ ಬಿಟ್ಟರೇ ಇನ್ಯಾವುದರ ಬಗ್ಗೆ ಚರ್ಚೆ ಮಾಡಿಲ್ಲ. ಆಗಲೂ ಸಹ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ ಮೂಡಿಸಿತ್ತು. ಇದೀಗ ಬೊಮ್ಮಾಯಿ ಹಾಗೂ ಯತ್ನಾಳ್ ನೀಡಿರುವ ಹೇಳಿಕೆಗಳನ್ನು ಗಮನಿಸಿದ್ರೆ ಸಂಪುಟ ವಿಸ್ತರಣೆ ಅಂತಿಮ ಹಂತಕ್ಕೆ ಬಂದಂತೆ ಕಾಣುತ್ತಿದ್ದು, ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಯಾರಿಗೆ ಕೈತಪ್ಪಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ