Cabinet Expansion: 2023ರ ಸಂಕ್ರಾಂತಿಯೊಳಗೆ ಮೋದಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಏನಿದು ಲೆಕ್ಕಾಚಾರ?
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಕೆಲವು ಬಿಜೆಪಿ ನಾಯಕರು ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ನವದೆಹಲಿ: 2023ರ ಬಜೆಟ್ ಅಧಿವೇಶನಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi Cabinet) ಅವರ ಸಂಪುಟ ವಿಸ್ತರಣೆ (Cabinet Expansion) ಮತ್ತು ಪುನರ್ ರಚನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಕರ ಸಕ್ರಾಂತಿ (ಜನವರಿ 14)ಯೊಳಗೆ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲು ಯೋಚಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವೇಳೆ ಅನೇಕ ಮಹತ್ವದ ಖಾತೆಗಳ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಜನವರಿ 20ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಲ್ಲದೆ, ಜನವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಸಹ ನಡೆಸಲಿದೆ. ಈ ಬಗ್ಗೆ ಈಗಾಗಲೇ ಕೆಲವು ಸಂಸದರು ರಾಜಕೀಯ ವಲಯಗಳಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಕೆಲವು ಬಿಜೆಪಿ ನಾಯಕರು ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: Heeraben Modi Funeral: ಮೋದಿ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ; ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ
ಮುಂದಿನ ವರ್ಷ 9 ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಮಾಹಿತಿ ಪ್ರಕಾರ, ಅವರ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಚಿವರನ್ನು ಸಂಪುಟದಿಂದ ತೆಗೆದುಹಾಕಬಹುದು. ಮೋದಿ 2.0 ಕ್ಯಾಬಿನೆಟ್‌ನಲ್ಲಿ ಕೊನೆಯ ಪುನರ್ ರಚನೆ 2021ರ ಜುಲೈ 7ರಂದು ನಡೆದಿತ್ತು. ಇದರಲ್ಲಿ 12 ಮಂತ್ರಿಗಳನ್ನು ಸಂಪುಟದಿಂದ ಕೈಬಿಡಲಾಗಿತ್ತು.
ಇದನ್ನೂ ಓದಿ: 2023ರ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕೈಬಿಡಲು ಕೇರಳ ಸಚಿವ ಸಂಪುಟ ನಿರ್ಧಾರ
2023ರಲ್ಲಿ 9 ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಈ ಸಚಿವ ಸಂಪುಟ ವಿಸ್ತರಣೆ ಮಹತ್ವ ಪಡೆಯುವ ಸಾಧ್ಯತೆಯಿದೆ.
ತ್ರಿಪುರಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಇತ್ತೀಚೆಗೆ, ಪ್ರಧಾನಿ ಮೋದಿಯವರ ತವರು ಗುಜರಾತ್‌ನಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿ, 182 ರಲ್ಲಿ 155 ಸ್ಥಾನಗಳನ್ನು ಗಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 am, Sat, 31 December 22