ಸುಳ್ಳು ಸುದ್ದಿ ಹರಡಬೇಡಿ; ಕಾಂಗ್ರೆಸ್​ಗೆ ಮರು ಸೇರ್ಪಡೆಯಾಗುವ ವದಂತಿ ಬಗ್ಗೆ ಗುಲಾಂ ನಬಿ ಆಜಾದ್ ಅಸಮಾಧಾನ

ಗುಲಾಂ ನಬಿ ಆಜಾದ್ ರಾಜೀನಾಮೆ ಪತ್ರವನ್ನು ನೀಡಿದ ನಂತರ ಆಗಸ್ಟ್‌ನಲ್ಲಿ ಆಜಾದ್ ಕಾಂಗ್ರೆಸ್ ತೊರೆದಿದ್ದರು. ತಮ್ಮ ವಿದಾಯ ಪತ್ರದಲ್ಲಿ ಅವರು ರಾಹುಲ್ ಗಾಂಧಿಯವರ ಮೇಲೆ ವಾಗ್ದಾಳಿ ನಡೆಸಿದ್ದರು.

ಸುಳ್ಳು ಸುದ್ದಿ ಹರಡಬೇಡಿ; ಕಾಂಗ್ರೆಸ್​ಗೆ ಮರು ಸೇರ್ಪಡೆಯಾಗುವ ವದಂತಿ ಬಗ್ಗೆ ಗುಲಾಂ ನಬಿ ಆಜಾದ್ ಅಸಮಾಧಾನ
ಗುಲಾಂ ನಬಿ ಆಜಾದ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 31, 2022 | 10:53 AM

ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಶುಕ್ರವಾರ ತಮ್ಮ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಆ ಊಹಾಪೋಹಗಳನ್ನು ಗುಲಾಂ ನಬಿ ಆಜಾದ್ ನಿರಾಕರಿಸಿದ್ದಾರೆ. ನಾನು ಕಾಂಗ್ರೆಸ್ (Congress) ಪಕ್ಷಕ್ಕೆ ಮರುಸೇರ್ಪಡೆಯಾಗುವ ಬಗ್ಗೆ ಎಎನ್‌ಐ ಮಾಡಿದ ವರದಿಯನ್ನು ನೋಡಿ ನನಗೆ ಆಘಾತವಾಗಿದೆ. ದುರದೃಷ್ಟವಶಾತ್ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಇದೀಗ ಇಂತಹ ಸುದ್ದಿಗಳನ್ನು ಹರಡುತ್ತಿದ್ದಾರೆ. ನನ್ನ ಬೆಂಬಲಿಗರನ್ನು ನಿರಾಶೆಗೊಳಿಸಲು ಕಾಂಗ್ರೆಸ್​ನವರು ಈ ರೀತಿ ಮಾಡುತ್ತಿದ್ದಾರೆ ಎಂದು ಗುಲಾಂ ನಬಿ ಆಜಾದ್ ಟ್ವೀಟ್ ಮಾಡಿದ್ದಾರೆ.

“ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವದ ವಿರುದ್ಧ ನನಗೆ ಯಾವುದೇ ಕೆಟ್ಟ ಉದ್ದೇಶವಿಲ್ಲ. ಆದರೆ ಈ ರೀತಿಯ ಸುಳ್ಳು ವದಂತಿಗಳನ್ನು ಹರಡಬೇಡಿ ಎಂದು ನಾನು ಅವರಿಗೆ ವಿನಂತಿಸುತ್ತೇನೆ. ಈ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಇದನ್ನೂ ಓದಿ: Democratic Azad Party: ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಅಂತರವನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕರಾದ ಅಖಿಲೇಶ್ ಪ್ರಸಾದ್ ಸಿಂಗ್, ಭೂಪಿಂದರ್ ಸಿಂಗ್ ಹೂಡಾ ಮತ್ತು ಅಂಬಿಕಾ ಸೋನಿ ಅವರಿಗೆ ವಹಿಸಲಾಗಿದೆ ಎಂದು ನಿನ್ನೆ ಸುದ್ದಿ ಸಂಸ್ಥೆ ANI ವರದಿ ಮಾಡಿತ್ತು. ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯ ಸಂಚಾಲಕ ದಿಗ್ವಿಜಯ ಸಿಂಗ್ ಅವರು ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಗುಲಾಂ ನಬಿ ಆಜಾದ್ ಅವರನ್ನು ಆಹ್ವಾನಿಸಿದ್ದರು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವೇ ನಮ್ಮ ಮುಖ್ಯ ಅಜೆಂಡಾ: ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್ ರಾಜೀನಾಮೆ ಪತ್ರವನ್ನು ನೀಡಿದ ನಂತರ ಆಗಸ್ಟ್‌ನಲ್ಲಿ ಆಜಾದ್ ಕಾಂಗ್ರೆಸ್ ತೊರೆದಿದ್ದರು. ತಮ್ಮ ವಿದಾಯ ಪತ್ರದಲ್ಲಿ ಅವರು ರಾಹುಲ್ ಗಾಂಧಿಯವರ ಮೇಲೆ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ರಾಹುಲ್ ಅಥವಾ ಅವರ ಭದ್ರತಾ ಸಿಬ್ಬಂದಿ ಮತ್ತು ಪಿಎಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು 73 ವರ್ಷದ ನಾಯಕ ಗುಲಾಂ ನಬಿ ಆಜಾದ್ ಆರೋಪಿಸಿದ್ದರು.

1970 ರ ದಶಕದ ಮಧ್ಯಭಾಗದಲ್ಲಿ ಕಾಂಗ್ರೆಸ್ ಸೇರಿದ ಗುಲಾಂ ನಬಿ ಆಜಾದ್ ಪಕ್ಷ ಮತ್ತು ಸರ್ಕಾರದಲ್ಲಿ ಅನೇಕ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಗುಲಾಂ ನಬಿ ಆಜಾದ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಜೊತೆಗಿನ ದಶಕಗಳ ಕಾಲದ ಒಡನಾಟವನ್ನು ಕೊನೆಗೊಳಿಸಿದ ನಂತರ ಗುಲಾಂ ನಬಿ ಆಜಾದ್ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ