Santro Ravi: ದಾಖಲೆಯಿಲ್ಲದೇ ಮಾತಾಡುವುದು ಎಚ್ಡಿಕೆ ಜಾಯಮಾನವೇ ಅಲ್ಲ; ಬಿಜೆಪಿ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ಯ ಸದ್ದು ಮಾಡುತ್ತಿರುವುದು ಸ್ಯಾಂಟ್ರೋ ರವಿ ಹೆಸರು. ಈ ರೌಡಿಶೀಟರ್ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಮತ್ತೆ ಗುಡುಗಿದ್ದಾರೆ.
ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಜತೆ ಬಿಜೆಪಿ ನಾಯಕರ ಸಂಪರ್ಕ ಆರೋಪ ವಿಚಾರವಾಗಿ ಬಿಜೆಪಿ (BJP) ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತೆ ಟ್ವೀಟ್ ವಾರ್ ಆರಂಭಿಸಿದ್ದಾರೆ. ದಾಖಲೆಯಿಲ್ಲದೇ ಮಾತಾಡುವುದು ಹೆಚ್ಡಿಕೆ ಜಾಯಮಾನವೇ ಅಲ್ಲ. ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ. ಈ ಸ್ಯಾಂಟ್ರೋ ರವಿಗೆ ಕುಮಾರಕೃಪದಲ್ಲಿ ವ್ಯವಸ್ಥೆ ಕಲ್ಪಿಸಿದ್ದು ಯಾರು? ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ. ಇದು ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ಟೀಕಿಸಿದರು.
ಬಿಜೆಪಿಯವರೆ, ದಾಖಲೆಗಳಿಲ್ಲದೆ ಮಾತಾಡುವುದು ಕುಮಾರಸ್ವಾಮಿ ಅವರ ಜಾಯಮಾನವೇ ಅಲ್ಲ. ಸ್ಯಾಂಟ್ರೋ ರವಿ ಯಾರೂ ಅಂತ ಗೊತ್ತೇ ಇಲ್ಲ ಎಂದ ನಿಮ್ಮ ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ. ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದರು.
ಇದನ್ನೂ ಓದಿ: ಸ್ಯಾಂಟ್ರೋ ರವಿ ಬಗ್ಗೆ ಎಚ್ಡಿಕೆ ಬಳಿ ಸಾಕಷ್ಟು ಮಾಹಿತಿ ಇದೆ, ಪೊಲೀಸರಿಗೆ ಕೊಟ್ಟು ಸಹಕರಿಸಲಿ ಎಂದ ಗೃಹ ಸಚಿವ
ಸ್ಯಾಂಟ್ರೋ ರವಿಯೊಂದಿಗೆ ನಿಮ್ಮ ಸಚಿವರಿಗಿರುವ ಸಂಬಂಧವೇನು? ಉನ್ನತ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ, ವರ್ಗಾವಣೆ ಕೆಲಸ ಮಾಡಿಸುತ್ತೇನೆ ಎನ್ನುವ ಈ ಡೀಲ್ ಗಿರಾಕಿಯ ವ್ಯವಹಾರಕ್ಕೆ ಸಾಥ್ ನೀಡಿದವರು ಯಾರು? ಸ್ಯಾಂಟ್ರೊ ರವಿಯ ಆಡಿಯೊಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಚಯವೇ ಇಲ್ಲವೆಂದ ಮೇಲೆ ಆತನಿಗೆ ಇಡೀ ರಾಜ್ಯ ಸರ್ಕಾರ ತನ್ನ ಜೇಬಲ್ಲಿದೆ ಎಂದು ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಕಮಿಷನ್ ದಂಧೆಗಾಗಿ ಇಂತಹ ಎಷ್ಟು ಅಯೋಗ್ಯರನ್ನು ಸಾಕುತ್ತಾ ಇದ್ದೀರಿ ಎಂದು ಪ್ರಶ್ನಿಸಿದರು.
ಸತ್ಯದ ತಲೆ ಮೇಲೆ ಹೊಡೆದು ಹಸಿಸುಳ್ಳು ಹೇಳುವವರು ನೀವು. ಜನಹಿತಕ್ಕಾಗಿ ಕೆಲಸ ಮಾಡಬೇಕಿದ್ದ ಸರ್ಕಾರ, ಆಡಳಿತವನ್ನು ದಂಧೆ ಮಾಡಿಕೊಂಡಿದೆ. ಕುಮಾರಕೃಪ ಅತಿಥಿ ಗೃಹವನ್ನು ಜೂಜಿನ ಅಡ್ಡೆಯಂತೆ ಬಳಸುತ್ತಿದ್ದೀರಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ ಒಂದು ವಿಡಿಯೋದಿಂದಾಗಿ ಇಂಗು ತಿಂದ ಮಂಗನಂತೆ ತಡಬಡಾಯಿಸುತ್ತಿರುವ ಬಿಜೆಪಿಯವರೆ, ನಿಮ್ಮ ಬುಡ ಅಲುಗಾಡುತ್ತಿದೆ. 2023ರ ಚುನಾವಣೆಯಲ್ಲಿ ನೀವು ಕುಸಿದು ಹೋಗುವುದು ಖಂಡಿತ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ