ಮಂಗಳವಾರ (ಡಿಸೆಂಬರ್ 05) ಬೆಳಗ್ಗೆ ಮನೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾರೆನ್ನಲಾಗಿದ್ದ ಡಾ. ರೂಪಾ ಕೇಸ್ ಗೆ (Suicide or Murder) ಸಂಜೆ ವೇಳೆಗೆ ಟ್ವಿಸ್ಟ್ ಸಿಕ್ಕಿದೆ. ಮೃತದೇಹ ಪೋಸ್ಟ್ ಮಾರ್ಟಂಗೆ ಶಿಫ್ಟ್ ಮಾಡಿದಾಗ ಗುಂಡೇಟಿನಿಂದ (Shootout) ಸಾವು ಎಂಬುದು ಪತ್ತೆ ಆಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹಾಗಾದ್ರೆ ಅಸಲಿಗೆ ನಡೆದಿದ್ದೇನು? ಈ ಕುರಿತು ವರದಿ ಇಲ್ಲಿದೆ.
31 ವರ್ಷದ ಬಳಿಕ ದಂಪತಿ ನಡುವೆ ಮೂಡಿತ್ತಾ ವೈಮನಸ್ಸು? ಗಳಿಸಿದ್ದ ಹಣ ಕಳೆದುಕೊಂಡು ಸಾಲ ಮಾಡಿದ್ದೇ ದುರಂತಕ್ಕೆ ಕಾರಣವಾಯ್ತಾ. ಗುಂಡು ಹಾರಿಸಿಕೊಂಡು ಆತ್ಮಹತ್ಯೆಯೋ, ಕೊಲೆಯೋ? ಹೌದು, ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ರೂಪಾ (Chitradurga district leprosy officer Dr Roopa) ಮತ್ತು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಡಾ. ರವಿ ಮೂವತ್ತೊಂದು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಸುಂದರ ಸಂಸಾರಕ್ಕೆ ಇಬ್ಬರು ಗಂಡು ಮಕ್ಕಳು ಜತೆಯಾಗಿದ್ದಾರೆ. ಅಂತೆಯೇ ಈ ವೈದ್ಯ ದಂಪತಿ ವೃತ್ತಿಯಲ್ಲಿ ಮಾತ್ರವಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕ್ರಿಯಾಶೀಲರಾಗಿರುತ್ತಿದ್ದರು. ಆದ್ರೆ, ಇಂದು ಚಿತ್ರದುರ್ಗ ನಗರದ ವಿ.ಪಿ. ಎಕ್ಸ್ ಟೆನ್ಷನ್ ಬಡಾವಣೆಯ ನಿವಾಸದಲ್ಲಿ ಡಾ. ರೂಪಾ ನಿಗೂಢವಾಗಿ ಸಾವಿಗೀಡಾಗಿದ್ದರು.
ಬೆಳಗ್ಗೆ ಎಂದಿನಂತೆ ಎದ್ದು ಮೆಡಿಟೇಷನ್ ಮುಗಿಸಿ ಮೂರನೇ ಮಹಡಿಯ ಜಿಮ್ ಗೆ ತೆರಳಿದ್ದೆನು. ಹಿರಿಯ ಮಗ ಬೆಂಗಳೂರಿನಲ್ಲಿದ್ದು, ಕಿರಿಯ ಮಗ ಬಾತ್ ರೂಮ್ ಗೆ ತೆರಳಿದ್ದನು. ಆಗ ರೂಪಾ ಆಕಸ್ಮಿಕವಾಗಿ ತಲೆಗೆ ಗಾಯ ಮಾಡಿಕೊಂಡಿದ್ದು ರಕ್ತ ಮಡುವಿನಲ್ಲಿದ್ದಳು. ಅದನ್ನು ಕಂಡ ಮಗ, ಕೂಗಿಕೊಂಡಾಗ ನಾನೂ ಬಂದು ಬದುಕಿಸುವ ಪ್ರಯತ್ನ ಮಾಡಿದ್ದು ವಿಫಲವಾಯಿತು.
Also Read: ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಸಾವು, ಕಾಲು ಜಾರಿಬಿದ್ದು ಮೃತಪಟ್ಟರೇ?
ರೂಮಿನಲ್ಲಿ ಕಡಪ ಕಲ್ಲಿನ ಸೆಲ್ಸ್ ಇದೆ. ಅಲ್ಲೇ ರೂಪಾಳ ತಂದೆ-ತಾಯಿ ಫೋಟೋಗಳನ್ನು ಇರಿಸಲಾಗಿದೆ. ಸೆಲ್ಸ್ ನಲ್ಲಿ ಬಟ್ಟೆಗಳನ್ನು ತೆಗೆದಿಡುವ ವೇಳೆ ಆಕಸ್ಮಿಕವಾಗಿ ಕಡಪ ಕಲ್ಲು ತಲೆಗೆ ಬಡಿದಿರಬಹುದು. ಕಾಲು ಜಾರಿ ಬಿದ್ದು ತಲೆಗೆ ಪೆಟ್ಟು ಬಿದ್ದಿರಬಹುದು. ತಲೆ ಸುತ್ತು ಬಂದು ಬಿದ್ದಾಗ ಪೆಟ್ಟಾಗಿರಬಹುದು. ಹೇಗೆ ಆಗಿದೆ ಎಂಬುದು ಗೊತ್ತಾಗಿಲ್ಲ. ಆದ್ರೆ, ನಾನು ಬಾಯಲ್ಲಿ ಬಾಯಿಟ್ಟು ಉಸಿರು ಕೊಟ್ಟು ಬದುಕಿಸಲು ಯತ್ನಿಸಿದೆನು. ಮುಂದೆ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಉಸಿರು ನಿಂತು ಹೋಗಿತ್ತು ಎಂದು ಮೃತ ಡಾ. ರೂಪಾಳ ಪತಿ ಡಾ. ರವಿ ಬೆಳಗ್ಗೆ ಹೇಳಿದ್ದರು.
ಆದ್ರೆ, ಪೋಸ್ಟ್ ಮಾರ್ಟಂಗೂ ಮುನ್ನ ಎಸ್ಪಿ ಕೆ. ಪರಶುರಾಮ್ ಹಾಗೂ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ ರೂಪಾಳ ತಲೆಗೆ ಗುಂಡು ಹೊಕ್ಕಿರುವುದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಜೊತೆಗೆ, ರೂಮಿನಲ್ಲಿ ಡೆತ್ ನೋಟ್ ಇರುವುದು ಪತ್ತೆ ಆಗಿದೆ. ಹೀಗಾಗಿ, ರೂಪಾಳ ಸಹೋದರ ನಾಗರಾಜ್ ಬರುವವರೆಗೆ ಕಾದ ಪೊಲೀಸ್ರು ದೂರು ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇನ್ನು ಬೆಳಗ್ಗೆ ಡಾ. ರೂಪಾ ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾಳೆ ಎಂದಿದ್ದ ಪತಿ ಡಾ. ರವಿ ರಾತ್ರಿ 9 ಗಂಟೆ ವೇಳೆಗೆ ವರಸೆ ಬದಲಿಸಿದ್ದರು. ದಾಳಿಂಬೆ ತೋಟದಿಂದ ನಷ್ಟ ಅನುಭವಿಸಿದ್ದು ಸುಮಾರು 10 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದೆನು. 20 ಎಕರೆ ಜಮೀನು ಮತ್ತು ಬೆಲೆ ಬಾಳುವ ಹೋಟೆಲ್, ಮನೆ ಪಕ್ಕದ ನಿವೇಶನ ಮಾರಾಟ ಮಾಡಿದ್ದೆನು. ಅಂತೆಯೇ ರೂಪಾಳ ತಂದೆ-ತಾಯಿ ಇತ್ತೀಚೆಗೆ ಸಾವಿಗೀಡಾಗಿದ್ದರು. ವೈದ್ಯಾಧಿಕಾರಿಯಾಗಿದ್ದ ರೂಪಾ ಇತ್ತೀಚೆಗೆ ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಆಗಿದ್ದು ಸ್ವಲ್ಪ ಮಟ್ಟಿಗೆ ಒತ್ತಡ ಹೆಚ್ಚಿತ್ತು.
ಹೀಗಾಗಿ, ರೂಪಾ ನನ್ನ ಲೈಸನ್ಸಡ್ ರೈಫಲ್ ಇರಿಸುವ ಜಾಗ ನೋಡಿಕೊಂಡು ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದಿದ್ದಾರೆ. ಅಂತೆಯೇ ನಾವು ಮದುವೆಯಾಗಿ 31 ವರ್ಷವೇ ಕಳೆದಿವೆ. ಇಬ್ಬರ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ. ನನ್ನ ಬಗ್ಗೆ ಪತ್ನಿಗೆ ಯಾವುದೇ ಅನುಮಾನವೂ ಇರಲಿಲ್ಲ ಎಂದು ವೈದ್ಯ ಡಾ. ರವಿ ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಡಾ. ರೂಪಾ ನಿಗೂಢವಾಗಿ ಸಾವಿಗೀಡಾದ ದುರಂತ ಘಟನೆ ನಡೆದಿದೆ. ರೂಪಾಳ ತಲೆಗೆ ಗುಂಡೇಟು ಬಿದ್ದಿದ್ದು ಬಯಲಾಗಿದೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ಹೃದಯಾಘಾತ ಎಂದು ಪ್ರಕರಣ ಸಮಾಪ್ತಿಗೊಳಿಸಿ ಎಂದು ಬರೆದಿಟ್ಟಿದ್ದಾರೆನ್ನಲಾಗಿದೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ರು ತನಿಖೆ ನಡೆಸಿ ಡಾ. ರೂಪಾ ಸಾವಿಗೆ ನಿಖರ ಕಾರಣವೇನು? ಅಸಲಿಗೆ ಆತ್ಮಹತ್ಯೆಯೋ ಅಥವಾ ಕೊಲೆಯೋ? ಎಂಬ ಸತ್ಯವನ್ನು ಬಯಲುಗೊಳಿಸಬೇಕಿದೆ. (ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ)
ಇದನ್ನೂ ಓದಿ: Jangi Kushti: ಭಾಲ್ಕಿ -ದೂರದೂರುಗಳಿಂದ ಬಂದಿದ್ದ ಕುಸ್ತಿ ಪಟುಗಳು ಖುಷಿ ಖುಷಿಯಿಂದಲೇ ಕುಸ್ತಿಯಾಡಿ ಬಹುಮಾನ ಪಡೆದರು!
Published On - 4:19 pm, Tue, 6 December 22