
ಚಿತ್ರದುರ್ಗ, ಮಾ.12: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದೆ. 32 ಡಿಗ್ರಿ ಸೆಲ್ಸಿಯಸ್ ಇರಬೇಕಿದ್ದ ತಾಪಮಾನ 37ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೀಗಾಗಿ, ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ, ಮದಕರಿಪುರ, ದೊಡ್ಡ ಸಿದ್ದವ್ವನಹಳ್ಳಿ, ಗೋನೂರು ಭಾಗದಲ್ಲಿ ರೈತಾಪಿ ವರ್ಗ ಹೂವಿನ ಬೆಳೆ(flower crops) ಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ, ಈವರ್ಷ ಕಷ್ಟಪಟ್ಟು ಕೊಳವೆಬಾವಿ ನೀರಿನ ಮೂಲಕ ಬೆಳೆ ಉಳಿಸಿಕೊಂಡರೂ ಸಹ ಸೂರ್ಯನ ಕೋಪಕ್ಕೆ ಹೂಬೆಳೆ ಬಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಹಳೇ ಸೀರೆಗಳನ್ನು ಸಂಗ್ರಹಿಸಿ ಹೂ ಬೆಳೆಗೆ ಹೊದಿಕೆ ಮಾಡಿಕೊಂಡು ಸಂರಕ್ಷಣೆಗೆ ರೈತರು ಹರಸಾಹಸ ಪಡುತ್ತಿದ್ದಾರೆ.
ಇನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಸೇವಂತಿಗೆ, ಮಲ್ಲಿಗೆ, ಕನಕಾಂಬರ ಸೇರಿದಂತೆ
ವಿವಿಧ ಹೂವುಗಳನ್ನು ರೈತರು ಬೆಳೆಯುತ್ತಾರೆ. ಹಬ್ಬ ಹರಿದಿನ, ಮದುವೆ ಸೀಸನ್ನಲ್ಲಿ ಹೂವಿನ ಬೆಳೆಗೆ ಬೇಡಿಕೆ ಇರುತ್ತದೆ.
ಈ ವರ್ಷ ಮಳೆ ಇಲ್ಲದಿದ್ದರೂ ಸಹ ಕೆಲ ರೈತರು ಕಷ್ಟಪಟ್ಟು ಹೂವಿನ ಬೆಳೆ ತೆಗೆದಿದ್ದಾರೆ. ಆದ್ರೆ, ಹೆಚ್ಚಿದ ಬಿಸಿಲಿನ ತಾಪಮಾನದ
ಪರಿಣಾಮ ಹೂಬೆಳೆ ಹಾಳಾಗುತ್ತಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹೆದ್ದಾರಿ ಡಿವೈಡರ್ ಮೇಲೆ ಈ ವಿಶೇಷ ಹೂವಿನ ಗಿಡ ಮಾತ್ರ ನೆಡಲಾಗುತ್ತದೆ ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಅನೇಕ ರೈತರು ಹೂಬೆಳೆ ಉಳಿಸಿಕೊಳ್ಳಲು ಸೀರೆಯ ಹೊದಿಕೆಯ
ಮೊರೆ ಹೋಗಿದ್ದಾರೆ. ಹೀಗಾಗಿ, ಸರ್ಕಾರ ಹೂಬೆಳೆಗಾರರ ಸಂಕಷ್ಟ ಅರಿತು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ