ಚಿತ್ರದುರ್ಗ: ಬಬ್ಬೂರು ಗ್ರಾಮದಲ್ಲಿ ಮೂರೂ ನೀರು ಶುದ್ಧೀಕರಣ ಘಟಕಗಳು ಬಂದ್, ಕುಡಿಯುವ ನೀರಿಗೆ ಸಂಕಷ್ಟ

| Updated By: Ganapathi Sharma

Updated on: Oct 23, 2023 | 7:44 PM

ಬಬ್ಬೂರು ಗ್ರಾಮದ ಬೋವಿ ಕಾಲೋನಿ, ಎಕೆ ಕಾಲೋನಿ ಮತ್ತು ರಂಗನಾಥಸ್ವಾಮಿ ದೇಗುಲ ಬಳಿಯ ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ, ಜಿಲ್ಲಾಡಳಿತದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರದುರ್ಗ: ಬಬ್ಬೂರು ಗ್ರಾಮದಲ್ಲಿ ಮೂರೂ ನೀರು ಶುದ್ಧೀಕರಣ ಘಟಕಗಳು ಬಂದ್, ಕುಡಿಯುವ ನೀರಿಗೆ ಸಂಕಷ್ಟ
ನೀರು ಶುದ್ಧೀಕರಣ ಘಟಕಮ ಮುಚ್ಚಿರುವುದು.
Follow us on

ಚಿತ್ರದುರ್ಗ, ಅಕ್ಟೋಬರ್ 23: ಕೋಟೆನಾಡು ಚಿತ್ರದುರ್ಗ(Chitradurga) ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿ ಮೂರು ನೀರು ಶುದ್ಧೀಕರಣ ಘಟಕಗಳಿವೆ. ಆದ್ರೆ, ಮೂರೂ ಘಟಕಗಳೂ ಅನೇಕ ದಿನಗಳಿಂದ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿವೆ. ಹಬ್ಬದ ಸಂದರ್ಭದಲ್ಲೂ ನೀರಿನ ಘಟಕ ದುರಸ್ತಿಗೊಳಿಸದೇ ಇರುವುದರಿಂದ ಕುಡಿಯುವ ನೀರಿಗೆ (Drinking Water) ಸಮಸ್ಯೆಯಾಗಿದ್ದು, ಜನರಲ್ಲಿ ಆಕ್ರೋಶ ಮೂಡಿಸಿದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿನಿಧಿಸುವ ಹಿರಿಯೂರು ಕ್ಷೇತ್ರದಲ್ಲೇ ನೀರಿನ ಘಟಕಗಳು ಸ್ಥಗಿತ ಆಗಿದ್ದು ಜನ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಇನ್ನು ಇದೇ ಅಕ್ಟೋಬರ್ 6ರಂದು ಇದೇ ಬಬ್ಬೂರು ಬಳಿಯ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಬರ ಆವರಿಸಿದ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳೇ ಹೊಣೆ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು. ಆದ್ರೆ, ಸಿಎಂ ನಿಂತು ಭಾಷಣ ಮಾಡಿದ ಗ್ರಾಮದಲ್ಲೇ ಈಗ ನೀರಿನ ಸಮಸ್ಯೆ ಶುರುವಾಗಿದೆ.

ಬಬ್ಬೂರು ಗ್ರಾಮದ ಬೋವಿ ಕಾಲೋನಿ, ಎಕೆ ಕಾಲೋನಿ ಮತ್ತು ರಂಗನಾಥಸ್ವಾಮಿ ದೇಗುಲ ಬಳಿಯ ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ, ಜಿಲ್ಲಾಡಳಿತದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಗೋಲ್​​ಮಾಲ್

ಇನ್ನು ಶುದ್ಧ ಕುಡಿಯುವ ನೀರಿಗಾಗಿ ಗ್ರಾಮದ ಜನರು ಹಿರಿಯೂರು ಪಟ್ಟಣಕ್ಕೆ ತೆರಳುಂತಾಗಿದೆ. ಹೀಗಾಗಿ, ಬೈಕ್ ಮತ್ತು ವಾಹನಗಳು ಇಲ್ಲದವರು ನೀರಿಗಾಗಿ ಪರದಾಡುವಂತಾಗಿದೆ. ಅನೇಕ ದಿನಗಳಿಂದ ಗ್ರಾಮದ ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿಯಿದೆ. ಜಿಲ್ಲಾ ಪಂಚಾಯತಿ ಸಿಇಓ ಸೋಮಶೇಖರ್ ಅವರ ಗಮನಕ್ಕೆ ತಂದಾಗ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ರೂ, ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮ ಸೇರಿದಂತೆ ಜಿಲ್ಲೆಯ ವಿವಿದೆಡೆ ನೀರು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಜನ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನು ಬಿರು ಬೇಸಿಗೆಗಾಲದಲ್ಲಿ ಇನ್ಯಾವ ಸ್ಥಿತಿ ಕಾದಿದೆಯೋ ಎಂದು ಜನ ಆತಂಕಗೊಳ್ಳುವಂತಾಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತಿ ಅಧಿಕಾರಿಗಳು ಇನ್ನಾದ್ರೂ ಎಚ್ಚೆತ್ತುಕೊಂಡು ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ