ಚಿತ್ರದುರ್ಗ: ಮುರುಘಾ ಶ್ರೀ (Murugha Shree) ವಿರುದ್ಧ ಪಿತೂರಿ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದ ಮಾಜಿ ಶಾಸಕರೂ ಆಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ (S.K.Basavarajan)ಗೆ ಬೆಂಗಳೂರು ಹೈಕೋರ್ಟ್ (Karnataka High Court)ನಲ್ಲಿ ಜಾಮೀನು (Bail) ಮಂಜೂರು ಹಿನ್ನಲೆ ಇಂದು ಬಿಡುಗಡೆಯಾಗುತ್ತಿದ್ದಾರೆ. ನವೆಂಬರ್ 10ರಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಸವರಾಜನ್ ನ್ಯಾಯಾಂಗ ಬಂಧನದಲ್ಲಿದ್ದರು. ಈ ನಡುವೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಬೆಂಗಳೂರು ಹೈಕೋರ್ಟ್ನಲ್ಲಿ ಜಾಮೀನು ಮಂಜೂರಾದ ಹಿನ್ನಲೆ ಬಿಡುಗಡೆಯಾಗುತ್ತಿದ್ದಾರೆ. ಇಂದು ಹೈಕೋರ್ಟ್ನ ಅಧಿಕೃತ ಆದೇಶ ಪ್ರತಿ ಪಡೆದು ಜಿಲ್ಲಾ ಕೋರ್ಟ್ಗೆ ಸಲ್ಲಿಕೆ ಮಾಡಲಾಗುತ್ತಿದ್ದು, ಬಳಿಕ ಜಿಲ್ಲಾ ಕಾರಾಗೃಹದಿಂದ ಬಸವರಾಜನ್ ಅವರನ್ನು ಬಿಡುಗಡೆ ಮಾಡಲಾಗುತ್ತದೆ.
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಷಡ್ಯಂತ್ರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ಗೆ ಕೊನೆ ಜಾಮೀನು ಸಿಕ್ಕಿದೆ. ಡಿಸೆಂಬರ್ 22ರಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಿಂದ ಜಾಮೀನು ದೊರೆತಿತ್ತು. ಬಾಲಕಿಯರಿಗೆ ದೂರು ನೀಡಲು ಪ್ರಚೋದಿಸಿ ಮುರುಘಾಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿ ಬಸವಪ್ರಭು ಸ್ವಾಮೀಜಿ ಅವರು, ಬಸವರಾಜನ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜನ್‌ಗೆ ಚಿತ್ರದುರ್ಗದ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಮುರುಘಾಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ವಿರೋಧಿಸಿ ಚಿತ್ರದುರ್ಗದಲ್ಲಿ ಇಂದು ವಿವಿಧ ಮಠಾಧೀಶರಿಂದ ಧರಣಿ ನಡೆಯಲಿದೆ. ಮಠದ ಉಸ್ತುವಾರಿ ಬಸವಪ್ರಭು ಶ್ರೀ ನೇತೃತ್ವದಲ್ಲಿ ಧರಣಿ (Protest) ನಡೆಯಲಿದ್ದು, ಆಡಳಿತಾಧಿಕಾರಿ ನೇಮಕ ಆದೇಶ ರದ್ದುಗೊಳಿಸಲು ಸರ್ಕಾರಕ್ಕೆ ಆಗ್ರಹಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೆಳಗ್ಗೆ 10:30ಕ್ಕೆ ಧರಣಿ ಆರಂಭಗೊಳ್ಳಲಿದ್ದು, ವಿವಿಧ ಮಠಾಧೀಶರು, ಬಸವ ಕೇಂದ್ರಗಳ ಮುಖಸ್ಥರು ಭಾಗಿಯಾಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 am, Mon, 26 December 22