ಚಿತ್ರದುರ್ಗ: ಕದ್ದೊಯ್ಯುತ್ತಿದ್ದ ಹಸುವನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ರೈತರು, ವಿಡಿಯೋ ಇಲ್ಲಿದೆ

| Updated By: Rakesh Nayak Manchi

Updated on: Dec 18, 2023 | 10:53 AM

ಚಿತ್ರದುರ್ಗ ಜಿಲ್ಲೆಯ ಹೊಟ್ಟಪ್ಪನಹಳ್ಳಿಯಲ್ಲಿ ರೈತರೊಬ್ಬರು ಸಾಕಿದ ಹಸುವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ವಿಚಾರ ತಿಳಿದ ಗೋಪನಹಳ್ಳಿ ಗ್ರಾಮದ ರೈತರು ಸಿನಿಮೀಯ ಶೈಲಿಯಲ್ಲಿ ಹಸುವನ್ನು ರಕ್ಷಿಸಿದ್ದಾರೆ. ರೈತರು ದಾಳಿ ನಡೆಸುತ್ತಿದ್ದಂತೆ ಚಾಲಕ ಲಗೇಜ್ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ವಾಹನ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಚಿತ್ರದುರ್ಗ, ಡಿ.18: ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ಹಸುವನ್ನು ರೈತರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ (Chitradurga) ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಬಳಿ ನಡೆದಿದೆ. ಹೊಟ್ಟಪ್ಪನಹಳ್ಳಿಯಲ್ಲಿ ರೈತ ನಾಗರಾಜ್ ಎಂಬುವರ ಹಸುವನ್ನು ರಾತ್ರಿ ವೇಳೆ ಕದ್ದು ಲಗೇಜ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು.

ಈ ವಿಚಾರ ತಿಳಿದ ಗೋಪನಹಳ್ಳಿ ರೈತರು ತಕ್ಷಣ ಎಚ್ಚೆತ್ತು ವಾಹನದಲ್ಲಿ ಹಿಂಬಾಲಿಸಿದ್ದಾರೆ. ಈ ವೇಳೆ ಮತ್ತೊಂದು ಕಾರಿನ ಚಾಲಕ ಹಸು ರಕ್ಷಣೆಗೆ ಸಾಥ್ ನೀಡಿದ್ದು, ಈ ವೇಳೆ ಆರೋಪಿಯು ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಇದರಿಂದಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೂ ನಿಲ್ಲಿಸದ ಗೂಡ್ಸ್ ಚಾಲಕ ವಾಹನ ಸಹಿತ ತಪ್ಪಿಸಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಾಯಿ ದಾಳಿಗೆ 10 ವರ್ಷದ ಬಾಲಕ ಸಾವು

ಆದರೂ, ರೈತರು ಬೆನ್ನು ಬಿಡದ ಹಿನ್ನೆಲೆ ಲಗೇಜ್ ವಾಹನವನ್ನು ನಿಲ್ಲಿಸಿ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಜಾನುವಾರು ಕಳ್ಳರನ್ನು ಬಂಧಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಶನಿವಾರ ತಡರಾತ್ರಿ ರೈತರು ಕಳ್ಳರ ವಾಹನ ಚೇಸ್ ಮಾಡಿದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಡ್ಯದಲ್ಲಿ ತಲೆ ಎತ್ತಿದ ಅಕ್ರಮ ಕಸಾಯಿಖಾನೆ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ. ತೂಬಿನಕೆರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಅಕ್ರಮ ಶೆಡ್ ನಿರ್ಮಾಣ ಮಾಡಿ ಜಾನುವಾರುಗಳನ್ನು ಕೊಂದು ಅವುಗಳ ಮೂಳೆ, ಮಾಂಸ ಸಂಗ್ರಹ ಮಾಡಲಾಗುತ್ತಿದೆ. ಗುಜರಿ ವಸ್ತುಗಳ ಸಂಗ್ರಹದ ಹೆಸರಲ್ಲಿ ಗೋವುಗಳ ಮಾರಣಹೋಮ ನಡೆಸಲಾಗುತ್ತಿದೆ.

ಕೊಳೆತ ವಾಸನೆ ಹೆಚ್ಚಾಗ್ತಿದ್ದಂತೆ ಸ್ಥಳೀಯರಿಗೆ ಅನುಮಾನ ಉಂಟಾಗಿದ್ದು, ಭಜರಂಗದಳದ ಕಾರ್ಯಕರ್ತರು ಅಖಾಡಕ್ಕಿಳಿದು ಅಕ್ರಮ ಶೆಡ್ ಪತ್ತೆಹಚ್ಚಿದ್ದಾರೆ. ತೂಬಿನಕೆರೆ ಗ್ರಾಮದ ಲಿಂಗರಾಜು ಎಂಬುವರ ಜಮೀನನ್ನು ಮಂಡ್ಯದ ಮೂಲದ ವ್ಯಕ್ತಿ ಬಾಡಿಗೆ ಪಡೆದು ಶೆಡ್ ನಿರ್ಮಿಸಿ ಗೋವುಗಳ ಮೂಳೆ ಸಂಗ್ರಹ ಮಾಡುತ್ತಿದ್ದನು. ಈ ಮೂಳೆಗಳಿಂದ ಪೌಡರ್ ತಯಾರಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದ್ದು, ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Mon, 18 December 23