ಚಿತ್ರದುರ್ಗ: ಕಾಗೆ ಕಂಡೊಡನೆ ಒಂದಗಳು ಅನ್ನ ಹಾಕುವುದು ಸಹಜ ಧರ್ಮ. ಆದರೆ, ಕೋಟೆನಾಡಿನ ಅದೊಂದು ಗ್ರಾಮದಲ್ಲಿ ಮಾತ್ರ ಜನ ಭೀತಿಗೆ ಒಳಗಾಗುತ್ತಿದ್ದಾರೆ. ಇಡೀ ಗ್ರಾಮದ ಜನರನ್ನು ಅದೊಂದು ಕಾಗೆ(Crow) ಬೆಚ್ಚಿ ಬೀಳಿಸಿದೆ. ತನ್ನ ಪಾಡಿಗೆ ತಾನು ಹೊರಟ ಮಹಿಳೆಯ(Woman) ತಲೆಗೆ ಕುಕ್ಕಿದೆ. ಮನೆಗಳ ಕಿಟಕಿ ಗ್ಲಾಸು, ಬೈಕಿನ ಕನ್ನಡಿಗೆ ಹಾನಿ ಮಾಡಿದೆ. ಕಾಗೆ ಕಾಟದಿಂದ ಭೀತಿಗೊಳಗಾಗಿರುವ ಗ್ರಾಮದ ಜನರು ಸದ್ಯ ಈ ಸಂಕಷ್ಟದಿಂದ ಪಾರಾಗುವುದು ಹೇಗೆ ಎಂದು ಚಿಂತೆಗೆ ಸಿಲುಕಿದ್ದಾರೆ. ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಕಾಗೆಯೊಂದು ಬೀಡು ಬಿಟ್ಟಿದೆ. ವಿದ್ಯುತ್ ಕಂಬ, ಮರಗಳ ಮೇಲೆ ಮತ್ತು ಕೆಲ ಮನೆಗಳ (House) ಮೇಲೆ ಕೂಡುವ ಕಾಗೆ ವಿಚಿತ್ರವಾಗಿ ಅರಚುತ್ತದೆ. ಅಂತೆಯೇ ಹೋಗುವ ಬರುವ ಜನರ ತಲೆ ಕುಕ್ಕುತ್ತಿದೆ.
ಆರಂಭದಲ್ಲಿ ಕೆಲವರನ್ನು ಗುರಿಯಾಗಿಸಿ ಹೀಗೆ ಕಾಟ ಕೊಡುತ್ತಿದೆ ಎಂದು ಎಂದು ಭಾವಿಸಿದ್ದ ಜನರು ಪಾವಗಡದ ಶನಿದೇವರಿಗೆ ಹೋಗಿ ದರ್ಶನ ಪಡೆದು ಬಂದರು. ಆದರೆ, ಕಾಗೆ ಕಾಟ ಮಾತ್ರ ತಪ್ಪಿಲ್ಲ. ಬದಲಾಗಿ ಮಕ್ಕಳಿಂದ ಹಿಡಿದು ಮುದಕರವರೆಗೆ ಕಂಡ ಕಂಡವರಿಗೆ ಕಾಗೆ ಕುಕ್ಕುತ್ತಿದೆ. ಹೀಗಾಗಿ, ಮನೆಯಿಂದ ಹೊರ ಬರಲೂ ಜನ ಭಯಗೊಳ್ಳುವಂತಾಗಿದೆ ಎಂದು ಕಾಗೆ ಕಾಟಕ್ಕೊಳಗಾದ ಚಂದ್ರಶೇಖರ್ ಹೇಳಿದ್ದಾರೆ.
ತಲೆ ಮೇಲೆ ಟವಲ್ ಹೊದ್ದುಕೊಂಡೇ ಓಡಾಡುವ ದುಸ್ಥಿತಿ ನಿರ್ಮಾಣ ಆಗಿದೆ. ಕೆಲವರು ಮನೆಯಿಂದ ಹೊರಬರಲು ಛತ್ರಿಯ ಮೊರೆ ಹೋಗುವಂತಾಗಿದೆ ಎಂದು ಗ್ರಾಮಸ್ಥರಾದ ಅಶ್ವಿನಿ ಹೇಳಿದ್ದಾರೆ.
ಇನ್ನು ಸುಮಾರು ಮೂರು ತಿಂಗಳುಗಳಿಂದ ಗ್ರಾಮದ ಜನರು ಕಾಗೆ ಕಾಟದಿಂದ ತತ್ತರಿಸಿದ್ದಾರೆ. ಕಾಗೆ ಕುಕ್ಕುವುದು ಅಪಶಕುನ ಎಂದೇ ಭಾವಿಸುವ ಕಾರಣಕ್ಕೆ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಅಂತೆಯೇ ಅನೇಕ ಪೂಜೆ ಪುನಸ್ಕಾರಗಳನ್ನು ಮಾಡಿದರೂ ಪ್ರಯೋಜನ ಆಗಿಲ್ಲ. ಕೆಲವರು ಇಲಿ ಪಾಶಾಣ ಬೆರೆಸಿ ಕಾಗೆಗೆ ಆಹಾರವಿಟ್ಟರೂ ಕಾಗೆ ಬದುಕುಳಿದಿದೆ ಎಂಬ ಮಾತುಗಳು ಸಹ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಮತ್ತೊಂದು ಕಡೆ ಗ್ರಾಮದಲ್ಲಿ ಎರಡು ದಶಕದಿಂದ ಆಂಜನೇಯ ದೇಗುಲ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಪುರಾತನ ದೇಗುಲ ಮರುನಿರ್ಮಾಣಕ್ಕಾಗಿ ಆಂಜನೇಯ ಮೂರ್ತಿ ಸ್ಥಳಾಂತರಿಸಿ ದೇವಿಯ ದೇಗುಲದಲ್ಲಿಡಲಾಗಿದೆ. ಹೀಗಾಗಿ, ಆಂಜನೇಯನೇ ಕಾಗೆಯ ರೂಪದಲ್ಲಿ ಶನಿಯಾಗಿ ಗ್ರಾಮವನ್ನು ಕಾಡುತ್ತಿದ್ದಾನೆಂಬ ಅನುಮಾನ ಜನರಲ್ಲಿ ಮೂಡಿದೆ.
ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಓಬಳಾಪುರ ಒಳಗೊಂಡಿರುವ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಸಹಕರಿಸಬೇಕು. ಅನೇಕ ಸಲ ಶಾಸಕರ ಬಳಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾ.ಪಂ ಸದಸ್ಯ ಶಂಕರಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಓಬಳಾಪುರ ಗ್ರಾಮದಲ್ಲಿ ಮೂರು ತಿಂಗಳಿಂದ ಕಾಗೆ ಕಾಟ ಶುರುವಾಗಿದೆ. ಗ್ರಾಮದಲ್ಲಿ ಕಂಡ ಕಂಡವರ ಮೇಲೆ ಕಣ್ಣು ಹಾಕುತ್ತಿರುವ ಕಾಗೆ ತಲೆಗೆ ಕುಕ್ಕಿ ಗಾಯ ಮಾಡುತ್ತಿದೆ. ಹೀಗಾಗಿ, ಅಪಶಕುನದ ಭೀತಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಸದ್ಯ ಜಿಲ್ಲಾಡಳಿತ ಮತ್ತು ಸಂಬಂಧಿತರು ಕಾಗೆ ಕಾಟದಿಂದ ಗ್ರಾಮವನ್ನು ಮುಕ್ತಿಗೊಳಿಸಬೇಕಿದೆ ಎಂಬುವುದು ಗ್ರಾಮಸ್ಥರ ಮನವಿಯಾಗಿದೆ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ:
ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್
ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು
Published On - 8:39 am, Sat, 29 January 22