ಕುಡಿದ ಅಮಲಿನಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಚಾಲಕನನ್ನು (Drunk Lorry driver) ತಡೆದ ಪೊಲೀಸ್ರು ಲಾರಿ ಜಪ್ತಿ ಮಾಡಿದ್ದರು. ಆದ್ರೆ, ಪೊಲೀಸ್ರ ವಶದಲ್ಲಿದ್ದ ಲಾರಿ ಚಾಲಕ ಠಾಣೆಯಿಂದಲೇ ನಾಪತ್ತೆ ಆಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಾಗಾದ್ರೆ, ಈ ಘಟನೆ ನಡೆದಿದ್ದೆಲ್ಲಿ, ಕಥೆ ಏನು ಅಂತೀರಾ. ಈ ವರದಿ ನೋಡಿ. ಮಗ ನಾಪತ್ತೆಯಾದ ಸುದ್ದಿ ತಿಳಿದು ಆತಂಕಗೊಂಡಿರುವ ಕುಟುಂಬಸ್ಥರು. ಮಗ ನಾಪತ್ತೆಯಾಗಲು (Missing) ಪೊಲೀಸ್ರೆ ಕಾರಣ ಎಂದು ಕಿಡಿ. ನಾಪತ್ತೆಯಾದವನನ್ನು ಹುಡುಕಿಕೊಡುವಂತೆ ಎಸ್ಪಿ ಕಚೇರಿ ಎದುರು ಧರಣಿ ನಡೆಸಿ ಸಂಬಂಧಿಕರ ಆಗ್ರಹ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ (Holalkere police).
ಹೌದು, ಜೂನ್ 4ರ ರಾತ್ರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಠಾಣೆ ಪೊಲೀಸ್ರು ಲಾರಿಯೊಂದನ್ನು ಸೀಜ್ ಮಾಡಿದ್ದರು. ಲಾರಿ ಚಾಲಕ ಕುಡಿದ ಅಮಲಿನಲ್ಲಿ ಚಾಲನೆ ಮಾಡುತ್ತಿದ್ದಾನೆಂಬ ಆರೋಪದ ಮೇರೆಗೆ ಲಾರಿ ಸೀಜ್ ಮಾಡಿ ಠಾಣೆಗೆ ತಂದಿದ್ದರು. ಆದ್ರೆ, ಲಾರಿ ಚಾಲಕನಾದ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯ ಬಸವಂತಕುಮಾರ್ (36) ತನ್ನ ಬಳಿ ದಂಡ ಭರಿಸಲು ಹಣವಿಲ್ಲ ಎಂದು ಹೇಳಿದ್ದನು. ಅಂತೆಯೇ ರಾತ್ರಿಯಿಡೀ ಲಾರಿಯಲ್ಲೇ ಮಲಗಿದ್ದನು.
ಜೂನ್ 5ರ ಬೆಳಗ್ಗೆ ಎರಡು ಸಲ ಹೊಳಲ್ಕೆರೆ ಠಾಣೆಯೊಳಗೆ ಬಂದು ಪೊಲೀಸ್ರ ಬಳಿ ಮಾತನಾಡಿದ್ದನು. ಲಾರಿ ಮಾಲೀಕರು ಬಂದು ದಂಡ ಕಟ್ಟುತ್ತಾರೆಂದು ಒಮ್ಮೆ ಹೇಳಿದ್ದನು. ಮತ್ತೊಮ್ಮೆ 9 ಗಂಟೆ ಸುಮಾರಿಗೆ ತಿಂಡಿ ತಿಂದು ಬರುವುದಾಗಿ ಹೇಳಿ ಹೋಗಿದ್ದನು. ಬಳಿಕ ಲಾರಿ ಮಾಲೀಕ ಬಂದು ದಂಡದ ಹಣ ಪಾವತಿಸಿ ಲಾರಿ ಬಿಡಿಸಿಕೊಂಡು ಹೋಗಿದ್ದರು. ಆದ್ರೆ, ಆ ವೇಳೆಗಾಗಲೇ ಬಸವಂತಕುಮಾರ್ ಮಾತ್ರ ಅಲ್ಲಿಂದ ನಾಪತ್ತೆ ಆಗಿದ್ದನು.
ಹೀಗಾಗಿ, ಸುಮಾರು ಒಂದು ವಾರ ಕಾಲ ಹುಡುಕಿದ ಪೋಷಕರಿಗೆ ಬಸವಂತಕುಮಾರ್ ಸುಳಿವು ಸಿಕ್ಕಿಲ್ಲ. ಹೀಗಾಗಿ, ಹೊಳಲ್ಕೆರೆ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಬಸವಂತಕುಮಾರ್ ಕುಡಿದ ಅಮಲಿನಲ್ಲಿದ್ದ ಎಂದು ಕರೆ ತಂದಿದ್ದ ಪೊಲೀಸ್ರೇ ಮಗನ ನಾಪತ್ತೆಗೆ ಕಾರಣ. ಹೊಳಲ್ಕೆರೆ ಠಾಣೆಯಿಂದಲೇ ಬಸವಂತಕುಮಾರ್ ನಾಪತ್ತೆ ಆಗಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ್ ಅವ್ರನ್ನು ಕೇಳಿದ್ರೆ ಜೂನ್ 4ರ ರಾತ್ರಿ ಕುಡಿದ ಅಮಲಿನಲ್ಲಿ ಚಾಲಕ ಲಾರಿ ಓಡಿಸುತ್ತಿರುವ ಕಾರಣ ಲಾರಿ ಸೀಜ್ ಮಾಡಲಾಗಿದೆ. ಆದ್ರೆ, ಚಾಲಕನನ್ನು ಪೊಲೀಸ್ರು ಬಂಧಿಸಿಲ್ಲ. ದಂಡ ಕಟ್ಟಿ ಲಾರಿ ಬಿಡಿಸಿಕೊಂಡು ಹೋಗುವ ಪ್ರಕರಣವದು. ಬೆಳಗ್ಗೆ ಲಾರಿ ಮಾಲೀಕರು ಬಂದು ದಂಡದ ಹಣ ಪಾವತಿಸಿ ಲಾರಿ ಬಿಡಿಸಿಕೊಂಡು ಹೋಗಿದ್ದಾರೆ. ಜೂನ್ 5ರ ಬೆಳಗ್ಗೆ ಲಾರಿ ಚಾಲಕ ಬಸವಂತಕುಮಾರ್, ಹೊಳಲ್ಕೆರೆ ಠಾಣೆಯೊಳಗೆ ಎರಡು ಸಲ ಬಂದು ಹೊರಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಪ್ರಕರಣ ನಡೆದ ಕೆಲ ದಿನಗಳ ಬಳಿಕ ಪೋಷಕರು ನಾಪತ್ತೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಕುಡಿದು ಲಾರಿ ಚಲಾಯಿಸುತ್ತಿದ್ದ ಚಾಲಕ ನಾಪತ್ತೆಯಾದ ಘಟನೆ ನಡೆದಿದೆ. ಪೊಲೀಸ್ರು ಲಾರಿ ಜಪ್ತಿ ಮಾಡಿದ್ದೇ ಚಾಲಕ ನಾಪತ್ತೆ ಆಗಲು ಕಾರಣ ಆಯಿತಾ? ಠಾಣೆಗೆ ಬಂದಿದ್ದ ಚಾಲಕನಿಗೆ ಪೊಲೀಸ್ರಿಂದ ತೊಂದರೆ ಆಯಿತಾ? ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಅದೇನೆ ಇರಲಿ ಪೊಲೀಸ್ರು ಆದಷ್ಟು ಬೇಗ ನಾಪತ್ತೆಯಾದ ಲಾರಿ ಚಾಲಕನನ್ನು ಪತ್ತೆ ಮಾಡುವ ಕೆಲಸ ಮಾಡಬೇಕಿದೆ.
ಚಿತ್ರದುರ್ಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ