ಭೀಕರ ಬರಗಾಲಕ್ಕೆ ನೀರು-ಮೇವು ಸಿಗದೆ ಗೂಳೆ ಹೊರಟ ಕುರಿಗಾಹಿಗಳು;ಕ್ಯಾರೆ ಎನ್ನದ ಚಿತ್ರದುರ್ಗ ಜಿಲ್ಲಾಡಳಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 28, 2023 | 8:53 PM

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದೆ. ಬಿತ್ತಿದ ಬೆಳೆ ಭೂಮಿಯಲ್ಲೇ ಹುಸಿಯಾಗಿ ರೈತಾಪಿ ವರ್ಗ ಕಂಗಾಲಾಗಿ ಕುಳಿತಿದೆ. ಮತ್ತೊಂದು ಕಡೆ ನೀರು-ಮೇವು ಸಿಗದೆ ಕುರಿ-ಮೇಕೆ ಜಾನುವಾರುಗಳ ಸಮೇತ ಕುರಿಗಾಹಿಗಳು ಗೂಳೆ ಹೊರಟಿದ್ದಾರೆ. ಆದ್ರೆ, ಜಿಲ್ಲಾಡಳಿತ ಮಾತ್ರ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಬೂಬು ಹೇಳುತ್ತಿದೆ. 

ಭೀಕರ ಬರಗಾಲಕ್ಕೆ ನೀರು-ಮೇವು ಸಿಗದೆ ಗೂಳೆ ಹೊರಟ ಕುರಿಗಾಹಿಗಳು;ಕ್ಯಾರೆ ಎನ್ನದ ಚಿತ್ರದುರ್ಗ ಜಿಲ್ಲಾಡಳಿತ
ಚಿತ್ರದುರ್ಗ
Follow us on

ಚಿತ್ರದುರ್ಗ, ಅ.28: ರಣ ಭೀಕರ ಬರಗಾಲದಿಂದಾಗಿ ರೈತಾಪಿ ವರ್ಗ ಕಂಗಾಲಾಗಿ ಕುಳಿತಿದೆ. ಗುಡ್ಡ ಗಾಡು ಪ್ರದೇಶದಲ್ಲಿ ನೀರು ಮೇವಿಲ್ಲದೆ ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನಲೆ ಕುರಿ-ಮೇಕೆ ಜಾನುವಾರುಗಳನ್ನು ಬದುಕಿಸಿಕೊಳ್ಳಲು ಕುರಿಗಾಹಿಗಳು(Shepherds) ಗೂಳೆ ಹೊರಟಿದ್ದಾರೆ. ಹೌದು, ಕೋಟೆನಾಡು ಚಿತ್ರದುರ್ಗ(Chitradurga) ಜಿಲ್ಲೆಯಲ್ಲಿ ಜಾನುವಾರು ಸಾಕಣೆ ಕೃಷಿಯಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ಭಾಗದಲ್ಲಿ ಜಾನುವಾರು ಸಾಕಣೆಯೇ ಪ್ರಮುಖ ಕಸುಬಾಗಿದೆ. ಆದ್ರೆ, ಈ ವರ್ಷ ಭೀಕರ ಬರಗಾಲ ಎದುರಾದ ಪರಿಣಾಮ ಕಾಡು ಬರಿದಾಗಿದೆ.

ಕುರಿ-ಮೇಕೆ ಜಾನುವಾರುಗಳಿಗೆ ನೀರು-ಮೇವು ಸಿಗದ ದುಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದ ಕುರಿಗಾಹಿಗಳು ಕುರಿ-ಮೇಕೆ ಸಮೇತ ಬಳ್ಳಾರಿ ಮತ್ತು ಮಲೆನಾಡು ಸೇರಿದಂತೆ ಎಲ್ಲಿ ನೀರು-ಮೇವು ಕಾಣುತ್ತದೋ ಆಕಡೆಗೆ ಹೆಜ್ಜೆ ಹಾಕುತ್ತ ಸಾಗಿದ್ದಾರೆ. ಚಿತ್ರದುರ್ಗ-ಚಳ್ಳಕೆರೆ ರಸ್ತೆಗೆ ಹೋದರೆ ಸಾಕು ಪ್ರತಿನಿತ್ಯ ಗೂಳೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ನೀರು-ಮೇವಿನ ಕೊರತೆ ಮತ್ತು ಎಲ್ಲಾದರೂ ಮೇವು ಕಂಡಲ್ಲಿ ಕುರಿ-ಮೇಕೆ ಬಿಟ್ಟರೆ ಗಲಾಟೆ ಶುರುವಾಗುತ್ತದೆ. ಸರ್ಕಾರ ಕುರಿ-ಮೇಕೆ, ಜಾನುವಾರುಗಳಿಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ, ಬೇರೆ ಪ್ರದೇಶಗಳಿಗೆ ಗೂಳೆ ಹೋಗುತ್ತಿದ್ದೇವೆ ಎಂದು ಕುರಿಗಾಹಿ ಮಂಜುನಾಥ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಭೀಕರ ಬರಗಾಲ: ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟ್ ಆದ ಸರ್ಕಾರ, ಆಕ್ರೋಶಗೊಂಡ ರೈತರು

ಗೂಳೆ ಹೋಗುತ್ತಿರುವ ಬಗ್ಗೆ ಮಾಹಿತಿ ಇಲ್ಲ ಎಂದ ಜಿಲ್ಲಾಧಿಕಾರಿ

ಇನ್ನು ಭೀಕರ ಬರಗಾಲದಿಂದ ಕೃಷಿ ಬೆಳೆ ಬಹುತೇಕ ಹಾನಿಗೊಳಗಾಗಿದೆ. ಜಾನುವಾರು ಸಾಕಣೆ ಮೇಲೂ ಭಾರೀ ದುಷ್ಪರಿಣಾಮ ಉಂಟಾಗಿದೆ. ಹೀಗಾಗಿ, ಕುರಿ-ಮೇಕೆ ಸಮೇತ ಅನೇಕರು ಗೂಳೆ ಹೋಗುತ್ತಿದ್ದಾರೆ. ಆದ್ರೆ, ಸರ್ಕಾರ ಮಾತ್ರ ಗೂಳೆ ಹೋಗದ ರೀತಿ ಕ್ರಮ ಕೈಗೊಂಡಿದ್ದೇವೆ. ನೀರು-ಮೇವಿನ ಸಮಸ್ಯೆ ಉಂಟಾಗದಂತೆ ಸಕಲ ವ್ಯವಸ್ಥೆಗಳನ್ನು ನೀಡಿದ್ದೇವೆಂದು ಹೇಳುತ್ತಲೇ ಇದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವ್ರನ್ನು ಕೇಳಿದ್ರೆ ‘
ಗೂಳೆ ಹೋಗುತ್ತಿರುವ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎನ್ನುತ್ತಾರೆ. ಅದೇ ಪ್ರಶ್ನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರನ್ನು ಕೇಳಿದ್ರೆ, ಯಾರೂ ಗೂಳೆ ಹೋಗುತ್ತಿಲ್ಲ. ಆ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಭೀಕರ ಬರಗಾಲದಿಂದಾಗಿ ಒಂದು ಕಡೆ ಕೃಷಿಕ ವರ್ಗ ಹೈರಾಣಾಗಿದೆ. ಮತ್ತೊಂದು ಕಡೆ ಜಾನುವಾರು ಸಾಕಣೆಯನ್ನೇ ನಂಬಿಕೊಂಡಿದ್ದ ವರ್ಗವೂ ಗೂಳೆ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಆದ್ರೆ, ಜಿಲ್ಲಾಡಳಿತ ಮಾತ್ರ ಈ ಬಗ್ಗೆ ಮಾಹಿತಿಯೇ ಇಲ್ಲವೆಂದು ವಾದಿಸುತ್ತ ಸೈಲೆಂಟಾಗಿ ಕುಳಿತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ