ಚಿತ್ರದುರ್ಗ: ಮಕ್ಕಳ ರಕ್ಷಣೆ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪ ಹೊತ್ತ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಿಚಾರಣೆ ನಡೆಸಿ 7 ದಿನದಲ್ಲಿ ವರದಿ ನೀಡಲು ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸೂಚನೆ ನೀಡಿದ್ದಾರೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಮ್ ಅವರು ನೀಡಿರುವ ಪತ್ರವನ್ನು ಆಧರಿಸಿ ಈ ಸೂಚನೆ ನೀಡಲಾಗಿದೆ.
ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ನಂತರ ಮಠದಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬಂದಿದ್ದವು. ಮಠದ ಮಡಿಲು ಕೇಂದ್ರದಲ್ಲಿ ಅಕ್ರಮವಾಗಿ ಮಕ್ಕಳ ಪಾಲನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ದತ್ತು ಪ್ರಕ್ರಿಯೆ ಇಲ್ಲದೆ ಅಕ್ರಮವಾಗಿ ಮಕ್ಕಳನ್ನು ಸಾಗಣೆ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ ವಿಚಾರದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಕ್ಕಳ ರಕ್ಷಣಾ ಆಯೋಗವು ಸೂಚನೆ ನೀಡಿದೆ.
ಮಠದಲ್ಲಿ ರಾಜವಂಶಸ್ಥರಿಗೆ ಅಧಿಕಾರವಿರಲಿ: ಪರಶುರಾಮ ನಾಯಕ
ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ ಪಾಳೆಗಾರ ಮನೆತನದ ರಾಜವಂಶಸ್ಥರಾದ ಪರಶುರಾಮ ನಾಯಕ ಪ್ರತಿಕ್ರಿಯಿಸಿದ್ದು, ಮಠದ ಆಡಳಿತ ಮಂಡಳಿ ಮರುರಚನೆಯಾಗಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗದ ಮುರುಘಾಮಠವು ಎಲ್ಲ ಜಾತಿ ಮತ್ತು ಸಮುದಾಯಗಳಿಗೂ ಸೇರಿದ್ದು. ಸರ್ವ ಸಮಾಜಗಳ ಏಳ್ಗೆ ಬಯಸುವವರೇ ಪೀಠಾಧ್ಯಕ್ಷರಾಗಿ ಆಯ್ಕೆಯಾಗಬೇಕು. ಮಠದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳನ್ನು ಮತ್ತೊಮ್ಮೆ ರಚಿಸಬೇಕು. ರಾಜವಂಶಜರು ಈವರೆಗೆ ಮಠದಲ್ಲಿ ಯಾವುದೇ ಅಧಿಕಾರ ಕೇಳಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಠದ ಆಡಳಿತ ಮಂಡಳಿಯಲ್ಲಿ ರಾಜವಂಶಜರಿಗೆ ಅಧಿಕಾರ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಜೈಲು ಸೇರಿದ ನಂತರ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಶಿವಮೂರ್ತಿ ಮುರುಘಾ ಶರಣರ ಶಿಷ್ಯರು ಪ್ರಸ್ತುತ ಆಡಳಿತ ಚುಕ್ಕಾಣಿ ಹಿಡಿದ್ದಾರೆ. ಈ ಹಂತದಲ್ಲಿ ರಾಜವಂಶಜ ಪರಶುರಾಮ ನಾಯಕ ಮಠದ ಆಡಳಿತದ ಬಗ್ಗೆ ಪ್ರಸ್ತಾಪಿಸಿರುವುದು ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರಾಜವಂಶಜರಿಗೆ ಕಾಳಿಮಠದ ಋಷಿಕೇಶ ಶ್ರೀ ನೆರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
300 ವರ್ಷಗಳ ಹಿಂದೆ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕರು ಮಠ ಸ್ಥಾಪಿಸಿ, ಶಾಂತವೀರ ಮುರುಘಾ ಶ್ರೀಗಳನ್ನು ಪಟ್ಟಕ್ಕೆ ತಂದಿದ್ದರು. ನಂತರದ ದಿನಗಳಲ್ಲಿ ಮಠವು ಚಿತ್ರದುರ್ಗದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಬೆಳೆದಿತ್ತು.