
ಚಿತ್ರದುರ್ಗ, ಅಕ್ಟೋಬರ್ 08: ಆದೇಶ ಉಲ್ಲಂಘನೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ಗೆ (Sharan Pumpwell) ಹೈಕೋರ್ಟ್ 2 ಲಕ್ಷ ರೂ. ದಂಡ (fine) ವಿಧಿಸಿದೆ. ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ, ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್‌ವೆಲ್‌ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಸಿ ಶರಣ್ ಪಂಪ್ವೆಲ್ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಹಾಗಣಪತಿ ಶೋಭಾಯಾತ್ರೆಗೆ ಡಿಜೆ ನಿರ್ಬಂಧ: ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ, ಹಿಂದೂ ಸಂಘಟನೆಗಳ ಪ್ರತಿಭಟನೆ
ಸೆಪ್ಟೆಂಬರ್ 13 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಬೆಳಗ್ಗೆ 10:30ರಿಂದ 12:30ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಶರಣ್ ಪಂಪ್ವೆಲ್ ಅಂದಿನ ದಿನ 12:30ರ ಬದಲು 12:45ರವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದು, ಜೊತೆಗೆ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇ ಬಗ್ಗೆ ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಆದೇಶ ಉಲ್ಲಂಘಿಸಿದ್ದಕ್ಕೆ ಇದೀಗ ಹೈಕೋರ್ಟ್ ದಂಡ ವಿಧಿಸಿ ಆದೇಶಿಸಿದೆ.
ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ಗೆ ಜಿಲ್ಲಾ ಪ್ರವೇಶಿಸದಂತೆ ನಿರ್ಬಂಧಿಸಿದ್ದಕ್ಕೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡಿದ್ದರು. ಶೋಭಾಯಾತ್ರೆಗೆ ತಂದಿದ್ದ ಡಿಜೆ ವಾಹನದ ಟ್ಯಾಂಕ್ಗೆ ಪೊಲೀಸರು ನೀರೆರೆದು ಮರಳಿ ಕಳಿಸಲು ಯತ್ನಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಪೊಲೀಸರು 6 ಡಿಜೆ ಮಾದರಿ ಸೌಂಡ್ ಸಿಸ್ಟಮ್ಗೆ ಅನುಮತಿ ನೀಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಹಿಂದೂ ಮಹಾಗಣಪತಿಯ ಡಿಜೆ ಜಪ್ತಿ, ಡೀಸೆಲ್ ಟ್ಯಾಂಕಿಗೆ ನೀರು ಸುರಿದ್ರಾ ಪೊಲೀಸ್ರು?
ಈ ವೇಳೆ ಪ್ರತಿಕ್ರಿಯಿಸಿದ್ದ ಶರಣ್ ಪಂಪ್ವೆಲ್ ಹೈಕೋರ್ಟ್ ಮೊರೆ ಹೋಗಿ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಬರಲು ಅನುಮತಿ ಪಡೆದಿದ್ದೇನೆ. ರಾಜ್ಯ ಸರ್ಕಾರ ಏಕೆ ಹಿಂದೂ ಧಾರ್ಮಿಕ ಆಚರಣೆ, ಹಬ್ಬಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.