ಚಿತ್ರದುರ್ಗ, ಜು.11: ಮುರುಘಾಮಠ(Murugha Matha)ದಲ್ಲಿದ್ದ ಮುರುಘಾ ಶ್ರೀ ಬೆಳ್ಳಿ ಪುತ್ಥಳಿಯನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ಚಿತ್ರದುರ್ಗ(Chitradurga)ದ ಮುರುಘಾ ಮಠದಲ್ಲಿ ಮಾತನಾಡಿದ ದಾವಣಗೆರೆಯ ವಿರಕ್ತಮಠದ ಬಸವಪ್ರಭುಶ್ರೀ, ‘ಜೂ.26 ರಿಂದ ಮಠದ ದರ್ಬಾರ್ ಹಾಲ್ನಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್ನಲ್ಲಿದ್ದ 20 ಲಕ್ಷ ಮೌಲ್ಯದ 20 ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳ್ಳತನ ಆಗಿದೆ. ಈ ಕುರಿತು ಆಡಳಿತ ಮಂಡಳಿ ಸದಸ್ಯ ಬಸವಕುಮಾರಶ್ರೀ ಪೊಲೀಸರಿಗೆ ದೂರು ನೀಡುತ್ತಾರೆ ಎಂದರು.
ಇನ್ನು ಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರಶ್ರೀ ಮಾತನಾಡಿ, ‘ನಿನ್ನೆ(ಬುಧವಾರ) ಮುರುಘಾಶ್ರೀಗಳ ಬೆಳ್ಳಿ ಪುತ್ಥಳಿ ಕಳವು ಬಗ್ಗೆ ಬಸವಪ್ರಭುಶ್ರೀಗಳು ಮಾಹಿತಿ ನೀಡಿದರು. ನಾವು ಕೂಡಲೇ ಮಠದ ಆಡಳಿ ಮಂಡಳಿ ಅಧ್ಯಕ್ಷರಿಗೆ ತಿಳಿಸಿದೆವು. ಜೊತೆಗೆ ನಿವೃತ್ತ ಐಎಎಸ್ ಅಧಿಕಾರಿ ಆಗಿರುವ ಶಿವಯೋಗಿ ಕಳಸದ್ ಅವರಿಗೆ ಮಾಹಿತಿ ನೀಡಿದೆವು. ಕಳಸದ್ ಸೂಚನೆಯಂತೆ ಆಂತರಿಕ ತನಿಖೆ ನಡೆಸಿದ್ದೇವೆ. ಬೆಳ್ಳಿ ಪುತ್ಥಳಿ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದು ಮಧ್ಯಾಹ್ನ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸ್ ತನಿಖೆಯಿಂದ ಬೆಳ್ಳಿ ಪುತ್ಥಳಿ ಕಳ್ಳತನ ಕೇಸ್ ಬಯಲಾಗಬೇಕಿದೆ ಎಂದು ಸ್ಪಷ್ಟನೆ ನೀಡಿದ್ದರು.
ಅದರಂತೆ ಮಧ್ಯಾಹ್ನ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರಶ್ರೀಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಿಎನ್ಎಸ್ 305 ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಕುರಿತು ಕೂಡಲೇ ತನಿಖೆ ನಡೆಸಿ, ಪುತ್ಥಳಿ ಕದ್ದ ಕಳ್ಳರನ್ನು ಬಂಧಿಸಲು ಮನವಿ ಮಾಡಿದ್ದಾರೆ. ಇನ್ನು ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭ ಮಾಡಿದ್ದು, ಮುರುಘಾಮಠಕ್ಕೆ ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಸಿಪಿಐ ಮುದ್ದುರಾಜ್ ಭೇಟಿ ನೀಡಿದ್ದಾರೆ. ಜೊತೆಗೆ ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ತಂಡ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ:ಮುರುಘಾಶ್ರೀ ಪೋಕ್ಸೋ ಕೇಸ್: ಮನೆಯಿಂದ ನಾಪತ್ತೆಯಾಗಿದ್ದ ಸಂತ್ರಸ್ತೆ ಒಡನಾಡಿ ಸಂಸ್ಥೆಯಲ್ಲಿ ಪತ್ತೆ
ಮುರುಘಾ ಶ್ರೀ ಅವರ ಜಾಮೀನು ರದ್ದುಗೊಳಿಸಿ, ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ 23 ರಂದು ಆದೇಶಿಸಿತ್ತು. ಜೊತೆಗೆ ವಿಶೇಷ ಕೋರ್ಟ್ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ‘ಸುಪ್ರೀಂ’ ಸೂಚಿಸಿತ್ತು. ಇನ್ನು 4 ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಬಂಧನದ ಅವಧಿಯನ್ನು ಇನ್ನೆರಡು ತಿಂಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Thu, 11 July 24